ಮೈಸೂರು:"ಪಂಚಮಸಾಲಿ ಮೀಸಲಾತಿ ಹೋರಾಟ ಸಮಾಜ-ಸಮಾಜಗಳ ನಡುವೆ ಅಪನಂಬಿಕೆ ಬಿತ್ತುವಂತಹ ವಾತಾವರಣ ಸೃಷ್ಟಿಸುತ್ತಿದೆ. ಇದೆಲ್ಲಾ ಸ್ವಾಮೀಜಿಗೆ ಬೇಕಿತ್ತಾ" ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರಶ್ನಿಸಿದರು.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಮೀಸಲಾತಿಯಲ್ಲಿ 2ಎ ಪಟ್ಟಿ ಈಗ ತುಂಬಿ ಹೋಗಿದೆ. ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮುದಾಯದವರಿಗೂ ಈ ಬಗ್ಗೆ ಗೊತ್ತಿಲ್ಲ, ಅತ್ತಕಡೆ ಕುರುಬರಿಗೂ ಗೊತ್ತಿಲ್ಲ. 2A ವರ್ಗವನ್ನು ಈಗಾಗಲೇ ಅಕ್ರಮಿಸಿಕೊಂಡಾಗಿದೆ. 45ಕ್ಕೂ ಹೆಚ್ಚು ಜಾತಿಗಳು ಈಗಾಗಲೇ 2ಎ ಮೀಸಲಾತಿಯಲ್ಲಿ ಸೇರ್ಪಡೆಯಾಗಿವೆ. ಆದರೆ, ಅವುಗಳನ್ನು ಪುನರ್ ಸಮೀಕರಣ ಮಾಡಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನ ಕೊಡಬೇಕು. ಬರೀ ಭಾಷಣ ಮಾಡಿದರೆ ಸಾಲದು. ಪುನರ್‌ಸಮೀಕರಣದ ಬಳಿಕ 2ಎ ಪಟ್ಟಿಗೆ ಹೊಸದಾಗಿ ಸೇರಿಸಬಹುದು. ಅಲ್ಲಿಯವರೆಗೆ ಸೇರಿಸಲು ಸಾಧ್ಯವಿಲ್ಲ" ಎಂದರು.
"ಯಾರ್ಯಾರೋ 2A ಸರ್ಟಿಫಿಕೆಟ್ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಯಾವ ಮಾನದಂಡವೂ ಇಲ್ಲದಂತಾಗಿದೆ. 1989ರಲ್ಲಿ ಕೇವಲ 15 ಜಾತಿಗಳಿದ್ದ 2A ವರ್ಗದಲ್ಲಿ ಇದೀಗ 40-45 ಜಾತಿಗಳು ಬಂದು ಸೇರಿವೆ. ಬೊಮ್ಮಾಯಿ ಕಾಲದಲ್ಲೇ ಸಾದರ ಲಿಂಗಾಯತರು 2ಎ ವರ್ಗಕ್ಕೆ ಬಂದಿದ್ದಾರೆ. ಸರ್ಕಾರ ಇದನ್ನು ಪುನರ್ ಸಮೀಕರಣ ಮಾಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ನೀಡಿದಂತಹ ಮೀಸಲಾತಿ ಧೂಳೀಪಟವಾಗಿದೆ. ಈಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಈ ಕುರಿತು ಗಮನ ನೀಡಬೇಕು. ಕೇವಲ ಭಾಷಣ ಮಾಡಿದರೆ ಸಾಲದು. ತಾಕತ್ತಿದ್ದರೆ ಈಗಾಗಲೇ ಇದರಲ್ಲಿ ಯಾರಾರು ಮೀಸಲಾತಿ ಪಡೆದಿದ್ದಾರೋ ಅವರನ್ನು ತೆಗೆದುಹಾಕಿ" ಎಂದು ವಿಶ್ವನಾಥ್ ಸವಾಲು ಹಾಕಿದರು.