ಕರ್ನಾಟಕ

karnataka

ETV Bharat / state

ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಮಾದರಿ ನೀತಿ ಸಂಹಿತೆ ಜಾರಿ! - lokasabha election

ಇಂದು ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗುವುದರ ಜೊತೆ ನೀತಿ ಸಂಹಿತೆ ಕೂಡ ಜಾರಿಗೆ ಬರಲಿದೆ. ಮುಂದಿನ ಎರಡು ತಿಂಗಳ ಕಾಲ ಆಡಳಿತ ವ್ಯವಸ್ಥೆಯು ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯಲಿದೆ.

Model code of conduct
ಮಾದರಿ ನೀತಿ ಸಂಹಿತೆ ಜಾರಿ

By ETV Bharat Karnataka Team

Published : Mar 16, 2024, 11:01 AM IST

Updated : Mar 16, 2024, 11:58 AM IST

ಬೆಂಗಳೂರು:ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ಕೇಂದ್ರ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸಲಿದೆ. ಚುನಾವಣಾ ದಿನ ಘೋಷಣೆಯಾದ ಬೆನ್ನಲ್ಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಹಾಗಾಗಿ, ಚುನಾವಣೆ ಮುಗಿದು ಫಲಿತಾಂಶ ಬರುವವರೆಗೂ ಅಂದರೆ ಸುಮಾರು ಎರಡು ತಿಂಗಳ ಕಾಲ ಈ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ನೀತಿ ಸಂಹಿತೆ ಜಾರಿ ಬಳಿಕ ಜನಪ್ರತಿನಿಧಿಗಳ ಹಿಡಿತ ಕಳೆದುಕೊಳ್ಳುವ ಆಡಳಿತ ಯಂತ್ರ, ಅಧಿಕಾರಿಗಳ ತೆಕ್ಕೆಗೆ ಬರಲಿದೆ. ಇದರಿಂದಾಗಿ ಜಿಲ್ಲಾಡಳಿತ ಒಳಗೊಂಡು ರಾಜ್ಯದ ಇಡೀ ಆಡಳಿತ ಯಂತ್ರ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯಲಿದೆ.

ಚುನಾವಣೆ ಘೋಷಣೆ ನಿರೀಕ್ಷೆಯಲ್ಲಿ ಕೆಲ ದಿನಗಳಿಂದ ಹಲವು ಕಡೆ ಶಂಕುಸ್ಥಾಪನೆ, ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವ ಕೆಲಸ ಮಾಡಲಾಗುತ್ತಿದೆ. ಇದೆಲ್ಲವೂ ಇನ್ನು ಸುಮಾರು ಎರಡು ತಿಂಗಳ ಕಾಲ ತೋರಿಕೆಗೆ ಮಾತ್ರ ಸೀಮಿತವಾಗಲಿದ್ದು, ಬಹುತೇಕ ಕೆಲಸಗಳು ನಿರೀಕ್ಷಿತ ವೇಗ ಪಡೆಯುವುದಿಲ್ಲ. ಗ್ರಾಮೀಣಾಭಿವೃದ್ಧಿ, ಕಂದಾಯ, ಪೊಲೀಸ್‌ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿ ವರ್ಗ ಚುನಾವಣೆ ಕೆಲಸದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಾರೆ. ತಾಲೂಕು ಕಚೇರಿಗಳು ಸೇರಿ ಹಲವು ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರಿಗೆ ಸಂಬಂಧಿಸಿದ ಅರ್ಜಿ, ಮನವಿ ಪತ್ರ ಹಾಗೂ ಇತರ ಸೇವೆಗಳ ಕಡತಗಳು ವಿಲೇವಾರಿ ವಿಳಂಬವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಲಾಟರಿ ಕಿಂಗ್​ ಮಾರ್ಟಿನ್​ ಯಾರು?

ಇನ್ನು ರಾಜ್ಯದಲ್ಲಿ ಭೀಕರ ಬರಗಾಲವಿದೆ. ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿರುವುದರಿಂದ ರಾಜ್ಯದೆಲ್ಲೆಡೆ ಬೇಸಿಗೆ ಆವರಿಸಿದ್ದು, ಇದರ ಪರಿಣಾಮ ಹಲವು ಸಮಸ್ಯೆಗಳು ಎದುರಾಗಿವೆ. ರಾಜ್ಯದ ಹಲವಾರು ಭಾಗಗಳಲ್ಲಿ ಕುಡಿಯುವ ನೀರಿಗೆ ಭಾರೀ ಸಮಸ್ಯೆಯಾಗಿದೆ. ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ಸಿದ್ಧತೆಯಾಗಿದ್ದರೂ, ನೀತಿ ಸಂಹಿತೆ ಜಾರಿಗೆ ಬಂದ ನಂತರ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಲಿದೆ ಎಂಬ ಪ್ರಶ್ನೆ ಎದುರಾಗಿದೆ.

ಚುನಾವಣೆ ಮೇಲೆ ಕೇಂದ್ರೀಕೃತ:ಆಡಳಿತರೂಢ ಕಾಂಗ್ರೆಸ್‌, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಕೂಟಕ್ಕೆ ಪ್ರತಿಷ್ಠೆಯಾಗಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಮತ್ತು ಜನಪರ ಕೆಲಸಗಳಿಗಿಂತ ಚುನಾವಣೆ ಹಾಗೂ ಪಕ್ಷಗಳ ರಾಜಕಾರಣ ಮೇಲಾಟವೇ ಪ್ರಮುಖವಾಗಲಿದೆ. ಎರಡು ತಿಂಗಳ ಕಾಲ ಸಿಎಂ, ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಗಳ ಆಸಕ್ತಿ ಮತ್ತು ಆದ್ಯತೆ ಎಲ್ಲವೂ ಚುನಾವಣೆಯನ್ನು ಕೇಂದ್ರೀಕರಿಸುತ್ತದೆ. ಸಚಿವರು ಇಲಾಖೆ ಕೆಲಸ, ಕಾರ್ಯಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸುವ, ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸುವುದಕ್ಕೂ ಬ್ರೇಕ್ ಬೀಳಲಿದೆ.

2019 ರಲ್ಲಿ ದೇಶಾದ್ಯಂತ ಏಳು ಹಂತದ ಮತದಾನ ನಡೆದಿತ್ತು. ಈ ಬಾರಿಯೂ ಹೆಚ್ಚು ಕಡಿಮೆ ಅಷ್ಟೇ ಹಂತದ ಮತದಾನ ನಡೆಯುವ ಸಾಧ್ಯತೆ ಇದೆ. ಕಳೆದ 2019ರ ಮಾರ್ಚ್ 10ರಂದು ದಿನಾಂಕವನ್ನು ಘೋಷಣೆ ಮಾಡಲಾಗಿತ್ತು. ಏಪ್ರಿಲ್ 11ರಿಂದ ಮೇ 19ರವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆದು ಮೇ 25ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಂಡಿತ್ತು. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಮೇ 18 ಮತ್ತು ಮೇ 23 ಸೇರಿದಂತೆ ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ 14 ಹಾಗೂ 2ನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು. ವಿದ್ಯಾರ್ಥಿಗಳ ಪರೀಕ್ಷೆಗಳು, ಧಾರ್ಮಿಕ ಆಚರಣೆಗಳಿಗೆ ಅಡೆತಡೆಯಾಗದಂತೆ ಚುನಾವಣಾ ಆಯೋಗ ಪರಿಶೀಲಿಸಿ ದಿನಾಂಕವನ್ನು ನಿಗದಿಪಡಿಸಲಿದೆ.

ಇದನ್ನೂ ಓದಿ:ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಆಗುವ ಲಾಭಗಳೇನು?: ಈ ಬಗ್ಗೆ ಸಮಿತಿ ಹೇಳಿದ್ದೇನು?

Last Updated : Mar 16, 2024, 11:58 AM IST

ABOUT THE AUTHOR

...view details