ಬೆಂಗಳೂರು :ನಾನು ಶ್ರೀರಾಮುಲು ವಿರುದ್ದ ಯಾವುದೇ ಛಾಡಿ ಹೇಳಿಲ್ಲ. ಅವರು ಶತ್ರುಗಳ ಜೊತೆ ಕೈ ಜೋಡಿಸಿರುವುದು ವಿಪರ್ಯಾಸ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಅದರ ಬಗ್ಗೆ ಸ್ಪಷ್ಟನೆ ಕೊಡುವುದಕ್ಕೆ ಬಂದಿದ್ದೇನೆ. ಮೊದಲಿಗೆ ನಾನು ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿಗೆ ಸೇರಿದ್ದೇನೆ. ನನ್ನ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನ ಮಾಡಿದ್ದೇನೆ. 18 ಕ್ಷೇತ್ರದಲ್ಲಿ ಓಡಾಟ ಮಾಡಿದ್ದೇನೆ. ಬಳ್ಳಾರಿ ಬಿಟ್ಟು ಬೇರೆ ಕಡೆಗಳಲ್ಲಿ ಓಡಾಟ ಮಾಡಿದ್ದೇನೆ. ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಅಂತ ಹೇಳಿದ್ದೇನೆ ಎಂದರು.
ಬಳ್ಳಾರಿಗೆ ಹೋಗಲು ಆಗುತ್ತಿರಲಿಲ್ಲ. ಅದಾದ ಮೇಲೆ ನನಗೆ ಸುಪ್ರೀಂಕೋರ್ಟ್ ಅನುಮತಿ ಕೊಟ್ಟಿತು. ಸಂಡೂರು ಎಸ್‌ಟಿ ಮೀಸಲು ಕ್ಷೇತ್ರ. ನಾನು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ರಾಮುಲು ಅವರು ಮೂರು ದಿನ ತಡವಾಗಿ ಸಂಡೂರು ಕ್ಷೇತ್ರಕ್ಕೆ ಬಂದ್ರು. ಅವರೊಟ್ಟಿಗೆ ನಾನು ಕೆಲಸ ಮಾಡಿದ್ದೇನೆ. ಸಿಎಂ ಆದಿಯಾಗಿ ಸರ್ಕಾರವೇ ಬಂದು ಕುಳಿತಿತ್ತು. ಹಣದ ಹೊಳೆ ಹರಿಸಿದ್ರು, ಹೀಗಾಗಿ, ನಮಗೆ ಸೋಲಾಯಿತು. ನಾನು ಛಾಡಿ ಹೇಳುವ ಕೆಳಮಟ್ಟಕ್ಕೆ ಹೋಗುವುದಿಲ್ಲ. ಅವರಿಗೆ ಅಭದ್ರತೆ ಕಾಡುತ್ತಿರಬೇಕು ಎಂದು ದೂರಿದರು.
ಹನುಮಂತುಗೆ ನಾನು ಟಿಕೆಟ್ ಕೊಡಿಸಲಿಲ್ಲ:ಸಂಡೂರು ವಿಧಾನಸಭಾ ಕ್ಷೇತ್ರದ ಉಪ -ಚುನಾವಣೆಯಲ್ಲಿ ಬಂಗಾರು ಹನುಮಂತುಗೆ ನಾನು ಟಿಕೆಟ್ ಕೊಡಿಸಲಿಲ್ಲ. ರಾಮುಲು ಅವರು ಈ ರೀತಿ ಮಾತನಾಡಿದ್ದಕ್ಕೆ ಸಾಕಷ್ಟು ಕಾರಣಗಳಿದೆ. ರಾಮುಲುಗೆ ಜನರ ಬೆಂಬಲ ಸಂಪೂರ್ಣವಾಗಿ ಕಳೆದು ಹೋಗಿದೆ. ರಾಮುಲು ಅವರಿಗೆ ನನ್ನ ಬಗ್ಗೆ ಗೊತ್ತು. ಅವರು ಬಳ್ಳಾರಿಯಲ್ಲಿ ಸೋತಿದ್ದಾರೆ ಅಂದರೆ, ಅವರೇ ಆತ್ಮ ವಿಮರ್ಶೆ ಮಾಡಬೇಕು. ರಾಮುಲು ಅವರ ಬಗ್ಗೆ ನಾನು ಹೈಕಮಾಂಡ್ ನಾಯಕರ ಬಳಿ ಹೇಳುವ ಕೀಳು ವ್ಯಕ್ತಿ ಅಲ್ಲ. ಅವರಿಗೆ ಅಭದ್ರತೆ ಇದೆ. ರಾಮುಲು ಅವರಿಗೆ ಇದೇ ಆಗಿರಬಹುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನೊಬ್ಬ ವಾಲ್ಮೀಕಿ ಸಮುದಾಯದ ನಾಯಕ ಬಂದರೆ ನನ್ನ ರಾಜಕೀಯ ಭವಿಷ್ಯಕ್ಕೆ ಪೆಟ್ಟು ಬೀಳಬಹುದು ಎಂಬ ಆತಂಕ ಇರಬಹುದು. ಅದು ನನಗೆ ಗೊತ್ತಿಲ್ಲ ಎಂದರು.
ಸದಾನಂದಗೌಡರ ನೇತೃತ್ವದಲ್ಲಿ ತಂಡ ಮಾಡಿದ್ದಾರೆ. ಅವರು ವರದಿ ಏನು ಮಾಡಿದ್ದಾರೋ ಗೊತ್ತಿಲ್ಲ. ರಾಮುಲುಗೆ ನಾನು ಒಂದು ವಿಷಯ ಹೇಳುತ್ತೇನೆ. ನನ್ನ ಮಕ್ಕಳ ಮೇಲೆ ಎಷ್ಟು ಪ್ರೀತಿ ವಿಶ್ವಾಸ ಇದೆಯೋ ಅಷ್ಟೇ ಪ್ರೀತಿ ವಿಶ್ವಾಸ ರಾಮುಲು ಮೇಲಿದೆ. ನಾನು 14 ವರ್ಷ ಬಳ್ಳಾರಿಗೆ ಹೋಗುವುದಕ್ಕೆ ಆಗಿರಲಿಲ್ಲ. ಆಗ ಬಳ್ಳಾರಿ ಜನರ ವಿಶ್ವಾಸವನ್ನು ಗಳಿಸಬೇಕಾಗಿತ್ತು. ಒಬ್ಬ ರಾಜ್ಯ ಮಟ್ಟದ ನಾಯಕನಿಗೆ ಸ್ವಂತ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗುತ್ತಿಲ್ಲ ಅಂದರೆ ಶ್ರೀರಾಮುಲು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಜಾರಕಿಹೊಳಿ ಮಣಿಸಲು ಡಿಕೆಶಿ, ಶ್ರೀರಾಮುಲ ಅವರನ್ನ ಕರೆಯುತ್ತಿದ್ದಾರೆ :ನನಗೆ ಸಾಯುವವರೆಗೂ ರಾಮುಲು ಸ್ನೇಹಿತ. ಶ್ರೀರಾಮುಲು ಯಾವತ್ತು ನನಗೆ ಮಿತ್ರನೇ. ಆದರೆ ಶತ್ರುಗಳ ಜೊತೆ ಸೇರಿ ಮಾಡುವುದು ಸರಿಯಲ್ಲ. ಹೇಗಾದರೂ ಮಾಡಿ ಸತೀಶ್ ಜಾರಕಿಹೊಳಿ ಮಣಿಸಲು ಶ್ರೀರಾಮುಲುನನ್ನು ಕಾಂಗ್ರೆಸ್ ಪಕ್ಷಕ್ಕೆ ಡಿ ಕೆ ಶಿವಕುಮಾರ್ ಕರೆಯುತ್ತಿದ್ದಾರೆ. ಸತೀಶ್ ಜಾರಕಿಹೊಳಿಯನ್ನು ಸೋಲಿಸಲು ಯಾರಾದರು ಬೇಕು ಅಂತ ಡಿಕೆಶಿ ಅವರು ಹೇಗಾದರು ಮಾಡಿ ಶ್ರೀರಾಮುಲುರನ್ನು ಪಕ್ಷಕ್ಕೆ ಕರೆಯಲು ಯತ್ನಿಸುತ್ತಿದ್ದಾರೆ. ಪಕ್ಷ ಬಿಡುವುದು ಅವರಿಗೆ ಬಿಟ್ಟ ವಿಚಾರ. ಅವರು ಪಕ್ಷ ಬಿಡುವ ಬಗ್ಗೆ ಬಳ್ಳಾರಿಯಲ್ಲಿ ಜನರು ಮಾತನಾಡುತ್ತಿದ್ದಾರೆ. ಆದರೆ ಹೋಗೋದೇ ಆದರೆ ನನ್ನ ಮೇಲೆ ಆರೋಪ ಮಾಡಿ ಹೋಗುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ:ಪಕ್ಷ ಬಿಡೋದು ರಾಮುಲು ವೈಯಕ್ತಿಕ ವಿಚಾರ. ಪಕ್ಷ ಬಿಟ್ಟು ಹೋದ್ರೆ ಹೋಗಲಿ. ಆದ್ರೆ ನನ್ನ ಮೇಲೆ ಆರೋಪ ಮಾಡಿ ಹೋಗೋದು ಸರಿಯಲ್ಲ. ಅವರು ಕಾಂಗ್ರೆಸ್ಗೆ ಹೋಗ್ತಾರಾ ಇನ್ನೆಲ್ಲಿಗೆ ಹೋಗ್ತಾರೆ ಅವರಿಗೆ ಬಿಟ್ಟಿದ್ದು. ಡಿಕೆಶಿ ಅವರು ಸತೀಶ್ ಜಾರಕಿಹೊಳಿಯವರನ್ನು ಮಣಿಸಲು ರಾಮುಲುನ ಪಕ್ಷಕ್ಕೆ ಹೇಗಾದರೂ ಕರೆದುಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ. ರಾಮುಲುಗೆ ಬಳ್ಳಾರಿಯಲ್ಲಿ ಇರೋ ವಾತಾವರಣ ನೋಡಿಕೊಂಡು ಡಿಕೆಶಿ ಅವರನ್ನು ಕರೆದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಈ ಕುರಿತು ಬಳ್ಳಾರಿ ಭಾಗದಲ್ಲೆಲ್ಲ ಜನ ಮಾತಾಡ್ತಿದ್ದಾರೆ. ಇಡೀ ಬಳ್ಳಾರಿಯಲ್ಲಿ ಇದರ ಬಗ್ಗೆ ದೊಡ್ಡ ಸುದ್ದಿ ಹಬ್ಬಿದೆ ಎಂದು ಇದೇ ವೇಳೆ ತಿಳಿಸಿದರು.
ಅಂದು ಚಾಕು, ಲಾಂಗು ಹಿಡಿದುಕೊಂಡು ಬಂದಿದ್ರು : ಇದೇ ವೇಳೆ ಹಳೆಯ ಘಟನೆಯನ್ನು ಮೆಲುಕು ಹಾಕಿದ ಜನಾರ್ದನ ರೆಡ್ಡಿ, ರಾಮುಲು ಅವರನ್ನು ನಾನು ಬಾಲ್ಯದಿಂದಲೂ ನೋಡಿದ್ದೇನೆ. ರಾಮುಲು ಅವರ ಮಾವ ರೈಲ್ವೇ ಬಾಬು ಅವರನ್ನು ಕೊಲೆ ಮಾಡಲಾಗುತ್ತದೆ. 1991ರಲ್ಲಿ ಆದ ಭೀಕರ ಕೊಲೆ ಅದು. ಆಗ ರಾಜಕೀಯ ಶತ್ರುಗಳ ವಿರುದ್ಧ ಪ್ರತೀಕಾರ ತೀರಿಸಲು ಶ್ರೀರಾಮುಲು ಮುಂದಾಗಿದ್ದರು. ಅವರು ಚಾಕು, ಬೆನ್ನಿಗೆ ಲಾಂಗು ಹಿಡಿದುಕೊಂಡು 40 ಜನ ಬೆಂಬಲಿಗರ ಜೊತೆ ಬಂದಿದ್ರು. ಅಂದು ರಾಮುಲು ಅವರನ್ನು ಕಾಪಾಡಿಕೊಳ್ಳಬೇಕಾದ ಸ್ಥಿತಿ ಇತ್ತು. ಅವರ ಮೇಲೂ ಜೀವ ಬೆದರಿಕೆ ಇತ್ತು. ರಕ್ಷಣೆಗಾಗಿ ರಾಮುಲು ಹುಡುಗರ ಜೊತೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರು. ಅಂದು ರಾಮುಲು ಅವರನ್ನು ನಾವು ಉಳಿಸಿಕೊಳ್ಳಬೇಕಾಗಿತ್ತು. ನಮ್ಮ ತಾಯಿ ಕಾಪಾಡು ಅವನನ್ನು ಎಂದಿದ್ರು. ಅಂದು ನಾನು ಅವರ ಜೊತೆಗೆ ನಿಂತೆ. ನಾನು ಅವರನ್ನು ಉಳಿಸಿಕೊಂಡೆ ಎಂದು ಹೇಳಿದರು.