ಮೈಸೂರು :ಯದುವೀರ್ ಜನರ ವಿಶ್ವಾಸದ ಅಲೆಯಿಂದ ಗೆದ್ದಿದ್ದಾರೆಯೇ ಹೊರತು, ಬೇರೆ ಯಾವುದೇ ಅಲೆಯಿಂದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನೂತನ ಸಂಸದ ಯದುವೀರ್ ಕುರಿತಂತೆ ಜನತೆಗೆ ಸಾಕಷ್ಟು ಆಕಾಂಕ್ಷೆಗಳಿವೆ. ಮೈಸೂರಿನ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿ. ವಿಶ್ವವಿಖ್ಯಾತ ದಸರಾ ಈಗ ಕುಸಿದಿದೆ. ಜಗತ್ತಿನ ಜನ ಮತ್ತೆ ಇಲ್ಲಿಗೆ ಬರುವಂತೆ ಮಾಡಬೇಕು. ಇದರಿಂದ ಜನರ ಹೊಟ್ಟೆ ತುಂಬುತ್ತದೆ. ನಿಮ್ಮ ಮೇಲೆ ಬಹಳ ಜವಾಬ್ದಾರಿ ಇದೆ. ನೆಲ, ಜಲ, ವಿದ್ಯುತ್ ಸೇರಿದಂತೆ ಎಲ್ಲದರ ಬಗ್ಗೆ ಗಮನಿಸಿ ಎಂದು ಹೇಳಿದರು.
ಕೇಂದ್ರದ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಲಿ : ರಾಜ್ಯದಿಂದ ಆಯ್ಕೆಯಾಗಿರುವ ನೂತನ ಸಂಸದರು, ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಲಿ ಎಂದು ಸಲಹೆ ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿದ್ದವರು ಇಲ್ಲಿನ ನಾಡು-ನುಡಿ, ಜಲ, ಅಭಿವೃದ್ಧಿ ವಿಷಯ ಕುರಿತಂತೆ ಪ್ರಧಾನಿಯನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಮಾಡಲಿಲ್ಲ. ಆದರೆ ಈಗ ಆಯ್ಕೆಯಾಗಿರುವವರು ಇದಕ್ಕೆ ಹೊರತಾಗಿ ಕೆಲಸ ಮಾಡಿ. ರಾಜ್ಯದ ಹಿತ ಕಾಯುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ರಾಜ್ಯದಿಂದ ಆಯ್ಕೆಯಾಗಿರುವ 28 ಮಂದಿಯೂ ಪಕ್ಷಾತೀತವಾಗಿ ರಾಜ್ಯದ ಸಮಸ್ಯೆಗಳನ್ನು ಕೇಂದ್ರದಲ್ಲಿ ತಿಳಿಸಿ ಪರಿಹಾರ ಪಡೆದುಕೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ. ಈ ಬಾರಿ ಮೂವರು ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನಹರಿಸಲಿ, ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಲಿ ಎಂದು ವಿಶ್ವನಾಥ್ ಒತ್ತಾಯಿಸಿದರು.
ಅಯೋಧ್ಯೆಯ ರಾಮನ ಹೆಸರಿನಲ್ಲಿ ಚುನಾವಣೆ ಮಾಡಲು ಸಾಧ್ಯವಿಲ್ಲ ಎಂದು ಜನರು ಈ ಚುನಾವಣೆಯಲ್ಲಿ ಎಚ್ಚರಿಸಿದ್ದಾರೆ. ಚುನಾವಣೆಗೂ ಮುನ್ನ ಏನೆಲ್ಲ ಮಾತುಗಳನ್ನು ಆಡಿದವರಿದ್ದಾರೆ. ಧರ್ಮ, ರಾಮ ಎಂದರು. ಆದರೆ ಜನ ಅದನ್ನು ಒಪ್ಪುವುದಿಲ್ಲ ಎಂಬುದು ಸ್ವತಃ ಅಯೋಧ್ಯೆಯ ಫಲಿತಾಂಶದಿಂದಲೇ ಸಾಬೀತಾಗಿದೆ. ಜನರಿಗೆ ಅಭಿವೃದ್ಧಿ ಕೆಲಸಗಳು ಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.