ಗಂಗಾವತಿ : ನನ್ನ ಮೇಲೆ ಕೇವಲ ನಾಲ್ಕೈದು ಕೇಸುಗಳಿವೆ. ಇಂದಲ್ಲ ನಾಳೆ ಇತ್ಯರ್ಥವಾಗುತ್ತವೆ. ಆದರೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಬೇಲ್ ಮೇಲೆ ಹೊರಗಿದ್ದಾರೆ. ಅಲ್ಲದೆ, ಸಚಿವ ನಾಗೇಂದ್ರ ಮೇಲೆ ಕೇಸುಗಳು ಎಷ್ಟಿವೆ ಗೊತ್ತಾ? ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಪ್ರಶ್ನಿಸಿದರು.
ಬಿಜೆಪಿಗೆ ಮರು ಸೇರ್ಪಡೆಗೊಂಡ ಬಳಿಕ ಮೊದಲ ಬಾರಿಗೆ ಗಂಗಾವತಿಗೆ ಆಗಮಿಸಿದ್ದ ಜನಾರ್ದನ ರೆಡ್ಡಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರೆಡ್ಡಿ ಮೇಲೆ ಕೇಸುಗಳಿರುವ ಕಾರಣಕ್ಕೆ ಹೆದರಿ ಬಿಜೆಪಿ ಸೇರಿದ್ದಾರೆ ಎಂಬ ಸಚಿವ ಎನ್. ನಾಗೇಂದ್ರ ಟೀಕೆಗೆ ಪ್ರತ್ಯುತ್ತರ ನೀಡಿದರು. ನಾನು ಕೆಆರ್ಪಿಪಿ ಪಕ್ಷದ ಏಕೈಕ ಶಾಸಕನಾಗಿದ್ದೇನೆ. ಹೀಗಾಗಿ ನಾನು ಬಿಜೆಪಿ ಸೇರಿರುವುದಕ್ಕೆ ಕಾನೂನು ತೊಡಕು ಇಲ್ಲ. ಆದರೆ ಕಾನೂನು ಗೊತ್ತಿಲ್ಲದವರು ಈ ರೀತಿಯಾಗಿ ಹೇಳುತ್ತಿದ್ದಾರೆ. ನಾಗೇಂದ್ರ ಮೇಲೆ 32 ಕೇಸ್ಗಳಿವೆ. ಸಂತೋಷ ಲಾಡ್ ಗಣಿಯನ್ನು ಬಂದ್ ಮಾಡಲಾಗಿದೆ. ಎಐಸಿಸಿ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಹ ಬೇಲ್ ಮೇಲೆ ಹೊರಗಡೆ ಇದ್ದಾರೆ ಎಂದು ರೆಡ್ಡಿ ತಿರುಗೇಟು ನೀಡಿದರು.
ನನಗೆ ಮರುಜನ್ಮವನ್ನು ಗಂಗಾವತಿ ನೀಡಿದೆ. ಬಿಜೆಪಿ ಸೇರಿದ ನಂತರವೂ ನಾನು ಗಂಗಾವತಿ ಮರೆಯೋದಿಲ್ಲ. ಬಿಜೆಪಿ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧವಾಗಿರುತ್ತೇನೆ. ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಗೆಲುವಿಗೆ ಶ್ರಮಿಸುತ್ತೇನೆ. ಆತನ ಜೊತೆ ವಾಕ್ ಮಾಡಿದಷ್ಟು ಸುಲಭಕ್ಕೆ ಬಳ್ಳಾರಿಯಲ್ಲಿ ನಾನು ಪ್ರಚಾರ ಮಾಡುತ್ತೇನೆ. ಕೊಪ್ಪಳ, ರಾಯಚೂರು, ಬಳ್ಳಾರಿಯಲ್ಲಿ ಹೆಚ್ಚು ಗಮನ ಕೇಂದ್ರೀಕರಿಸುತ್ತೇನೆ. ಅಲ್ಲದೇ ರಾಜ್ಯದ ನಾಯಕರು ಈಗಾಗಲೇ ಎಲ್ಲೆಲ್ಲಿ ನಾನು ಹೋಗಬೇಕು ಎಂದು ಹೇಳಿದ್ದು, ಅಲ್ಲಿಗೆ ಹೋಗುತ್ತೇನೆ. ಪಕ್ಷ ಎಲ್ಲಿ ಪ್ರಚಾರ ಮಾಡಲು ಸೂಚಿಸುತ್ತದೆಯೊ ಅಲ್ಲಿ ಪ್ರಚಾರ ಮಾಡುತ್ತೇನೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಲು ಶ್ರಮಿಸುತ್ತೇನೆ. ಕೇಂದ್ರ ಸರಕಾರವೇ ನಮ್ಮದು ಇರುವಾಗ ಗಂಗಾವತಿ ಅನುದಾನಕ್ಕೆ ಬರವಿಲ್ಲ. ಸಂಗಣ್ಣ ಕರಡಿ ಈ ಭಾಗದ ದೊಡ್ಡ ಶಕ್ತಿ. ಅವರು ಬಿಜೆಪಿ ಬಿಡುತ್ತೇನೆ ಎಂದಿಲ್ಲ ಎಂದು ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.