ಶಿವಮೊಗ್ಗ:ನನ್ನ ವಿರುದ್ದ ನ್ಯಾಯಾಧೀಶರ ಮುಂದೆ ಆರೋಪ ಮಾಡಿರುವ ಮೆಸ್ಕಾಂ ಇಂಜಿನಿಯರ್ ಶಾಂತಕುಮಾರಸ್ವಾಮಿ ಯಾರೆಂದು ನನಗೆ ಗೊತ್ತಿಲ್ಲ ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಶಾಂತಕುಮಾರ್ ನಿನ್ನೆ ಹೈಕೋರ್ಟ್ನ ಏಕ ಸದಸ್ಯ ಪೀಠದೆದುರು, ಸಾಗರದ ಡಿವೈಎಸ್ಪಿ ಗೋಪಾಲ ನಾಯಕ್ ಹಾಗೂ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ನನಗೆ ಬೆದರಿಕೆ ಹಾಕಿ ಹಣ ಪಡೆಯಲು ಯತ್ನಿಸಿದರು. ನಾನು ಈ ವಿಚಾರವನ್ನು ರೆಕಾರ್ಡ್ ಮಾಡಿ ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಇದರಿಂದಾಗಿ ಇಬ್ಬರೂ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ನನಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದರು.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ಆತ ಸಾಗರ ತಾಲೂಕು ತಾಳಗುಪ್ಪದ ಮೆಸ್ಕಾಂ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ. ಅವರು ಯಾವ ಕುರಿತು ಆರೋಪ ಮಾಡಿದ್ದಾರೆ ಅಂತ ನನಗೆ ಗೊತ್ತಿಲ್ಲ. ನಾನು ಫೋನ್ ಮಾಡಿಲ್ಲ, ಮಾತನಾಡಿಸಿಲ್ಲ ಎಂದರು.