ಧಾರವಾಡ: ತಮ್ಮ ಪ್ರಿಯಕರರ ಜೊತೆ ಸೇರಿಕೊಂಡು ಹೆತ್ತ ತಾಯಂದಿರೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಗಂಡನ ಮನೆಯವರಿಗೆ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣ ಸಂಬಂಧ ತಾಯಂದಿರು ಮತ್ತು ಇಬ್ಬರು ಪುರುಷರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತಾಯಂದಿರು ತಮ್ಮಿಬ್ಬರ ಪ್ರಿಯಕರರೊಂದಿಗೆ ಸೇರಿಕೊಂಡು ತಮ್ಮ ಆರು ಜನ ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕಿಡ್ನಾಪ್ ಕೇಸ್ ಬೇಧಿಸಿ ಆರು ಮಕ್ಕಳನ್ನು ಧಾರವಾಡ ವಿದ್ಯಾಗಿರಿ ಪೊಲೀಸರು ರಕ್ಷಿಸಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಆರೋಪಿ ತಾಯಂದಿರಾದ ಪ್ರಿಯಾಂಕಾ, ರೇಷ್ಮಾ ಅಲಿಯಾಸ್ ರಶ್ಮಿ ಅವರ ಸ್ನೇಹಿತರಾದ ಸುನೀಲ್ ಮತ್ತು ಮುತ್ತುರಾಜ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಹು-ಧಾ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾಹಿತಿ (ETV Bharat) ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಕ್ಕಳನ್ನು ಹಾಸ್ಟೆಲ್ಗೆ ಸೇರಿಸುವುದಾಗಿ ಕರೆದುಕೊಂಡು ನ.7 ರಿಂದ ಪ್ರಿಯಾಂಕಾ ಮತ್ತು ರೇಷ್ಮಾ ಹೋಗಿದ್ದರು. ಪ್ರಕರಣ ಸಂಬಂಧ 8 ಜನ ನಾಪತ್ತೆಯಾಗಿದ್ದಾರೆ ಎಂದು ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿ 6 ಜನ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ದೂರು ದಾಖಲಿಸಿಕೊಂಡ ವಿದ್ಯಾಗಿರಿ ಪೊಲೀಸರು ಅವರ ಶೋಧನೆಗೆ ಮುಂದಾಗಿದ್ದರು. ಆರು ಜನ ಮಕ್ಕಳು ನಾಪತ್ತೆಯಾಗಿದ್ದರಿಂದ ಈ ಪ್ರಕರಣವು ಧಾರವಾಡ ಸುತ್ತ - ಮುತ್ತ ಬಹಳ ಆತಂಕ ತರಿಸಿತ್ತು. ನಿರಂತರ ಹುಡುಕಾಟದ ವೇಳೆ ಬೆಂಗಳೂರಿನಲ್ಲಿ ಈ ಪ್ರಕರಣದ ಬಗ್ಗೆ ಸ್ವಲ್ಪ ಮಾಹಿತಿ ಸಿಕ್ಕಿತು. ಇಬ್ಬರು ತಾಯಂದಿರು ಸೇರಿದಂತೆ 8 ಜನ ಓಡಾಡುತ್ತಿರುವ ಮಾಹಿತಿ ಲಭಿಸಿತು. ಇದೇ ಜಾಡು ಹಿಡಿದು ನಮ್ಮ ತಂದ ಬೆಂಗಳೂರಿಗೆ ತೆರಳಿತ್ತು. ಈ ನಡುವೆ ಹೈದರಾಬಾದ್, ಗೋವಾ ಮತ್ತು ಮಹಾರಾಷ್ಟ್ರದಲ್ಲಿಯೂ ಇವರಿಗಾಗಿ ಶೋಧನೆ ನಡೆಸಲಾಗಿತ್ತು. ಆದರೆ, ನಿನ್ನೆ ಕಾಣೆಯಾದ ಮಕ್ಕಳ ಕುಟುಂಬಕ್ಕೆ ಒಂದು ಕರೆ ಬಂದಿದ್ದು, ಹಣಕ್ಕೆ ಬೇಡಿಕೆ ಇಟ್ಟಿದ್ದರು.
ತಮ್ಮ ಪ್ಲಾನ್ ಪ್ರಕಾರ ಸ್ನೇಹಿತರಾದ ಸುನೀಲ್ ಮತ್ತು ಮುತ್ತುರಾಜ್ ಹಾಗೂ ಮಕ್ಕಳ ಸಮೇತ ನಾಪತ್ತೆಯಾಗಿದ್ದ ಮಹಿಳೆಯರು ಗಂಡನ ಮನೆಯವರಿಗೆ ಫೋನ್ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮಕ್ಕಳು ಬೇಕಾದರೆ 10 ಲಕ್ಷ ನಮ್ಮ ಖಾತೆಗೆ ಜಮಾಡುವಂತೆ ಬೇಡಿಕೆ ಇಟ್ಟಿದ್ದರು. ಹಣ ಜಮಾ ಮಾಡದ್ದಿದ್ದರೆ ಮಕ್ಕಳನ್ನು ಯಾರಿಗಾದರೂ ಕೊಟ್ಟು ನೇಪಾಳದತ್ತ ಹೋಗುವುದಾಗಿ ಹೆದರಿಕೆಯೂ ಹಾಕಿದ್ದರು. ಹಣಕ್ಕೆ ಬೇಡಿಕೆ ಬರುತ್ತಿದ್ದಂತೆಯೇ ಪೊಲೀಸರು ತಮ್ಮ ಶೋಧ ಚುರುಕುಗೊಳಿಸಿದ್ದರು. ಆರೋಪಿಗಳು ಮಕ್ಕಳೊಂದಿಗೆ ಬೆಂಗಳೂರಿನಲ್ಲಿರುವ ಮಾಹಿತಿ ಇತ್ತು. ಆ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 6 ಮಕ್ಕಳನ್ನು ರಕ್ಷಿಸಲಾಗಿದ್ದು, ಪ್ರಿಯಾಂಕಾ ಹಾಗೂ ರೇಷ್ಮಾ ಮತ್ತು ಅವರ ಪ್ರಿಯಕರರಾದ ಸುನೀಲ್ ಮತ್ತು ಮುತ್ತುರಾಜ್ ಈ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಗಂಡನನ್ನು ಕಳೆದುಕೊಂಡಿದ್ದ ಪ್ರಿಯಂಕಾ, ಶಿಕಾರಿಪುರ ಮೂಲದ ಮುತ್ತುರಾಜ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದರು. ಗಂಡ ಇದ್ದರೂ ರೇಷ್ಮಾ, ಸುನೀಲ್ ಜೊತೆ ಸಂಬಂಧ ಹೊಂದಿದ್ದರು. ಇವರು ಮದುವೆಗೂ ಮುನ್ನ ಪ್ರೇಮಿಗಳಾಗಿದ್ದರು ಎಂಬುವುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಆಗಾಗ ಮನೆ ಬಿಡುವುದಾಗಿ ಗಂಡನ ಮನೆಯವರಿಗೆ ಬೆದರಿಸುತ್ತಿದ್ದರು. ಆದರೆ, ಮಕ್ಕಳಿರುವ ಕಾರಣಕ್ಕೆ ಏನೂ ಮಾಡುವುದಿಲ್ಲ ಎಂದು ಮನೆಯವರು ಸುಮ್ಮನಾಗಿದ್ದರು. ಆದರೆ, ಠಾಣೆಗೆ ಕರೆದು ಕರೆದು ವಿಚಾರಣೆ ನಡೆಸಿದಾಗ ಇವರ ಅಸಲಿ ಕತೆ ಹೊರಬಿದ್ದಿದೆ. ಇದು ಹಳೆಯ ಪರಿಚಯ ಮತ್ತು ಸ್ನೇಹದ ಹಿನ್ನೆಲೆಯಲ್ಲಿ ಮಾಡಿರುವ ಕೃತ್ಯವೆಂದು ತನಿಖೆಯಿಂದ ತಿಳಿದು ಬಂದಿದೆ. ಸದ್ಯ ನಾಲ್ವರ ವಿಚಾರಣೆ ಮುಂದುವರೆದಿದ್ದು, ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಸೇರಿಸಲಾಗಿದೆ ಎಂದು ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಥಣಿ: ಕಾರಿನಲ್ಲಿ ಬಂದು ಇಬ್ಬರು ಮಕ್ಕಳನ್ನು ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು- ಸಿಸಿಟಿವಿಯಲ್ಲಿ ಕೃತ್ಯ ಸೆರೆ