ಬೆಂಗಳೂರು: ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಆದೇಶ ಹಿನ್ನೆಲೆಯಲ್ಲಿ ಮುನಿರತ್ನ ಪರಪ್ಪನ ಅಗ್ರಹಾರ ಜೈಲಿಗೆ ಹೋಗುವುದು ಖಚಿತವಾಗಿದೆ. ನ್ಯಾಯಾಂಗ ಬಂಧನ ಅವಧಿ ಅಂತ್ಯ ಹಿನ್ನೆಲೆಯಲ್ಲಿ ಮುನಿರತ್ನ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂಬಂಧ ವಾದ ಮಂಡಿಸಿದ ಮುನಿರತ್ನ ಪರ ವಕೀಲ ಅಶೋಕ ಹಾರನಹಳ್ಳಿ, ರಿಮ್ಯಾಂಡ್ ಅರ್ಜಿಯನ್ನ ಆರೋಪಿ ಪರ ವಕೀಲರಿಗೆ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶವಿದ್ದರೂ ತನಿಖಾಧಿಕಾರಿಗಳು ರಿಮ್ಯಾಂಡ್ ಅರ್ಜಿ ನೀಡಿಲ್ಲ. ಮುನಿರತ್ನ ವಿರುದ್ಧ ಜಾತಿ ನಿಂದನೆ ಹಾಗೂ ಜೀವ ಬೆದರಿಕೆಯಡಿ ಸೆ.13ರ ರಾತ್ರಿ ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ. ದೂರು ಬರುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡು ಯಾವುದೇ ವಿಚಾರಣೆ ಮಾಡದೇ ಏಕಾಏಕಿ ಪೊಲೀಸರು ಬಂಧಿಸಿದ್ದಾರೆ ಎಂದರು.
ಇದಕ್ಕೂ ಮುನ್ನ ಜಾಮೀನು ಅರ್ಜಿಗೆ ಸರ್ಕಾರಿ ಪರ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದರು. ಆಕ್ಷೇಪಣೆ ಸಲ್ಲಿಸಲು ಒಂದು ದಿನ ಕಾಲಾವಕಾಶ ಕೇಳಿದರು. ಇದೇ ವೇಳೆ ದೂರುದಾರ ಪರ ವಕೀಲರು ನಾಳೆ ಆಕ್ಷೇಪಣೆ ಸಲ್ಲಿಸುವುದಾಗಿ ತಿಳಿಸಿದರು. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ನಾಳೆಗೆ ಮುಂದೂಡಿದರು.
ಇದನ್ನೂ ಓದಿ:ಮುನಿರತ್ನ ಪ್ರಕರಣದ ಬಗ್ಗೆ ಸಮುದಾಯದ ನಾಯಕರು, ಸ್ವಾಮೀಜಿಗಳು ಮಾತಾಡಬೇಕು: ಡಿಸಿಎಂ ಡಿಕೆಶಿ - Muniratna Case