ರಾಯಚೂರು:"ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕವಾಗುವ ವೇಳೆ ಲೋಕಸಭೆ ಚುನಾವಣೆ ಇತ್ತು. ಹೀಗಾಗಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಲಿ ಅಂತ ಎಲ್ಲ ನೋವನ್ನು ನುಂಗಿಕೊಂಡು ಕೆಲಸ ಮಾಡಿದ್ದೆವು. ಚುನಾವಣೆ ಬಳಿಕ ವರಿಷ್ಠರ ಬಳಿ ಈ ಬಗ್ಗೆ ಮಾತನಾಡಿದ್ದೆವು. ಮುಂಬರು ಡಿಸೆಂಬರ್ ಅಥವಾ ಜನವರಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನಿರ್ಣಯವಾಗುತ್ತದೆ ಎಂಬ ಆಶಾಭಾವನೆಯಲ್ಲಿದ್ದೇವೆ" ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಮ್ಮ ಜೂನಿಯರ್ ಅವರ ಬಗ್ಗೆ ಮಾತನಾಡೋಕೆ ಹೋಗ್ಬೇಡಿ. ಯಡಿಯೂರಪ್ಪ ಬಗ್ಗೆ ಕೇಳಿ, ಅವರ ಬಗ್ಗೆ ಗೌರವವಿದೆ ಎಂದು ಅವರು ಹೇಳಿದರು.
ರಮೇಶ್ ಜಾರಕಿಹೊಳಿ (ETV Bharat) ಬಸನಗೌಡ ಪಾಟೀಲ್ ಯತ್ನಾಳ್, ನಾವು ಒಂದು ಟೀಂ ಆಗಿ ರಾಜ್ಯದಲ್ಲಿ ಪ್ರವಾಸ ಆರಂಭಿಸಿದ್ದೇವೆ. ಪಕ್ಷದ ಇತಿಮಿತಿಯಲ್ಲಿ ಕೆಲಸ ಸ್ಟಾರ್ಟ್ ಮಾಡಿದ್ದೇವೆ. ಇದಕ್ಕೆ ಬೇರೆ ಅರ್ಥ ಮಾಡಿಕೊಳ್ಳೋವಂಥದ್ದೇನಿಲ್ಲ. ಇನ್ನೂ ಹತ್ತು ಹನ್ನೇರಡು ಜನ ನಾಯಕರು ಬೆಳಗಾವಿಯಲ್ಲಿ ಸಭೆ ಮಾಡಿದ್ದೇವೆ. ಅಲ್ಲಿ ನಡೆದ ಚರ್ಚೆ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಲು ಆಗಲ್ಲ. ಪಕ್ಷದ ಚೌಕಟ್ಟಿನಲ್ಲಿ ಬೆಂಗಳೂರಿನ ಸಭೆಯಲ್ಲಿ ನೇರವಾಗಿ ಏನು ಹೇಳಬೇಕು ಹೇಳಿದ್ದೇವೆ. ಡಿಸೆಂಬರ್ ಒಳಗೆ ಎಲ್ಲವೂ ಸರಿ ಆಗತ್ತೆ ಎಂದರು.
130-140 ಸೀಟು ತರಲು ಟೀಂ ಮಾಡಿದ್ದೇವೆ:ಮುಂದಿನ ಒಂದು ವರ್ಷದಲ್ಲಿ ಅಥವಾ ಎರಡು ವರ್ಷದಲ್ಲಿ ಎಲೆಕ್ಷನ್ ಬರತ್ತೋ ಗೊತ್ತಿಲ್ಲ. ಯಾವಾಗ ಬರತ್ತೆ ಆವಾಗ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ಈ ವರೆಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿಲ್ಲ. 130 - 140 ಸ್ಥಾನ ಬರೋದಕ್ಕೆ ಟೀಂ ಮಾಡಿ ಕೆಲಸ ಮಾಡ್ತಿದ್ದೇವೆ. ನಾವು ಸಿಎಂ ಸ್ಥಾನ ಬೇಡ್ತಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು ಅಂತ ಟೀಂ ಮಾಡಿದ್ದೇವೆ. ಕಾಂಗ್ರೆಸ್ ನಲ್ಲಿ ಐದು ಬಾರಿ ಶಾಸಕ ಆಗಿದ್ದೇನೆ. ಬಿಜೆಪಿಯಲ್ಲಿ ಎರಡು ಬಾರಿ ಆಗಿದ್ದೇನೆ. ಬಿಜೆಪಿಯಲ್ಲಿ ಬಂಗಾರದಂತಹ ಕಾರ್ಯಕರ್ತರು ಇದ್ದಾರೆ. ಈ ವರೆಗೆ ಬಿಜೆಪಿ 110 ಸ್ಥಾನ ದಾಟಿಲ್ಲ. ಮುಂದೆ 130-140 ಸೀಟು ತರಲು ಟೀಂ ಮಾಡಿದ್ದೇವೆ ಎಂದು ಹೇಳಿದರು.
ಸಾಮೂಹಿಕ ನಾಯಕತ್ವ ಬೇಕು:ಯತ್ನಾಳ್, ಜಾರಕಿಹೊಳಿ ಇಬ್ಬರಲ್ಲ. ಸಾಮೂಹಿಕ ನಾಯಕತ್ವ ಬೇಕು. ಒಬ್ಬರಿಗೆ ನಾಯಕತ್ವ ಕೊಟ್ಟಿದ್ದರಿಂದ ಬಿಜೆಪಿ ಹೀಗಾಗಿದೆ. 20-25 ಲೀಡರ್ಸ್ ತಯಾರು ಮಾಡಿ ಟಾಸ್ಕ್ ಕೊಡಿ. ಒಬ್ಬರು ಬಿಟ್ಟು ಹೋದರೆ 24 ಜನ ಉಳಿತಾರೆ ಅಂತ ಹೇಳಿದ್ದೇವೆ. ಒಬ್ಬರ ಮೇಲೆ ಡಿಪೆಂಡ್ ಆಗಬಾರದು. ಆ ಪ್ರಕಾರ ನಾಯಕರು ತೀರ್ಮಾನ ತೆಗೆದುಕೊಳ್ತಾರೆ. ನನಗೆ ಆರು ಜಿಲ್ಲೆ, ಯತ್ನಾಳ್ ಆರು ಜಿಲ್ಲೆ, ಪ್ರತಾಪ್ ಸಿಂಹ ನಾಲ್ಕು ಜಿಲ್ಲೆ, ಲಿಂಬಾವಳಿಗೆ ಕೆಲವು ಜಿಲ್ಲೆ. ಹೀಗೆ ತೀರ್ಮಾನ ಮಾಡಿದ್ದೇವೆ. ಪಕ್ಷ ಸಂಘಟನೆಗೆ ಯಾರೂ ಬೇಡ ಅನ್ನಲ್ಲ. ನಾವೇನು ಅಧ್ಯಕ್ಷ ಮಾಡು ಅಂತ ಬೇಡಿಲ್ಲ. ವಿಪಕ್ಷ ನಾಯಕ ಮಾಡಿ ಅಂದಿಲ್ಲ. ನಮ್ಮ ಕಾರ್ಯಕರ್ತರು ಭಾರಿ ನರ್ವಸ್ ಆಗಿದ್ದಾರೆ. ಅವರನ್ನ ಹೊರ ತಂದು ಪಕ್ಷ ಸಂಘಟನೆ ಮಾಡಲು ಇದನ್ನ ಮಾಡಿದ್ದೇವೆ. ಮುಂದಿನ ವಾರ ಬಳ್ಳಾರಿಗೆ ಹೋಗ್ತಿನಿ ಎಂದರು.
ಹುಲಿಯಂತಿದ್ದ ಸಿದ್ದರಾಮಯ್ಯ ಇಲಿಯಂತಾಗಿದ್ದಾರೆ:ಸಿದ್ದರಾಮಯ್ಯ ಅವರಿಗೆ ಕೊನೆಗಳಿಗೆಯಲ್ಲಿ ಈ ಪರಿಸ್ಥಿತಿ ಬರಬಾರದಾಗಿತ್ತು. ಯಾವುದೇ ಒಂದು ಜಾತಿಗೆ ಸೀಮಿತವಾಗಿ ಮುಸ್ಲಿಂಮರು ಅನ್ನುವಾಗಿಲ್ಲ, ಕುರುಬರು ಎನ್ನುವಾಗಿಲ್ಲ, ವಾಲ್ಮೀಕಿ ಅನ್ನುವಾಗಿಲ್ಲ. ಲಿಂಗಾಯತರು ಅನ್ನುವಾಗಿಲ್ಲ. ಏನೂ ಬಾಯಿಬಿಡದಂಥ ಪರಿಸ್ಥಿತಿಯಲ್ಲಿದ್ದು, ಹುಲಿಯಾಗಿ ಇದ್ದವಾ ಇಲಿಯಾಗಿ ಬಿಟ್ಟಿದ್ದಾರೆ. ನಾವು ಮಂತ್ರಿಯಾಗಿದ್ದಾಗ ಅವರು ಮಾತನಾಡುವ ಸ್ಟೈಲ್ ನೋಡಿ ಇಂಪ್ರೆಸ್ ಆಗುತ್ತಿದ್ದೆವು. ಈಗ ನಮಗೆ ಬೇಜಾರ ಆಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ಕುಮಾರಸ್ವಾಮಿ ಬಗ್ಗೆ ಜಮೀರ್ ಹೇಳಿಕೆ: ಜನಾಂಗೀಯ ನಿಂದನೆ ಎಂದು ಜೆಡಿಎಸ್, ಬಿಜೆಪಿ ನಾಯಕರು ಕಿಡಿ