ಕರ್ನಾಟಕ

karnataka

ETV Bharat / state

ವಿಧಾನಸಭೆ ಕಲಾಪ: ಅಕ್ರಮ ಮದ್ಯ ಮಾರಾಟ ತಡೆಗೆ ಆಡಳಿತ, ಪ್ರತಿಪಕ್ಷ ಶಾಸಕರ ಆಗ್ರಹ - Illegal liquor sale

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಪಕ್ಷಬೇಧ ಮರೆತು ಎಲ್ಲ ಶಾಸಕರು ವಿಧಾನಸಭೆಯಲ್ಲಿಂದು ಸರ್ಕಾರವನ್ನು ಒತ್ತಾಯಿಸಿದರು.

ವಿಧಾನಸಭೆ
ವಿಧಾನಸಭೆ

By ETV Bharat Karnataka Team

Published : Feb 13, 2024, 8:07 PM IST

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಮನೆ, ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ವಿಧಾನಸಭೆಯಲ್ಲಿ ಇಂದು ಶಾಸಕರು ಪಕ್ಷಬೇಧ ಮರೆತು ಆಗ್ರಹಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ದೊಡ್ಡ ಬಳ್ಳಾಪುರ ಕ್ಷೇತ್ರದ ಬಿಜೆಪಿ ಶಾಸಕ ಧೀರಜ್ ಮುನಿರಾಜು, "ನನ್ನ ಕ್ಷೇತ್ರದಲ್ಲಿ ಹಳ್ಳಿ ಹಳ್ಳಿಯಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ನನ್ನ ಹುಟ್ಟೂರಿನ ಬೂತ್ ವಡ್ಡರಹಳ್ಳಿಯಲ್ಲಿ ಆರು ಕಡೆ ಮದ್ಯ ಮಾರಾಟವಾಗುತ್ತಿದೆ. ಕುಡಿದು ಲಿವರ್ ಹಾನಿಗೊಳಗಾಗಿ 16 ಮಂದಿ ಕಿರಿಯ ವಯಸ್ಸಿನವರು ಮೃತಪಟ್ಟಿದ್ದಾರೆ. ಅಕ್ರಮ ಮಾರಾಟವನ್ನು ಸ್ಥಗಿತಗೊಳಿಸುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಪ್ರಯೋಜನವಾಗುತ್ತಿಲ್ಲ" ಎಂದು ಆಕ್ಷೇಪಿಸಿದರು.

ಸಭಾಧ್ಯಕ್ಷ ಯು ಟಿ ಖಾದರ್

"ಪ್ರತಿಯೊಬ್ಬರಿಗೆ ಎರಡೂವರೆ ಲೀಟರ್ ಮದ್ಯ ಸಂಗ್ರಹಕ್ಕೆ ಅವಕಾಶವಿದೆ. ಅದಕ್ಕಿಂತ ಹೆಚ್ಚು ಸಂಗ್ರಹ ಮಾಡಿಕೊಂಡಿದ್ದರೆ, ಅದರ ಹಿಂದೆ ಮಾರಾಟದ ಉದ್ದೇಶವಿದ್ದರೆ ಕ್ರಮ ಕೈಗೊಳ್ಳಬಹುದು. ಆದರೆ, ಅಬಕಾರಿ ಅಧಿಕಾರಿಗಳು ಬಾರ್​ನವರಿಗೆ ಮಾರಾಟದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ನಿಯಮ ಮೀರಿ ಹೆಚ್ಚುವರಿ ಮದ್ಯ ಮಾರಾಟ ಮಾಡಿದ ಬಾರ್‌ಗಳ ವಿರುದ್ಧ ಮೂರು ಬಾರಿ ಪ್ರಕರಣ ದಾಖಲಾದರೆ ಪರವಾನಗಿ ರದ್ದು ಮಾಡಬಹುದು. ಆದರೆ, ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಜೊತೆಗೆ ತಮ್ಮ ತಾಲ್ಲೂಕು ನೆರೆಯ ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಅಲ್ಲಿಂದ ಸೇಂದಿ ಕೂಡ ತಂದು ಮಾರಾಟ ಮಾಡಲಾಗುತ್ತಿದೆ" ಎಂದು ಹೇಳಿದರು.

ಶಾಸಕ ಧೀರಜ್ ಅವರ ಪ್ರಸ್ತಾಪಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಆರ್.ಅಶೋಕ್, "ಮನೆ, ಮನೆಯಲ್ಲಿ ಹಳ್ಳಿ ಹಳ್ಳಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಎಲ್ಲವೂ ಗೊತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ" ಎಂದು ಆಕ್ಷೇಪಿಸಿದರು.

ಶಾಸಕ ಸುರೇಶ್ ಗೌಡ

ಶಾಸಕರಾದ ಸುರೇಶ್ ಗೌಡ, ಆರಗ ಜ್ಞಾನೇಂದ್ರ ಮಾತನಾಡಿ, "ಅಕ್ರಮ ಮದ್ಯ ಮಾರಾಟದಿಂದ ಜನರ ನೆಮ್ಮದಿ ಹಾಳಾಗುತ್ತಿದೆ. ಮಹಿಳೆಯರು ತಡರಾತ್ರಿ ಕರೆ ಮಾಡಿ ಅಕ್ರಮ ಮದ್ಯ ಮಾರಾಟದಿಂದ ಎಷ್ಟು ಪಾಲು ಪಡೆಯುತ್ತಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆಸಿದರೆ ಪರಿಶಿಷ್ಟ ಜಾತಿಯವರ ಕಾಲೊನಿಗಳಲ್ಲಿ ಕುಡಿದು ಆರೋಗ್ಯ ಹಾಳು ಮಾಡಿಕೊಂಡು ಯುವಕರೇ ಇಲ್ಲವಾಗುತ್ತಾರೆ" ಎಂದು ಆತಂಕ ವ್ಯಕ್ತಪಡಿಸಿದರು.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡುತ್ತಾ, "ನಿಯಮಾನುಸಾರ ಅಕ್ರಮ ಮದ್ಯ ಮಾರಾಟಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ, ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಬೇರೆ ರೀತಿಯಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡು ಅಕ್ರಮಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಲಾಗುವುದು" ಎಂದು ಸದನಕ್ಕೆ ಹೇಳಿದರು‌. ಪಕ್ಷಬೇಧ ಮರೆತು ಶಾಸಕರು ಚರ್ಚೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದ್ದರಿಂದ ಸಭಾಧ್ಯಕ್ಷ ಯು.ಟಿ.ಖಾದರ್, ಅರ್ಧಗಂಟೆ ಕಾಲ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ಕೊಟ್ಟರು.

ಇದನ್ನೂ ಓದಿ:ಶೀಘ್ರದಲ್ಲೇ ಕರ್ನಾಟಕ ಡ್ರಗ್ಸ್‌ಮುಕ್ತ, ಕ್ರಿಕೆಟ್ ಬೆಟ್ಟಿಂಗ್ ವಿರುದ್ಧ ಗಂಭೀರ ಕ್ರಮ: ಗೃಹ ಸಚಿವ ಪರಮೇಶ್ವರ್

ABOUT THE AUTHOR

...view details