ಬೆಂಗಳೂರು: "ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಪತನಗೊಳಿಸಲು ಅಕ್ರಮವಾಗಿ ಸಂಗ್ರಹಿಸಿರುವ 1000 ಕೋಟಿ ಕಪ್ಪುಹಣವನ್ನು ಪತ್ತೆಹಚ್ಚಿ ಅದನ್ನು ವಶಪಡಿಸಿಕೊಳ್ಳಬೇಕು. ಹಾಗೂ ಈ ಕಪ್ಪುಹಣ ಸಂಗ್ರಹಿಸಿರುವವರ ಮೇಲೆ ಕೂಡಲೇ ಕಾನೂನು ರೀತಿಯ ಕ್ರಮ ಜರುಗಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕು" ಎಂದು ಕೋರಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಸೆ.29ರಂದು ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರಾದ ಬಸವರಾಜ ಪಾಟೀಲ್ ಯತ್ನಾಳ್, ಜಿ.ಎಂ. ಸಿದ್ದೇಶ್ವರ್, ಸಿ.ಕೆ. ಪ್ರತಾಪ್ ಸಿಂಹ, ಬಿ.ಪಿ. ಹರೀಶ್, ಹಾಗೂ ಇನ್ನಿತರರು ದಾವಣಗೆರೆಯ ಜಿ.ಎಂ.ಐ.ಟಿ. ವಸತಿಗೃಹದಲ್ಲಿ ಸಭೆ ಸೇರಿ, ರಾಜ್ಯದ ಅನೇಕ ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಸಭೆಯ ನಂತರ ಬಸವರಾಜ ಪಾಟೀಲ್ ಯತ್ನಾಳ್ ಸುದ್ದಿಗೋಷ್ಠಿಯಯಲ್ಲಿ, ರಾಜ್ಯದ ತಮ್ಮ ಪಕ್ಷದ ಕೆಲವು ನಾಯಕರು 1000 ಕೋಟಿ ಹಣವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಆ ಹಣವನ್ನು ಬಳಸಿ ಹಾಲಿ ಇರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಪತನಗೊಳಿಸಿ ತಾವು ಮುಖ್ಯಮಂತ್ರಿಯಾಗಲು ಸಂಚು ರೂಪಿಸಿದ್ದಾರೆ. ಸದರಿ ಹಣವನ್ನು ಬಳಸಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿಸಿ ಸರ್ಕಾರವನ್ನು ಪತನಗೊಳಿಸಲು ಸಂಚು ರೂಪಿಸುತ್ತಿರುವುದಾಗಿ ತಿಳಿಸಿದ್ದಾರೆ" ಎಂದು ದೂರಿದ್ದಾರೆ.
"2024ರ ಡಿಸೆಂಬರ್ನಲ್ಲಿ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಉಂಟಾಗಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದಿದ್ದಾರೆ. ಸಾವಿರ ಕೋಟಿ ರೂಪಾಯಿ ಹಣ ಸಂಗ್ರಹಿಸಿ ಇಟ್ಟುಕೊಂಡಿರುವವರು ಯಾರು ಎಂದು ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಅವರು ನೀವೇ ಊಹೆ ಮಾಡಿ ಎಂದು ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೇ ಹಣ ಸಂಗ್ರಹಿಸಿರುವ ನಾಯಕರ ಮನೆಯಲ್ಲಿ ನೋಟು ಎಣಿಸುವ ಮೆಷಿನ್ ಪತ್ತೆಯಾಗಿತ್ತು ಎಂದು ಹೇಳಿದ್ದಾರೆ. ಸಭೆಯ ನಂತರ ಯತ್ನಾಳ್ ಇಂತಹ ಹೇಳಿಕೆ ನೀಡಿರುವುದನ್ನು ನೋಡಿದರೆ ಈ ಬಗ್ಗೆ ಸಭೆಯಲ್ಲಿದ್ದ ಎಲ್ಲ ನಾಯಕರಿಗೂ ಗೊತ್ತಿದ್ದು, ಚರ್ಚೆ ಮಾಡಿ ಮಾಧ್ಯಮಗಳಿಗೆ ತಿಳಿಸಲು ಸಹಮತ ವ್ಯಕ್ತಪಡಿಸಿರುವುದು ಕಾಣುತ್ತಿದೆ" ಎಂದಿದ್ದಾರೆ.
ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳನ್ನು ನೀಡಿ 5 ವರ್ಷಗಳ ಕಾಲ ಸರ್ಕಾರ ನಡೆಸಲು ಅವಕಾಶ ನೀಡಿದ್ದಾರೆ. ಅದರಂತೆ ರಾಜ್ಯದಲ್ಲಿ ಜನಪರವಾದಂತಹ ಸರ್ಕಾರವನ್ನು ಕಾಂಗ್ರೆಸ್ ಪಕ್ಷ ನಡೆಸುತ್ತಿದ್ದರೂ, ಅಧಿಕಾರವಿಲ್ಲದೆ ಹತಾಶರಾಗಿರುವ ಕೆಲವು ಬಿಜೆಪಿ ನಾಯಕರುಗಳು ಭ್ರಷ್ಟಹಣದಿಂದ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಸಂಚು ರೂಪಿಸಿರುವುದು ಯತ್ನಾಳ್ ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಇದರಿಂದ ಒಂದು ಕಡೆ ಜನಾದೇಶಕ್ಕೆ ಅಪಚಾರ ಮತ್ತೊಂದು ಕಡೆ ಭ್ರಷ್ಟ ಹಾಗೂ ಅಕ್ರಮ ಹಣ ವರ್ಗಾವಣೆ ನಡೆಯುತ್ತಿದೆ. ಈ ರೀತಿ ಅಕ್ರಮವಾಗಿ ಹಣ ಸಂಗ್ರಹಿಸಿರುವವರು ಭಾರತೀಯ ನ್ಯಾಯ ಸಂಹಿತೆಯ (B.N.S.) ಆದಾಯ ತೆರಿಗೆ ಅಧಿನಿಯಮ, ಅಕ್ರಮ ಹಣ ವರ್ಗಾವಣೆ ಅಧಿನಿಯಮ ಮುಂತಾದ ವಿಧಿಗಳ ಅಡಿಯಲ್ಲಿ ಅಕ್ರಮ ಎಸಗಿರುವುದು ಸ್ಪಷ್ಟವಾಗಿರುತ್ತದೆ" ಎಂದು ದೂರಿದ್ದಾರೆ.
ಇದನ್ನೂ ಓದಿ:'ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯಲ್ಲ': ಖರ್ಗೆ ಹೇಳಿಕೆ - J K campaigning