ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದ (2009-10) ಆರೋಪಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಶನಿವಾರ ಆದೇಶಿಸಿದೆ.
ಒಟ್ಟು 6 ಪ್ರಕರಣಗಳಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಅಂದಿನ ಬಂದರು ಅಧಿಕಾರಿಯಾಗಿದ್ದ ಮಹೇಶ್ ಬಿಳಿಯೆ ಸೇರಿದಂತೆ 7 ಜನರನ್ನು ದೋಷಿಗಳು ಎಂದು ಆದೇಶಿಸಿದ್ದ ನ್ಯಾಯಾಲಯ, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಅಕ್ರಮ ಗಣಿಗಾರಿಕೆ ತನಿಖೆ ವೇಳೆ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸಮಗ್ರ ತನಿಖೆ ನಡೆಸಿ, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಅಪರಾಧಿಗಳಿಗೆ ವಂಚನೆ ಪ್ರಕರಣದಲ್ಲಿ 7 ವರ್ಷ, ಒಳಸಂಚು ಪ್ರಕರಣದಲ್ಲಿ 5 ವರ್ಷ ಮತ್ತು ಕಳ್ಳತನ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈಗಾಗಲೇ ಜೈಲಿನಲ್ಲಿ ಕಳೆದಿರುವ ಶಿಕ್ಷೆ ಪ್ರಮಾಣವನ್ನು ಹೊರತುಪಡಿಸಿ, ಉಳಿದ ಶಿಕ್ಷೆಯನ್ನು ಆರೋಪಿಗಳು ಅನುಭವಿಸಬೇಕಿದೆ.
40 ಕೋಟಿ ರೂ. ದಂಡ; ಸತೀಶ್ ಸೈಲ್ ಜೊತೆಗೆ ಮಹೇಶ್ ಬಿಳಿಯೆ, ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್, ಖಾರದಪುಡಿ ಮಹೇಶ್, ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ. ಇದೇ ವೇಳೆ ಎಲ್ಲಾ ದೋಷಿತರ ವಿರುದ್ಧದ 6 ಪ್ರಕರಣಗಳ ಸಂಬಂಧ ಒಟ್ಟಾರೆ 40 ಕೋಟಿ ರೂ.ಗೂ (6 ಕೋಟಿ ರೂ., 9 ಕೋಟಿ ರೂ., 9 ಕೋಟಿ ರೂ., 9.52 ಕೋಟಿ ರೂ., 9.25 ಕೋಟಿ ರೂ. ಹಾಗೂ 90 ಲಕ್ಷ ರೂ.) ಅಧಿಕ ದಂಡವನ್ನು ಸಹ ನ್ಯಾಯಾಲಯ ವಿಧಿಸಿದೆ. ಜೊತೆಗೆ, ದಂಡದ ಹಣವನ್ನು ಜಪ್ತಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:ಅಕ್ರಮ ಗಣಿಗಾರಿಕೆ ಮೂಲಕ ವಿದೇಶಕ್ಕೆ ಸಾಗಿಸಲು ಕಾರವಾರದ ಬೇಲೆಕೇರಿ ಬಂದರಿಯಲ್ಲಿ 11,312 ಮೆಟ್ರಿಕ್ ಟನ್ ಅದಿರನ್ನು ಸಂಗ್ರಹಿಸಲಾಗಿತ್ತು. ಇದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಅನುಮತಿ ಇಲ್ಲದೇ ಮಲ್ಲಿಕಾರ್ಜುನ ಶಿಪ್ಪಿಂಗ್ ಕಾರ್ಪೊರೇಷನ್ ಮಾಲೀಕರಾಗಿದ್ದ ಸತೀಶ್ ಸೈಲ್ ಅವರು ಇದನ್ನು ವಿದೇಶಕ್ಕೆ ಸಾಗಣೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರತ್ಯೇಕ 6 ಪ್ರಕರಣಗಳು ದಾಖಲಾಗಿದ್ದವು. ಲೋಕಾಯುಕ್ತ ಮತ್ತು ಸಿಬಿಐ ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದವು. ಅರಣ್ಯಾಧಿಕಾರಿಗಳು ವಶಪಡಿಸಿಕೊಂಡ 5,00,000 ಮೆಟ್ರಿಕ್ ಟನ್ ಅದಿರಿನ ಪೈಕಿ 1,29,553.54 ಮೆಟ್ರಿಕ್ ಟನ್ ಅದಿರು ಕಳ್ಳತನವಾಗಿದೆ ಎಂದು ಸಿಬಿಐ ಹೇಳಿತ್ತು.