ಮೈಸೂರು : ಮುಡಾ ಹಗರಣದ ನಂತರ ಹತ್ತು ತಿಂಗಳ ಬಳಿಕ ಮುಡಾ ಸಾಮಾನ್ಯ ಸಭೆ ನಡೆದಿದೆ. ಇದರಲ್ಲಿ ದೇಸಾಯಿ ಆಯೋಗದ ವರದಿ ಬಂದ ನಂತರ ಮುಂದಿನ ಎಲ್ಲ ತೀರ್ಮಾನವನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಿದ ಬಳಿಕ, ನಿತ್ಯ ಮುಡಾದಲ್ಲಿ ನಡೆಯುವ ಸಾಮಾನ್ಯ ಕೆಲಸಗಳಿಗೆ ಯಾವುದೇ ರೀತಿ ತೊಂದರೆಯಾಗದ ರೀತಿ ಕೆಲಸ ಮಾಡುವ ಬಗ್ಗೆ ಚರ್ಚಿಸಿ, ಇದೇ ತಿಂಗಳ 22ಕ್ಕೆ ಮತ್ತೆ ಸಾಮಾನ್ಯ ಸಭೆ ನಡೆಸುವ ಬಗ್ಗೆ ತೀರ್ಮಾನ ಮಾಡಲಾಗಿದೆ.
ಇಂದು ಮುಡಾದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ನೇತೃತ್ವದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಮುಡಾದ ಸದಸ್ಯರಾದ ಎಲ್ಲಾ ಶಾಸಕರು ಭಾಗಿಯಾಗಿದ್ದು, ವಿಶೇಷವಾಗಿತ್ತು.
ಮುಡಾ ಸಾಮಾನ್ಯ ಸಭೆಯ ಕುರಿತು ಎಂಎಲ್ಸಿ ಹೆಚ್ ವಿಶ್ವನಾಥ್ ಮಾತನಾಡಿದರು (ETV Bharat) ಈ ಸಭೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದ್ದು, ಹಲವು ವಿಚಾರಗಳ ಬಗ್ಗೆ ಸದಸ್ಯರು ಚರ್ಚಿಸಿದ್ದು, ಬಳಿಕ 50:50 ಅನುಪಾತದಲ್ಲಿ ನಿಯಮ ಉಲ್ಲಂಘಿಸಿ ಪಡೆದ ನಿವೇಶನಗಳನ್ನು ರದ್ದು ಮಾಡುವ ಬಗ್ಗೆ ಚರ್ಚೆ ನಡೆಸಿತು. ಕೊನೆಗೆ ದೇಸಾಯಿ ಆಯೋಗದ ವರದಿ ಬಂದ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಎಂಎಲ್ಸಿ ಹೆಚ್. ವಿಶ್ವನಾಥ್ ಹೇಳಿದ್ದು ಏನು?: ಮುಡಾದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ''ಮುಡಾದಲ್ಲಿ ನಡೆದ ಹಗರಣದ ಬಗ್ಗೆ ಮುಖ್ಯವಾಗಿ ಹಿಂದಿನ ಮುಡಾ ಅಯುಕ್ತರಾದ ನಟೇಶ್ನಿಂದ ಹಿಡಿದು ದಿನೇಶ್ ಕುಮಾರ್ವರೆಗೂ ಪ್ರಕರಣದ ಎಲ್ಲ ವಿಚಾರಗಳು ತನಿಖೆ ಆಗಬೇಕು. ಮುಡಾ ಪ್ರಕರಣದಲ್ಲಿ ಸಿಬಿಐ ಎಂಟ್ರಿ ಆಗುವ ಲಕ್ಷಣಗಳು ಇವೆ. ಇಂದು ಸಾಮಾನ್ಯ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆ ಆಗಿದ್ದು, ತನಿಖಾ ಸಂಸ್ಥೆಗಳಿಂದ ಮುಡಾಗೆ ನ್ಯಾಯ ಸಿಗುತ್ತದೆ'' ಎಂದು ಹೇಳಿದರು.
ನಿನ್ನೆ ಮುಖ್ಯಮಂತ್ರಿಗಳ ವಿಚಾರಣೆ ಮೈಸೂರಿನಲ್ಲೇ ಆಗಿದೆ. ಅವರು ಇಲ್ಲೇ ಶಾಸಕ, ಮಂತ್ರಿ, ಮುಖ್ಯಮಂತ್ರಿ ಆಗಿ ತವರಿನಲ್ಲಿ ತನಿಖೆ ಎದುರಿಸಿದ್ದು ನೋವಿನ ಸಂಗತಿ. ಜೊತೆಗೆ ಲೋಕಾಯುಕ್ತ ಸಂಸ್ಥೆಯನ್ನೇ ಬಾಗಿಲು ಹಾಕಿದ್ದ ಸಿದ್ದರಾಮಯ್ಯ ಅದೇ ಲೋಕಾಯುಕ್ತ ಎದುರು ವಿಚಾರಣೆಗೆ ಬಂದಿದ್ದು ನಾಚಿಕೆಗೇಡಿನ ಕೆಲಸ ಎಂದು ವ್ಯಂಗ್ಯವಾಡಿದರು. ನಿನ್ನೆ ಕಾಮನ್ ಮ್ಯಾನ್ ಆಗಿ ವಿಚಾರಣೆಗೆ ಬಂದ ಮುಖ್ಯಮಂತ್ರಿಗಳಿಗೆ ಮೈಸೂರು ಪೊಲೀಸರು ಗಾಡ್ ಆಫ್ ಹಾನರ್ ನೀಡಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳನ್ನು ಟೀಕಿಸಿದರು.
ಸಭೆಯ ನಂತರ ಜೆಡಿಎಸ್ ಶಾಸಕ ಜಿ. ಟಿ ದೇವೇಗೌಡ ಮಾತನಾಡಿ, ''50:50 ಅನುಪಾತದ ನಿವೇಶನಗಳನ್ನ ವಾಪಸ್ ಪಡೆಯುವ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ದೇಸಾಯಿ ತನಿಖಾ ವರದಿ ಬಂದ ಬಳಿಕ ಕ್ರಮ ಆಗುವ ಬಗ್ಗೆ ತೀರ್ಮಾನ ಮಾಡಲಾಗಿದ್ದು, ಕಾನೂನಿನ ರೀತಿ ನಿವೇಶನ ಪಡೆದವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅಕ್ರಮವಾಗಿ ನಿವೇಶನ ಪಡೆದವರಿಗೆ ಸಮಸ್ಯೆ ಆಗಲಿದೆ. ತನಿಖೆ ನಡೆಯುತ್ತಿರುವ ಕಾರಣ ನಿವೇಶನ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿಲ್ಲ'' ಎಂದು ಹೇಳಿದರು.
ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು :ಸಾಮಾನ್ಯ ಸಭೆಯ ಬಳಿಕ ಕಾಂಗ್ರೆಸ್ ಶಾಸಕ ಹರೀಶ್ಗೌಡ ಮಾತನಾಡಿ, ''ಹತ್ತು ತಿಂಗಳ ಬಳಿಕ ಮುಡಾದಲ್ಲಿ ಸಾಮಾನ್ಯ ಸಭೆ ನಡೆದಿದೆ. ಈ ಸಭೆಯಲ್ಲಿ 172 ವಿಷಯಗಳನ್ನು ಇಟ್ಟಿದ್ದು, ಅದರಲ್ಲಿ 60 ವಿಚಾರಗಳ ಬಗ್ಗೆ ರೆಫರ್ ಮಾಡಲಾಗಿದೆ. ಈ ಹಿಂದೆಯೂ 50:50 ಅನುಪಾತದ ನಿವೇಶನಗಳನ್ನು ಚರ್ಚೆ ಮಾಡದೇ ಕೂಡಬಾರದು ಎಂದು ಹೇಳಿದ್ದೆ. ಆದರೂ ಹಿಂದಿನ ಮುಡಾ ಅಧಿಕಾರಿಗಳು ಕಾನೂನು ಉಲಂಘನೆ ಮಾಡಿ ನಿವೇಶನ ನೀಡಿದ್ದಾರೆ. ಈ ರೀತಿ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಮತ್ತೇ ಇದೇ ತಿಂಗಳ 22ಕ್ಕೆ ಸಭೆ ಮಾಡುವ ಬಗ್ಗೆ ಸರ್ಕಾರದ ಗಮನ ಸಳೆಯಲಾಗುವುದು'' ಎಂದರು.
ಸಭೆಯ ನಂತರ ಬಿಜೆಪಿ ಶಾಸಕ ಶ್ರೀವತ್ಸ ಮಾತನಾಡಿ, ''50:50 ಅನುಪಾತದಲ್ಲಿ ಅಕ್ರಮವಾಗಿ ಪಡೆದ ನಿವೇಶನಗಳನ್ನು ರದ್ದು ಮಾಡುವ ಬಗ್ಗೆ ಮಾತನಾಡಿದ್ದೆವು. ಜೊತೆಗೆ ದೇಸಾಯಿ ಆಯೋಗದ ವರದಿಯ ನಂತರ ಈ ಬಗ್ಗೆ ತೀರ್ಮಾನ ಮಾಡೋಣ ಎಂದು ಎಲ್ಲರೂ ತೀರ್ಮಾನಿಸಿದ್ದೆವು. ಸಾರ್ವಜನಿಕರಿಗೆ ಯಾವುದೇ ರೀತಿ ನಿತ್ಯದ ಕೆಲಸಗಳಿಗೆ ತೊಂದರೆ ಆಗದಂತೆ ಮುಡಾ ಅಧಿಕಾರಿಗಳು ದಿನನಿತ್ಯದ ಕೆಲಸ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿದ್ದು, ಇದೇ ತಿಂಗಳ 21ರ ಬಳಿಕ ಮತ್ತೆ ಮುಡಾದಲ್ಲಿ ಸಾಮಾನ್ಯ ಸಭೆ ನಡೆಸುವ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇವೆ'' ಎಂದು ಹೇಳಿದರು.
ಇದನ್ನೂ ಓದಿ :ಮುಡಾ ಹಗರಣ: 10 ತಿಂಗಳ ಬಳಿಕ ಇಂದು ಮೊದಲ ಸಾಮಾನ್ಯ ಸಭೆ, ಡಿಸಿ ಮತ್ತು ಶಾಸಕರು ಹೇಳಿದ್ದೇನು?