ಚಿಕ್ಕೋಡಿ (ಬೆಳಗಾವಿ) :ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶದಲ್ಲಿ ನಲವತ್ತಕ್ಕೂ ಹೆಚ್ಚು ಕುಟುಂಬಗಳು ಕೃಷ್ಣಾ ನದಿ ನೀರಿನ ನಡುಗಡ್ಡೆಯಲ್ಲಿ ಸಿಲುಕಿ ಪ್ರಾಣಭಯದಲ್ಲೇ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನಿವಾರ್ಯವಾಗಿ ಬ್ಯಾರಲ್ ಮೇಲೆ ಸಂಚಾರ ಬೆಳೆಸಿ ಜಾನುವಾರುಗಳಿಗೆ ಮೇವು ಹಾಗೂ ಗ್ರಾಮಕ್ಕೆ ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ.
ಹಲವು ವರ್ಷಗಳಿಂದ ನೆರೆ ಸಂತ್ರಸ್ತರಿಗೆ ಸರ್ಕಾರಗಳು ಪುನರ್ವಸತಿ ಕಲ್ಪಿಸುವಲ್ಲಿ ವಿಳಂಬ ಮಾಡುತ್ತಿರುವುದರಿಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ನಾವು ಹೊರಗೆ ಬರುವುದಿಲ್ಲ, ನೆರೆ ಬಂದಾಗ ಮಾತ್ರ ನೀವು ನಮ್ಮ ಮನೆಗೆ ಬರುತ್ತೀರಿ. ಯಾವುದೇ ಕಾರಣಕ್ಕೂ ನಾವು ಹೊರಗಡೆ ಬರುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನದಿ ತೀರದ ಹಲವು ಗ್ರಾಮಗಳಿಗೆ ಪುನರ್ವಸತಿ ಇಲ್ಲದೇ ಇರುವುದರಿಂದ ಪ್ರತಿಬಾರಿಯೂ ನೆರೆ ಬಂದಾಗ ಸಂತ್ರಸ್ತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂಜಾಗ್ರತಾ ಕ್ರಮವಾಗಿ ಅಥಣಿ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಹೊರ ತರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಥಣಿ ತಹಶೀಲ್ದಾರ್ ವಾಣಿ ಯು ಈಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಮಾತನಾಡಿ, ಹುಲಗಬಾಳ ಗ್ರಾಮ ಮಾಂಗ ವಸತಿ ನಡುಗಡ್ಡೆಯಾಗಿದೆ. ಇಲ್ಲಿ ಐವತ್ತಕ್ಕೂ ಹೆಚ್ಚು ಕುಟುಂಬಗಳು ಇರುವುದರಿಂದ ಅವರನ್ನು ನಾವು ಮನವೊಲಿಸಿ ಇವತ್ತು ಸಂಜೆ ಹೊರಗೆ ತರುತ್ತೇವೆ ಎಂದು ತಿಳಿಸಿದ್ದಾರೆ.
ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಯ ಮೇಲೆ ತೀವ್ರ ನಿಗಾ :ಬೆಳಗಾವಿ ಜಿಲ್ಲೆಯ ನದಿಗಳಿಂದ ಆಲಮಟ್ಟಿ ಜಲಾಶಯಕ್ಕೆ 1.80 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಆಲಮಟ್ಟಿಯಿಂದ ಇಂದಿನಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಗೊಳಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಬೆಳಗಾವಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಲ ಸಂಪನ್ಮೂಲ ಹಾಗೂ ಕಂದಾಯ ಇಬ್ಬರು ಅಧಿಕಾರಿಗಳು ಕೋಯ್ನಾ ಜಲಾಶಯದಲ್ಲಿ ಇರುತ್ತಾರೆ. ಜತ್ರಾಟ್ ಬ್ಯಾರೇಜ್ನಲ್ಲಿಯೂ ರಾಜ್ಯದ ಒಬ್ಬ ಅಧಿಕಾರಿ ಇರುತ್ತಾರೆ. ಕೊಲ್ಹಾಪುರದ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.
ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಯ ಮೇಲೆ ನಿಗಾ ವಹಿಸಲಾಗಿದೆ. ರಾಜಾಪುರದಿಂದ 1 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿಯಿಂದ 1.5 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಘಟಪ್ರಭಾ ಜಲಾಶಯದಲ್ಲಿ ಪ್ರತಿದಿನ ಮೂರು ಟಿಎಂಸಿ ನೀರು ಸಂಗ್ರಹ ಆಗುತ್ತಿದೆ. ಇಂದು ಸಂಜೆಯಿಂದ ಘಟಪ್ರಭಾ ನದಿಯಿಂದ ನೀರು ಬಿಡುಗಡೆ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಹೇಳಿದರು.
ಲೋಳಸೂರು ಬ್ರಿಡ್ಜ್ ಬಳಿ 35 ಸಾವಿರ ಕ್ಯೂಸೆಕ್ ನೀರು ಹರಿದು ಹೋಗಲಿದೆ. ಆಲಮಟ್ಟಿಯಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜೊತೆಗೆ ಇಂದು ಸಭೆ ಮಾಡಿದ್ದೇವೆ. ಕೃಷ್ಣ ನದಿ ವ್ಯಾಪ್ತಿಯಲ್ಲಿ ಯಾವುದೇ ತೊಂದರೆ ಇಲ್ಲ. ಒಂದೆರಡು ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ತಹಶಿಲ್ದಾರ್ಗಳಿಗೆ ಸ್ಥಳಕ್ಕೆ ಹೋಗಲು ಸೂಚನೆ ನೀಡಲಾಗಿದೆ.