ಬೆಂಗಳೂರು: ದೇಶದೆಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಟೆಕ್ಕಿ ಆತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸಿಟಿ ಸಿವಿಲ್ ನ್ಯಾಯಾಲಯವು ನಾಳೆಗೆ (ಮಂಗಳವಾರ) ಮುಂದೂಡಿದೆ.
ಮಾರತ್ ಹಳ್ಳಿ ಪೊಲೀಸರಿಂದ ಬಂಧಿತರಾಗಿದ್ದ ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ ಹಾಗೂ ಬಾಮೈದ ಅನುರಾಗ್ ಸಿಂಘಾನಿಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ಆರೋಪಿಗಳ ಪರ ವಕೀಲರು ವಾದ ಮಂಡಿಸಿ, ಆರೋಪಿಗಳಿಗೆ ಜಾಮೀನು ಮಾನ್ಯ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಸರ್ಕಾರ ಪರ ಅಭಿಯೋಜಕರಾದ ಭಾಗಲಕ್ಷ್ಮೀ ಅವರು ಆರೋಪಿತರಿಗೆ ಜಾಮೀನು ನೀಡಬಾರದೆಂದು ತಕರಾರು ಅರ್ಜಿ ಸಲ್ಲಿಸಿ ನಾಳೆ ವಾದ ಮಂಡಿಸುವುದಾಗಿ ತಿಳಿಸಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯವು ನಾಳೆಗೆ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ನ್ಯಾಯ ಸಿಗುವವರೆಗೂ ಮಗನ ಚಿತಾಭಸ್ಮ ವಿಸರ್ಜಿಸಲ್ಲ: ಮೃತ ಟೆಕ್ಕಿ ಅತುಲ್ ಸುಭಾಷ್ ತಂದೆಯ ಮಾತು
ಪತ್ನಿ ಹಾಗೂ ಮನೆಯವರು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಸುದೀರ್ಘ ಡೆತ್ ನೋಟ್ ಬರೆದು ಡಿ.9ರಂದು ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನೆಕೊಳಲಿನಲ್ಲಿದ್ದ ಮನೆಯಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಮೊಬೈಲ್ನಲ್ಲಿ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಷ್ಟ್ರದೆಲ್ಲೆಡೆ ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ 108ರ ಆತ್ಮಹತ್ಯೆಗೆ ಪ್ರಚೋದನೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಡಿ.20ರಂದು ನಿಖಿತಾಳನ್ನು ಹರಿಯಾಣದ ಗುರುಗ್ರಾಮ ಹಾಗೂ ತಾಯಿ ಹಾಗೂ ಸಹೋದರರನ್ನು ಉತ್ತರಪ್ರದೇಶದ ಪ್ರಯಾಗ್ರಾಜ್ನ ಹೋಟೆಲ್ವೊಂದರಲ್ಲಿ ಬಂಧಿಸಿದ್ದರು. ಸದ್ಯ ಮೂವರು ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: 'ಅಡುಗೆ ಚೆನ್ನಾಗಿ ಮಾಡಿಲ್ಲವೆಂದು ಕಿರುಕುಳ ನೀಡುತ್ತಿದ್ದ, ನಾನು ನಿಜವಾದ ಸಂತ್ರಸ್ತೆ': ಅತುಲ್ ಪತ್ನಿ ನಿಖಿತಾ ಹೇಳಿಕೆ