ಕರ್ನಾಟಕ

karnataka

ETV Bharat / state

ಕಾಗೇರಿ ಅವರಿಂದ ಉತ್ತರ ಕನ್ನಡ ಜಿಲ್ಲೆಯ ಯಾವ ಗೌರವ ಹೆಚ್ಚಾಗಿದೆ?; ಶಾಸಕ ಹೆಬ್ಬಾರ್ - Shivaram Hebbar

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೇಳಿಕೆ ಸಂಬಂಧ ಶಾಸಕ ಶಿವರಾಮ್ ಹೆಬ್ಬಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

MLA Shivaram Hebbar
ಶಾಸಕ ಶಿವರಾಮ್ ಹೆಬ್ಬಾರ್

By ETV Bharat Karnataka Team

Published : Apr 14, 2024, 12:43 PM IST

ಕಾರವಾರ: ಮಾಡಬಾರದ್ದನ್ನೆಲ್ಲಾ ಮಾಡಿಕೊಂಡು ಕ್ಷೇತ್ರದ ಹಾಗೂ ಜಿಲ್ಲೆಯ ಮಾನವನ್ನು ಹರಾಜು ಹಾಕಿದ್ದಾರೆ ಎಂಬ ಮಾತಿನ ಅರ್ಥದ ಬಗ್ಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ತಾವೇ ಸ್ಪಷ್ಟಪಡಿಸಬೇಕು. ಉತ್ತರ ಕನ್ನಡ ಜಿಲ್ಲೆಯನ್ನು ಇಬ್ಭಾಗ ಮಾಡುವುದಕ್ಕೆ ಹೊರಟಿರುವ ಕಾಗೇರಿ ಅವರಿಂದ ಜಿಲ್ಲೆಯ ಯಾವ ಮಾನ ಗೌರವ ಹೆಚ್ಚಾಗಿದೆ ಅಥವಾ ನನ್ನಿಂದ ಯಾವ ಕಾರಣಕ್ಕೆ ಜಿಲ್ಲೆಯ ಗೌರವಕ್ಕೆ ಧಕ್ಕೆಯಾಗಿದೆ ಎಂಬುವುದನ್ನು ಕಾಗೇರಿ ಅವರು ಉತ್ತರ ಕನ್ನಡ ಜಿಲ್ಲೆಯ ಜನತೆಯ ಮುಂದೆ ಸ್ಪಷ್ಟಪಡಿಸಬೇಕು ಎಂದು ಶಾಸಕ ಶಿವರಾಮ್ ಹೆಬ್ಬಾರ್ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಲೋಕಸಭಾ ಚುನಾವಣೆ ಅಭ್ಯರ್ಥಿ ಕಾಗೇರಿ ಅವರು ಉದ್ದೇಶಪೂರ್ವಕವಾಗಿ ಪಕ್ಷದ ಸಭೆ, ಸಮಾರಂಭ ಹಾಗೂ ಪತ್ರಿಕೆಗಳಲ್ಲಿನ ಜಾಹೀರಾತಿನಲ್ಲಿ ನನ್ನ ಭಾವಚಿತ್ರವನ್ನು ತೆಗೆದು ಹಾಕಿ ಇದೀಗ ಈ ರೀತಿಯಲ್ಲಿ ಮಾತನಾಡುವ ಯಾವ ಅಧಿಕಾರವಿದೆ?. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸುವುದಕ್ಕೆ ಸತತ ಒಂದು ತಿಂಗಳುಗಳ ಕಾಲ ಅವಿರತವಾಗಿ ಅಪಪ್ರಚಾರ ನಡೆಸಿ ನೇರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಪಕ್ಷ ವಿರೋಧಿ ನಡೆಸಿದ ಕೆಲವು ಪ್ರಮುಖರಲ್ಲಿ ಒಬ್ಬರಾದ ನರಸಿಂಹ ಕೋಣೆಮನೆ ಸಹೋದರ ಹರಿಪ್ರಕಾಶ ಕೋಣೆಮನೆ ಅವರಿಗೆ ರಾಜ್ಯ ವಕ್ತಾರ ಜವಾಬ್ದಾರಿಯನ್ನು ನೀಡುವಾಗ ಕಾಗೇರಿ ಅವರಿಗೆ ವಿಷಯ ತಿಳಿಯದೆ ಹೋಗಿತ್ತೆ?, ಪಕ್ಷಕ್ಕೆ ದ್ರೋಹ ಮಾಡಿರುವವರಿಗೆ ಜವಾಬ್ದಾರಿ ಬಹುಮಾನ ನೀಡಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.

ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ತಮ್ಮ ಸೋಲಿಗೆ ಹೆಬ್ಬಾರ್ ಕಾರಣ ಎಂದು ಹೇಳಿದ್ದಾರೆ. ಕಾರವಾರ - ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಶಕ್ತಿ ಅಭ್ಯರ್ಥಿಯ ಸೋಲಿಸುವ ಮಟ್ಟಿಗೆ ಇದೆ ಎಂದರೆ ಸಹೋದರಿ ರೂಪಾಲಿ ನಾಯ್ಕ ಅವರು ಮುಂದಿನ ಚುನಾವಣೆಯಲ್ಲಿಯು ಸಹ ಗೆಲುವು ಸಾಧಿಸುವುದಕ್ಕೆ ಕಷ್ಟವಾಗಲಿದೆ ಎಂದು ತಿಳಿದುಕೊಳ್ಳಬೇಕು. ದ್ವೇಷವನ್ನು ಹರಡುವ ಮಾತುಗಳೇ ಬಂಡವಾಳವನ್ನಾಗಿರಿಸಿಕೊಂಡಿರುವ ಬಸವನಗೌಡ ಪಾಟೀಲ್ ಯತ್ನಾಳ ಅವರೇ ನನ್ನಿಂದ ಪಕ್ಷಕ್ಕೆ ಎಷ್ಟು ಹಾಕಿ ಉಂಟಾಗಿದೆಯೋ ಅದರ ನೂರು ಪಟ್ಟು ಹಾನಿ ಕಳೆದ ಒಂದು ವರ್ಷಗಳಿಂದ ತಮ್ಮ ಮಾತುಗಳಿಂದ ಪಕ್ಷಕ್ಕೆ ಉಂಟಾಗಿದೆ. ಆದರೂ ಸಹ ನಮ್ಮ ಜಿಲ್ಲೆಯ ರಾಜಕೀಯದ ಚಿತ್ರಣದ ಬಗ್ಗೆ ಗೊತ್ತಿರದ ತಾವು ತಿಳಿಯದೆ ಮಾತನಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕಳೆದ 6 ಲೋಕಸಭಾ ಚುನಾವಣೆಯ ಕಾಲಘಟ್ಟದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಪಕ್ಷದಲ್ಲೇ ಉಳ್ಳಿದುಕೊಂಡು ಯಾರು, ಯಾರು ಎನ್ನೂ ಮಾಡಿದ್ದಾರೆ ಎಂಬ ಇತಿಹಾಸ ಗೊತ್ತಿಲ್ಲದೆ ಹೋದಂತಹ ವ್ಯಕ್ತಿ ನಾನಲ್ಲ. ಕೆಲವರು ಆಡದೇ ಮಾಡುತ್ತಾರೆ, ಕೆಲವರು ಆಡಿ ಮಾಡುತ್ತಾರೆ, ಆಡದೇ ಮಾಡುವವರು ಬುದ್ಧಿವಂತರಾಗುತ್ತಾರೆ. ಆಡಿ ಮಾಡುವವರನ್ನು ಬುದ್ಧಿವಂತರು ಎಂದು ಅನಿಸಿಕೊಳ್ಳುವುದಿಲ್ಲ ಇದನ್ನು ಕಾಗೇರಿ ಅವರು ಅರಿತುಕೊಂಡರೇ ಒಳ್ಳೆಯದು ಎಂದು ಹೇಳಿದ್ದಾರೆ.

ಹೆಬ್ಬಾರ್ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಂದಾಗ ನಾನೇ ಅವರನ್ನು ಸಚಿವ ಮಾಡಿದ್ದು ಎಂದು ಕಾಗೇರಿ ಅವರು ಹೇಳಿದ್ದಾರೆ. ಸತ್ಯ ನಮ್ಮ 17 ಶಾಸಕರ ರಾಜಿನಾಮೆಯ ಫಲವೇ ಬಿ.ಎಸ್‌.ಯಡಿಯೂರಪ್ಪ 4ನೇ ಬಾರಿ ಮುಖ್ಯಮಂತ್ರಿಗಳಾಗಿದ್ದು, ಕಾಗೇರಿ ಅವರು ಸ್ಪೀಕರ್‌ ರಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗಿದ್ದು ನಮ್ಮ ತ್ಯಾಗದ ಫಲವೇ. ತಾವೆಲ್ಲರೂ ಸಹ ಅಧಿಕಾರವನ್ನು ಅನುಭವಿಸಿದ್ದೀರಿ ಎಂದು ಕಾಗೇರಿ ಅವರು ಅರಿತುಕೊಳ್ಳಬೇಕು.ಕಾಗೇರಿ ಅವರು ಈ ರೀತಿಯಲ್ಲಿ ಹೇಳಿಕೆಯನ್ನು ನೀಡಿದರೆ ನಾನು ಸಹ ತಕ್ಕ ಉತ್ತರ ನೀಡುತ್ತೇನೆ ಎಂದು ನೆನಪಿರಲಿ ಎಂದು ಹೆಬ್ಬಾರ್ ತಿಳಿಸಿದ್ದಾರೆ.

ಇದನ್ನೂ ಓದಿ:

ABOUT THE AUTHOR

...view details