ಮೈಸೂರು :ಮುಡಾದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರನ್ನ ಅಮಾನತು ಮಾಡಲಾಗಿದೆ. ಆದರೆ ಮುಡಾದ ಅವ್ಯವಹಾರಗಳಿಗೆ ಸಚಿವ ಬೈರತಿ ಸುರೇಶ್ ಕಾರಣವಾಗಿರುವುದರಿಂದ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು. ಸಚಿವರ ತಲೆದಂಡ ಆಗಿ ಸಚಿವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಶಾಸಕ ಶ್ರೀವತ್ಸ ಆಗ್ರಹಿಸಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮಾಜಿ ಆಯುಕ್ತ ದಿನೇಶ್ ಕುಮಾರ್ ಭಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ನಗರಾಭಿವೃದ್ಥಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ಈಗ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಿದ್ದಾರೆ. ಅವರನ್ನ ಅಮಾನತು ಮಾಡಿದರೆ ಸಾಕಾಗುವುದಿಲ್ಲ. ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಂಧಿಸಿ ತನಿಖೆಗೆ ಒಳಪಡಿಸಬೇಕು. ಇವರ ಜತೆಗೆ ದಿನೇಶ್ ಕುಮಾರ್ಗಿಂತ ಹಿಂದಿನ ಆಯುಕ್ತರಾಗಿದ್ದ ನಟೇಶ್ ಅವರನ್ನು ಅಮಾನತು ಮಾಡಿ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಿ ತನಿಖೆಗೆ ಒಳಪಡಿಸಿದರೆ ಮುಡಾದ ಅಕ್ರಮಗಳು ಒಂದೊಂದಾಗಿ ಹೊರ ಬರುತ್ತವೆ ಎಂದು ಶಾಸಕರು ಆಗ್ರಹಿಸಿದರು.