ಹಾಸನ: ನನ್ನ ಮೇಲಿನ ಆರೋಪ ಸುಳ್ಳು. ನನಗೆ ಈ ನಾಡಿನ ಕಾನೂನಿನ ಮೇಲೆ ವಿಶ್ವಾಸವಿದೆ. ಪೊಲೀಸರ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಹೇಳಿದ್ದಾರೆ.
ಅಸಹಜ ಲೈಂಗಿಕ ದೌರ್ಜನ್ಯದ ಬಗ್ಗೆ ಅರಲಗೂಡು ಮೂಲದ ಯುವಕ ಮಾಡಿರುವ ಆರೋಪವನ್ನು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ತಿರಸ್ಕರಿಸಿದರು. ಪ್ರಕರಣ ಸಂಬಂಧ ದಾಖಲೆ ನೀಡಲು ಹಾಸನ ಸೆನ್ ಪೊಲೀಸ್ ಠಾಣೆಗೆ ಸೂರಜ್ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದರು.
ರಾಜಕೀಯ ಷಡ್ಯಂತ್ರ ಮಾಡಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ ನನ್ನ ಮೇಲಿನ ಆರೋಪವನ್ನು ತಿರಸ್ಕರಿಸುತ್ತೇನೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನನಗೆ ಕಾನೂನಿನ ಮೇಲೆ ವಿಶ್ವಾಸವಿದ್ದು, ಸತ್ಯಾಸತ್ಯತೆ ಹೊರಬರಲಿದೆ. ಪ್ರಕರಣ ಸಂಬಂಧ ಈಗಾಗಲೇ ಎಫ್ಐಆರ್ ಆಗಿದೆ ಎಂದು ಸೂರಜ್ ರೇವಣ್ಣ ಪ್ರತಿಕ್ರಿಯೆ ನೀಡಿದರು.
ನನ್ನ ವಿರುದ್ಧ ಯಾರು ಷಡ್ಯಂತ್ರ ಮಾಡಿದ್ದಾರೆ ಎಂಬುದನ್ನು ನಾನು ಈಗ ಚರ್ಚಿಸಲು ಹೋಗಲ್ಲ. ತನಿಖೆ ಪ್ರಗತಿಯಲ್ಲಿದೆ. ಎಲ್ಲವೂ ಹೊರಬರಲಿದ್ದು, ಅದನ್ನು ರಾಜ್ಯದ ಜನರು ನೋಡಲಿದ್ದಾರೆ ಎಂದು ಸೂರಜ್ ರೇವಣ್ಣ ತಿಳಿಸಿದರು.