ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ವೈರಲ್ ಹಿಂದೆ ತಮ್ಮ ಕೈವಾಡವಿದೆ ಎಂಬ ಆರೋಪವನ್ನು ಅರಕಲಗೂಡು ಶಾಸಕ ಎ. ಮಂಜು ತಳ್ಳಿಹಾಕಿದ್ದಾರೆ.
ಆರೋಪಿ ನವೀನ್ ಗೌಡ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಎ. ಮಂಜು ಅವರಿಗೆ ಪೆನ್ಡ್ರೈವ್ ನೀಡಿದ್ದೆ ಎಂದು ಪೋಸ್ಟ್ ಮಾಡಿದಕ್ಕೆ ಪ್ರತಿಕ್ರಿಯಿಸಿದ ಅವರು, 'ಇದು ದೇವೇಗೌಡರ ಕುಟುಂಬದಿಂದ ನನ್ನನ್ನು ದೂರ ಮಾಡುವ ಪ್ರಯತ್ನ' ಎಂದಿದ್ದಾರೆ.
ಎಸ್ಐಟಿ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಸಿಐಡಿ ಕಚೇರಿ ಬಳಿ ಮಾತನಾಡಿದ ಎ. ಮಂಜು, "ಏಪ್ರಿಲ್ 20ರಂದು ಸಿಕ್ಕ ಪೆನ್ಡ್ರೈವನ್ನು ಏ. 21ರಂದು ನನಗೆ ಮದುವೆ ಮಂಟಪದಲ್ಲಿ ಕೊಟ್ಟಿರುವುದಾಗಿ ಫೇಸ್‌ಬುಕ್‌ನಲ್ಲಿ ನವೀನ್ ಗೌಡ ಹೇಳಿದ್ದಾನೆ. ಆತ ನನಗೆ ಪರಿಚಯವೇ ಇಲ್ಲ. ನನಗೆ ಪೆನ್ಡ್ರೈವ್ ಯಾಕೆ ಕೊಡಬೇಕು ಅನ್ನೋದನ್ನು ಮನಸ್ಸು ಮುಟ್ಟಿಕೊಂಡು ಹೇಳಲಿ. ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಅಂತಾ ನವೀನ್ ಹೇಳುತ್ತಿದ್ದಾನೆ. ಎಸ್ಐಟಿ ತನಿಖೆಯ ದಿಕ್ಕು ತಪ್ಪಿಸಲು ಈ ಹೇಳಿಕೆ ಕೊಟ್ಟಿದ್ದಾರೆ' ಎಂದು ಕಿಡಿಕಾರಿದರು.
ಏ.21ರಂದು ಮದುವೆ ಮಂಟಪಕ್ಕೆ ಹೋಗಿದ್ದು ನಿಜ, ಆದರೆ ನವೀನ್ ಗೌಡನನ್ನು ಭೇಟಿಯಾಗಲೇ ಇಲ್ಲ. ಸತ್ಯ ಹೊರಗೆ ಬರಲಿ ಎಂದು ಇವತ್ತು ದೂರು ಕೊಟ್ಟಿದ್ದೀನಿ. ದೇವೇಗೌಡರು ನನಗೆ ಕೊನೆಯ ಅವಕಾಶ ನೀಡಿದ್ದಾರೆ. ನಾನು ಜೆಡಿಎಸ್ನಿಂದ ಗೆದ್ದು ಶಾಸಕನಾಗಿದ್ದೇನೆ. ದೇವೇಗೌಡರ ಕುಟುಂಬದಿಂದ ನನ್ನನ್ನು ದೂರ ಮಾಡುವ ಉದ್ದೇಶದಿಂದ ಈ ರೀತಿ ಕೃತ್ಯ ಮಾಡಿದ್ದಾರೆ. ಎಸ್ಐಟಿ ಅಧಿಕಾರಿಗಳು ನವೀನ್ನನ್ನು ಬಂಧಿಸಬೇಕು. ಇದರ ಹಿಂದೆ ಯಾರೇ ಇದ್ದರೂ ಸಹ ಶಿಕ್ಷೆಯಾಗಲೇಬೇಕು ಎಂದು ಎಂ ಮಂಜು ಆಗ್ರಹಿಸಿದರು.
ಬಳಿಕ ಪ್ರಜ್ವಲ್ ರೇವಣ್ಣ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, 'ಪ್ರಜ್ವಲ್ ರೇವಣ್ಣ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಘಟನೆ ಬಳಿಕ ದೇವೇಗೌಡರ ನಿವಾಸಕ್ಕೆ ಹೋಗಿದ್ದೆ. ಧೈರ್ಯವಾಗಿ ಇರಿ ಅಂತಾ ಹೇಳಿ ಬಂದಿದ್ದೇನೆ. ರೇವಣ್ಣರನ್ನೂ ಭೇಟಿ ಮಾಡಿ ಬಂದಿದ್ದೇನೆ. ಜಾಮೀನು ವಿಚಾರಣೆ ನಡೆಯುತ್ತಿದೆ, ಏನಾಗಲಿದೆ ಎಂಬುದನ್ನು ನೋಡಬೇಕು ಎಂದರು.
ಇದನ್ನೂ ಓದಿ:ರೇವಣ್ಣ ಜಾಮೀನು ಅರ್ಜಿ ವಿಚಾರಣೆ: ವಾದ - ಪ್ರತಿವಾದ ಆಲಿಸಿ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ - Revanna bail application