ಕರ್ನಾಟಕ

karnataka

ETV Bharat / state

ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ: ರಮೇಶ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು - Lakshmi Hebbalkar - LAKSHMI HEBBALKAR

ಇಂದಿನಿಂದ ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್, ಸೀರೆ, ಮೆಡಿಸಿನ್ ಕಿಟ್ ವಿತರಿಸಲಾಗುತ್ತಿದೆ. ಬೆಳಗಾವಿಯಲ್ಲಿ ಸಾಂಕೇತಿಕವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Mobile distribution to Anganwadi workers
ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್​ ವಿತರಣೆ (ETV Bharat)

By ETV Bharat Karnataka Team

Published : Jun 28, 2024, 6:06 PM IST

Updated : Jun 28, 2024, 7:36 PM IST

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (ETV Bharat)

ಬೆಳಗಾವಿ: ಅಂಗನವಾಡಿ ಕಾರ್ಯಕರ್ತೆಯರಿಂದ ಒಂದು ಲಕ್ಷ ರೂಪಾಯಿ ಹಣ ಪಡೆದ ಶಾಪ ಲಕ್ಷ್ಮೀ ಹೆಬ್ಬಾಳ್ಕರ್​ಗೆ ತಟ್ಟಿದೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಸಮ್ಮುಖದಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ತಿರುಗೇಟು ಕೊಟ್ಟರು.

ಬೆಳಗಾವಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್, ಸೀರೆ, ಮೆಡಿಸಿನ್ ಕಿಟ್ ವಿತರಿಸಿ ಮಾತನಾಡಿದ ಹೆಬ್ಬಾಳ್ಕರ್, "ಅಂಗನವಾಡಿ ಕಾರ್ಯಕರ್ತೆಯರ ಬಳಿ ನಾನು ಹಣ ಪಡೆದಿದ್ದೇನಾ" ಎಂದು ಪ್ರಶ್ನಿಸಿದರು. ಹಣ ಪಡೆದಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಜೋರು ಧ್ವನಿಯಲ್ಲಿ ಉತ್ತರಿಸಿದರು. "ಲಕ್ಷ್ಮೀ ಹೆಬ್ಬಾಳ್ಕರ್ ಅಂಗನವಾಡಿ ಕಾರ್ಯಕರ್ತೆಯರ ಬಳಿ ಒಂದು ಲಕ್ಷ ಪಡೆದಿದ್ದಾರೆ ಅಂತಾ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಆದರೆ, ನಾನು ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಗನ ಭವಿಷ್ಯಕ್ಕಾಗಿ ಹೋರಾಡುವುದು ತಪ್ಪಾ?: ವೇದಿಕೆ ಮೇಲೆ ಮಗನ ಸೋಲನ್ನು ನೆನೆದ ಲಕ್ಷ್ಮೀ ಹೆಬ್ಬಾಳ್ಕರ್, "ಮಗ ಸೋತ ಮೇಲೆ ಮೌನವಾಗಿದ್ದಾರೆ ಅಂತಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಒಬ್ಬ ತಾಯಿ ಅಲ್ಲವೇ? ಮಗನ ಭವಿಷ್ಯಕ್ಕಾಗಿ ನಾನು ಹೋರಾಟ ಮಾಡೋದು ತಪ್ಪಾ? ಮಕ್ಕಳ ಭವಿಷ್ಯ ಹೆಚ್ಚು ಕಡಿಮೆ ಆದಾಗ, ಮಕ್ಕಳು ಬಿದ್ದಾಗ ಸಂಕಟ ಆಗುತ್ತದೆ. ಹಾಗೆಯೇ ನನಗೂ ಸಂಕಟ ಆಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಗಟ್ಟಿಗಿತ್ತಿ, ಆದ್ರೆ ಒಬ್ಬ ತಾಯಿ ಕೂಡಾ. ಆದರೆ ಸಂಕಟವಾಗಿದೆ ಅಂತ ಕೈಕಟ್ಟಿ ಕೂರುವ ಜಾಯಮಾನ ನನ್ನದಲ್ಲ. ಈಗ ಮಗ ಬಿದ್ದಿದ್ದಾನೆ, ಬಿದ್ದೋನು ಮತ್ತೆ ಮೇಲೆ ಏಳುವುದು ಸಹಜ ಪ್ರಕೃತಿ ನಿಯಮ" ಎಂದರು.

"ಮಾನ-ಮರ್ಯಾದೆ ಎಲ್ಲಾ ಹರಾಜು ಹಾಕಿದ್ರು. ಆದರೂ ಕೂಡ ಯಾವುದಕ್ಕೂ ನಾನು ಜಗ್ಗಲಿಲ್ಲ. ನೀವೆಲ್ಲ ನಮಗೆ ಶಕ್ತಿ, ನಿಮ್ಮೆಲ್ಲರ ಸಹಕಾರ ಇಲಾಖೆಗೆ ಮುಖ್ಯ. ಇಲಾಖೆಗೆ‌ ನೀವೆಲ್ಲ ಸ್ಫೂರ್ತಿ. ಯಾರು ಎಷ್ಟೇ ಹೇಳಿದರೂ ಶ್ರದ್ಧೆ, ಭಕ್ತಿಯಿಂದ ಕೆಲಸ ಮಾಡೋಣ" ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

"ಇಂದಿನಿಂದ ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್, ಸೀರೆ, ಮೆಡಿಸಿನ್ ಕಿಟ್ ವಿತರಿಸಲಾಗುತ್ತದೆ. ಬೆಳಗಾವಿಯಲ್ಲಿ ಸಾಂಕೇತಿಕವಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ. ನಮ್ಮ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಬೇಕು ಎಂಬ ಕನಸು ಹೊತ್ತು ಅಧಿಕಾರ ಸ್ವೀಕರಿಸಿದ್ದೆ. ಮಂತ್ರಿಯಾದಾಗ ಅಕ್ಕ ನೀವು ಶಕ್ತಿವಂತರು, ಈ ಇಲಾಖೆ ಏಕೆ ತಗೊಂಡ್ರಿ ಅಂದ್ರು. ಈ ಇಲಾಖೆ‌ ಸಿಕ್ಕಿದ್ದು ನನ್ನ ಭಾಗ್ಯ ಅಂತ ಹೇಳಿದ್ದೆ. ನೀವೆಲ್ಲರೂ ಯಶೋಧೆಯರು, ಕೃಷ್ಣನ ಸಲುಹಿದ ಹಾಗೆ ನೀವು ಮಕ್ಕಳನ್ನು ಸಲುಹುತ್ತೀರಿ. ಉಕ್ಕಿನ ಮಹಿಳೆ ಇಂದಿರಾ ಗಾಂಧಿ ದೇಶದ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗಲಿ ಅಂತ ಅಂಗನವಾಡಿಗಳಿಗೆ ಚಾಲನೆ ಕೊಟ್ಟರು. ಈ ಇಲಾಖೆಗೆ 'ಗೃಹಲಕ್ಷ್ಮೀ' ಯೋಜನೆ ಜವಾಬ್ದಾರಿ ಕೊಟ್ಟ ಮೇಲೆ ಇಡೀ ದೇಶ ನಮ್ಮ ಕಡೆ ನೋಡುವ ಹಾಗೆ ಆಯಿತು. 1 ಕೋಟಿ 22 ಲಕ್ಷ ಕುಟುಂಬಗಳ ಮಹಿಳೆಯರಿಗೆ ಕೊಟ್ಟ ಮಾತಿನಂತೆ ಗೃಹಲಕ್ಷ್ಮೀ ಜಾರಿ ಮಾಡಿದ್ದೇವೆ" ಎಂದು ಹೇಳಿದರು.

"ಮೊಬೈಲ್‌ನಲ್ಲಿ ಪೋಷನ್ ಅಭಿಯಾನ, ಪಲ್ಸ್ ಪೋಲಿಯೋ ಅಭಿಯಾನ ಸೇರಿ ಇತರ ಕೆಲಸ ಮಾಡಲು ಆಗುತ್ತಿಲ್ಲ ಎನ್ನುತ್ತಿದ್ದರು. ಹಾಗಾಗಿ, 13 ಸಾವಿರ ಮೌಲ್ಯದ ಉತ್ತಮ ಗುಣಮಟ್ಟದ ಸ್ಯಾಮಸಂಗ್ ಮೊಬೈಲ್ ವಿತರಿಸಲಾಗುತ್ತಿದೆ. ಕೇವಲ ಮೊಬೈಲ್ ವಿತರಣೆ ಮಾಡಿ ಕೆಲಸ ಮುಗಿದಿದೆ ಅಂತ ಸುಮ್ಮನೆ ಕುಳಿತಿಲ್ಲ. ನಮ್ಮ ಕ್ಷೇತ್ರದಲ್ಲಿ 650 ಮೊಬೈಲ್ ಕೊಡುತ್ತಿದ್ದೇವೆ. ತಾಂತ್ರಿಕ ತೊಂದರೆ ಬಂದರೆ ಎಕ್ಸ್‌ಚೇಂಜ್ ಮಾಡಲು ಹೆಚ್ಚುವರಿ ಮೊಬೈಲ್ ತರಿಸಿದ್ದೇವೆ. ಇಡೀ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್ ಆಗಿ ಕಾಣಬೇಕು. ನಮ್ಮ ಅಂಗನವಾಡಿಗಳು ಅಪ್‌ಗ್ರೇಡ್ ಆಗಿ ಸಕ್ಷಮ ಅಂಗನವಾಡಿಗಳು ಬೇಕು. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ 20 ಸಾವಿರ ಅಂಗನವಾಡಿಗಳಿಗೆ ಸ್ಮಾರ್ಟ್ ಕ್ಲಾಸ್ ತೆಗೆದುಕೊಂಡು ಬಂದಿರುವೆ" ಎಂದು ಹೇಳಿದರು.

130 ರೂ. ಗೌರವ ಧನದೊಂದಿಗೆ ಅಂಗನವಾಡಿಗಳು ಕಾರ್ಯಾರಂಭ ಆಗಿದ್ದವು. ಪಿಯುಸಿ ಕಲಿತ 20 ಸಾವಿರ, ಪದವಿ ಪಡೆದ 15 ಸಾವಿರ, ಸ್ನಾತಕೋತ್ತರ ಪದವಿ ಪಡೆದ 2 ಸಾವಿರ ಅಂಗನವಾಡಿ ಶಿಕ್ಷಕಿಯರಿದ್ದಾರೆ. ತಜ್ಞರ ಕಮಿಟಿ ಮಾಡಿ 9 ರಿಂದ 10 ಸಾವಿರ ಅಂಗನವಾಡಿಗಳಿಗೆ ಸರ್ಕಾರಿ ಮಾಂಟೆಸ್ಸರಿ ಮಾಡಲಾಗುವುದು. ನಿಮ್ಮೆಲ್ಲರ ಹೋರಾಟದಿಂದ ಅಂಗನವಾಡಿಗೆ ಹೊಸ ಹೆಸರು ಬಂದಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಮಾಡುತ್ತಿದ್ದೇವೆ. ನಿಮ್ಮ ಕಲಿಕೆಯ ಶೈಲಿ ಅಪ್‌ಗ್ರೇಡ್ ಮಾಡಲು ಇಲಾಖೆ ಮುಂದೆ ಬಂದಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಸೀರೆ, ಪ್ರತಿಯೊಂದು ಅಂಗನವಾಡಿಗಳಿಗೆ ಮೆಡಿಸಿನ್ ಕಿಟ್ ವಿತರಣೆ, ಮಕ್ಕಳ ತೂಕ ಪರೀಕ್ಷಿಸುವ ತೂಕದ ಯಂತ್ರ ಕೊಡುತ್ತಿದ್ದೇವೆ. ಬೆಳಗಾವಿ ಜಿಲ್ಲೆಗೆ 200 ಅಂಗನವಾಡಿ ಕಟ್ಟಡ ತೆಗೆದುಕೊಂಡು ಬಂದಿದ್ದೇನೆ. ಹಂತಹಂತವಾಗಿ ಬೆಳಗಾವಿ ಜಿಲ್ಲೆಯ ಎಲ್ಲಾ ಕಡೆ ಸ್ವಂತ ಅಂಗನವಾಡಿ ಕಟ್ಟಡ ಕಟ್ಟಲಾಗುವುದು. ನಮಗೆ ಜಾಗ ಲಭ್ಯವಿದ್ದ ಕಡೆ 20 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ಕಟ್ಟೋಣ. ಇನ್ನು ಗೌರವಧನವನ್ನು ಕೂಡ ಹೆಚ್ಚಿಸುತ್ತೇವೆ" ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (ETV Bharat)

ರಮೇಶ್​ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್:ನಾನು ಹೆಸರಿಗಷ್ಟೇ ಲಕ್ಷ್ಮೀ, ನನ್ನ ಬಳಿ ಹಣ ಇಲ್ಲ. ಅವರಿಗೆ ಸಾಹುಕಾರ ಅಂತಾರೆ. ನಮ್ಮ ಬಳಿ ಎಲ್ಲಿದೆ ದುಡ್ಡು? ಸಾಹುಕಾರರು ಅವರಲ್ಲವೇ? ನಾನು ಯಾರ ಬಳಿಯಾದರೂ ಹಣ ತೆಗೆದುಕೊಂಡಿದ್ದರೆ ದಾಖಲೆ ಕೊಡಲಿ. ಆಮೇಲೆ ಮಾತನಾಡುತ್ತೇನೆ ಎಂದು ಪರೋಕ್ಷವಾಗಿ ರಮೇಶ್​ ಜಾರಕಿಹೊಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ಕೊಟ್ಟರು.

ವಿಷಕನ್ಯೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಟೀಕಿಸಿರುವ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, "ನಾನು ಉತ್ತರ ಕೊಡುವುದಿಲ್ಲ. ಅವರ ಸಂಸ್ಕೃತಿ ಎಂಥದ್ದು ಎಂದು ಇಡೀ ರಾಜ್ಯದ ಜನರು ನೋಡಿದ್ದಾರೆ. ಜನರೇ ತಕ್ಕ ಉತ್ತರ ಕೊಡುತ್ತಾರೆ. ಭಾರತ ದೇಶದ ಸಂಸ್ಕೃತಿಯಲ್ಲಿ ವಿಶ್ವಾಸ ಇಟ್ಟವರು ನಾವು. ಅವರು ವಿಷಕನ್ಯೆ ಅಂತಾರೋ, ಇನ್ನೊಂದು ಕನ್ಯೆ ಅಂತಾರೋ. ಅವರ ಸಂಸ್ಕೃತಿ ಏನು ಎನ್ನುವುದು ಇಡೀ ರಾಜ್ಯದ ಜನರು ನೋಡಿದ್ದಾರೆ. ಅವರ ಸಂಸ್ಕೃತಿ ಬಗ್ಗೆಯೂ ನೋಡಿದ್ದಾರೆ. ಅವರು ದೊಡ್ಡವರು ಅವರ ಬಗ್ಗೆ ಮಾತನಾಡಲ್ಲ" ಎಂದು ಟಾಂಗ್​ ಕೊಟ್ಟರು.

ಇದನ್ನೂ ಓದಿ:ಕಳಪೆ ಪೂರಕ ಆಹಾರ ಪೂರೈಸಿದರೆ ಡಿಡಿ ವಿರುದ್ಧ ಕಠಿಣ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾರ್ನಿಂಗ್​​ - POOR FOOD SUPPLY HEBBALKAR WARNING

Last Updated : Jun 28, 2024, 7:36 PM IST

ABOUT THE AUTHOR

...view details