ಚಿಕ್ಕಮಗಳೂರು :ಸದನದಲ್ಲಿ ಆಕ್ಷೇಪಾರ್ಹ ಪದ ಬಳಕೆ ಆರೋಪದಲ್ಲಿ ಬಂಧನಕ್ಕೊಳಗಾಗಿ ನಂತರ ಬಿಡುಗಡೆಯಾದ ಎಂಎಲ್ಸಿ ಸಿ. ಟಿ ರವಿ ಅವರಿಂದು ತಮ್ಮ ಧರ್ಮಪತ್ನಿ ಪಲ್ಲವಿ ಜೊತೆ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸಿ. ಟಿ ರವಿ ಬಿಡುಗಡೆಗೆ ಹಾಗೂ ಅವರ ಆರೋಗ್ಯ ಹಾರೈಕೆಗಾಗಿ ಹಲವರು ದೇವರಲ್ಲಿ ಪ್ರಾರ್ಥನೆ ಹಾಗೂ ಹರಕೆ ಹೊತ್ತಿದ್ದರು. ಹಾಗಾಗಿ ಇಂದು ಅವರು ರಾಘವೇಂದ್ರ ಸ್ವಾಮಿಗೆ ದೀರ್ಘ ದಂಡ ನಮಸ್ಕಾರ ಹಾಕಿ ಭಕ್ತಿ ಭಾವ ಮೆರೆದರು.
ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಮಾತನಾಡಿದರು (ETV Bharat) ಹಮ್ಮುರಾಬಿ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರೋ ಸರ್ಕಾರ :ರಾಜ್ಯ ಸರ್ಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಇದು ಹಮ್ಮುರಾಬಿ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರೋ ಸರ್ಕಾರ ಎಂದು ಸಿ ಟಿ ರವಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹಮ್ಮುರಾಬಿ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರು ಮಾತ್ರ ಕೊಲೆ, ಹತ್ಯೆ ಮಾಡೋ ಕೆಲಸ ಮಾಡ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇದ್ದಂತೆ ಕಾಣಿಸುವುದಿಲ್ಲ. ಅವರಿಗೆ ನಂಬಿಕೆ ಇರುವುದು ಹಮ್ಮುರಾಬಿ ಸಿದ್ಧಾಂತದ ಮೇಲೆ ಎಂದು ಅವರ ಮಾತಿನ ಮೂಲಕ ವ್ಯಕ್ತವಾಗುತ್ತಿದೆ ಎಂದರು.
ನಾನು ಕೊಟ್ಟ ದೂರು ಯಾಕೆ ರಿಜಿಸ್ಟರ್ ಮಾಡಿಲ್ಲ. ಹಾಗಾದ್ರೆ ಕಾನೂನಿನಲ್ಲಿ ನ್ಯಾಯ ಪಡೆಯುವ ಅಧಿಕಾರ, ಹಕ್ಕು ನನಗಿಲ್ಲವಾ? ಹಾಗಾದ್ರೆ ಇವರ ದೃಷ್ಟಿಯಲ್ಲಿ ಗೂಂಡಾಗಳನ್ನು ಕಳುಹಿಸಿ ನ್ಯಾಯ ಪಡೆಯಬೇಕಾ? ಎಂದು ಪ್ರಶ್ನಿಸಿದರು.
ನಾನು ನ್ಯಾಯಾಂಗ ತನಿಖೆ ಕೇಳಿರೋದು ಸತ್ಯಾಸತ್ಯತೆ ಹೊರ ಬರಲಿ ಎಂದು. ನನ್ನನ್ನು ರಾತ್ರಿ ಇಡೀ 400 ಕಿಲೋ ಮೀಟರ್ಗೂ ಹೆಚ್ಚು ದೂರ ನಿಗೂಢ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದು ಅಪರಿಚಿತರಲ್ಲ. ಕರ್ನಾಟಕ ರಾಜ್ಯ ಪೊಲೀಸರು. ಅವರಿಗೆ ನಿಗೂಢವಾದ ಸ್ಥಳದಿಂದ ಡೈರೆಕ್ಷನ್ಸ್ ಬರುತ್ತಿತ್ತು. ಯಾರ್ಯಾರು ಯಾವ ಹೊತ್ತಿನಲ್ಲಿ ಮಾತನಾಡಿದ್ದಾರೆ ಎಂಬುದನ್ನ ತಿಳಿಯಲು ಅವರ ಕಾಲ್ ರೆಕಾರ್ಡ್ ಚೆಕ್ ಮಾಡಿ ಎಂದು ಒತ್ತಾಯಿಸಿರುವುದಾಗಿ ಹೇಳಿದರು.
ನಮ್ಮ ಮುಖ್ಯಮಂತ್ರಿಗಳಿಗೆ ಪೊಲೀಸ್ ಠಾಣೆಯಲ್ಲಿ ಸಿ ಟಿ ರವಿಗೆ ರಕ್ಷಣೆ ಸಿಗಲ್ಲ ಅಂತ ಅನ್ನಿಸಿದೆ. ಅದಕ್ಕೆ ರಕ್ಷಣೆಗಾಗಿ ಕಬ್ಬಿನ ಗದ್ದೆಗೆ ಕಳುಹಿಸಿದ್ದರು. ಅಲ್ಲಿಗೆ 60 ಜನ ಪೊಲೀಸರೆನೂ ಬಂದಿರಲಿಲ್ಲ. ಇದ್ದಿದ್ದು 6 ಜನ ಪೊಲೀಸರು. ಮಾಧ್ಯಮದ ಸ್ನೇಹಿತರು ಇಲ್ಲದೇ ಇದ್ದಿದ್ದರೆ ಇವರ ಹುನ್ನಾರ ಬೇರೆಯೇ ಇತ್ತು ಎಂದು ನಾನು ಆಪಾದನೆ ಮಾಡಿದ್ದೆ ಎಂದು ಹೇಳಿದರು.
ಅದಕ್ಕೆ ಇಂಬು ಕೊಡುವ ರೀತಿ ಸಿಎಂ ಮಾತನಾಡುತ್ತಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳ ಪಾತ್ರ ಇಲ್ಲವೇನೊ ಎಂದುಕೊಂಡಿದ್ದೆ. ಎಲ್ಲರೂ ಕೂಡಿ ಷಡ್ಯಂತ್ರ ಮಾಡಿರಬಹುದು ಅಂತಾ ನನಗೆ ಈಗ ಅನುಮಾನ ಬರುತ್ತಿದೆ. ಅದಕ್ಕಾಗಿಯೇ ನ್ಯಾಯಾಂಗ ತನಿಖೆ ಎಂಬುದನ್ನ ಕೇಳಿರುವುದು. ಕರ್ನಾಟಕದಲ್ಲಿ ಕಾಂಗ್ರೆಸ್ನವರಿಗೆ ಒಂದು ಕಾನೂನು, ಬಿಜೆಪಿಯವರಿಗೆ ಒಂದು ಕಾನೂನಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ :ನನ್ನನ್ನು 4 ಜಿಲ್ಲೆಗಳಲ್ಲಿ 11 ಗಂಟೆಗೂ ಹೆಚ್ಚು ಕಾಲ ಅಲೆದಾಡಿಸಿದ್ರು, ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಿದ್ರು: ಸಿ.ಟಿ.ರವಿ - MLC C T RAVI