ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾವೇರಿ: "ಬಿಜೆಪಿರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಜೊತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ರಾಣೆಬೆನ್ನೂರು ತಾಲೂಕಿನ ಗ್ರಾಮದ ಕೋಡಿಯಾಲ ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅಪ್ಪ-ಮಕ್ಕಳ ಜೊತೆಗೆ ನಾನು ರಾಜಿಯಾಗಬೇಕಾ? ನನಗೆ ರಾಜಿ ಅವಶ್ಯಕತೆ ಇಲ್ಲ. ವಿಜಯೇಂದ್ರನಿಂದ ನನಗೇನೂ ಆಗಬೇಕಾಗಿಲ್ಲ" ಎಂದರು.
"ನಾನೇನು ಲೋಕಸಭೆ ಟಿಕೆಟ್ ಪಡೆಯುತ್ತಿಲ್ಲ, ಅಪ್ಪ-ಮಕ್ಕಳ ಜೊತೆ ನನ್ನದು ಏನು ವ್ಯವಹಾರವಿಲ್ಲ. ನನ್ನದೇನಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷದೊಂದಿಗೆ ಸಂಬಂಧ. ದೇಶದಲ್ಲಿ ಹಿಂದುತ್ವ ಉಳಿಯಬೇಕು ಎಂದರೆ ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಆಗಬೇಕು. ವಿಜಯೇಂದ್ರ ಅವರ ಉದ್ದೇಶ ಏನು. ವಿ. ಸೋಮಣ್ಣ ಅವರ ಮೇಲೆ ಏನು ಮಾಡಿದ್ದಾರೆ? ವಿಜಯಪುರದಲ್ಲಿ ಏನ್ ಮಾಡಿದ್ದಾರೆ ಎಲ್ಲಾ ಗೊತ್ತು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸುವುದಕ್ಕೆ ಏನು ಮಾಡಿದ್ದಾರೆ. ಇವರ ಎಲ್ಲಾ ಇತಿಹಾಸ ಗೊತ್ತಿದೆ. ಲೋಕಸಭೆ ಚುನಾವಣೆ ಬಳಿಕ ಅವರ ಇತಿಹಾಸ ಹೇಳುತ್ತೇನೆ" ಎಂದು ವಾಗ್ದಾಳಿ ನಡೆಸಿದರು.
"ಮಾಧ್ಯಮದವರು ನನಗೆ ಹೆದರಿಕೊಂಡು ಓಡಿ ಹೋಗಿ ರಾಜಿ ಆದ ಅನ್ನಬೇಡಿ. ವಿಜಯೇಂದ್ರಗೂ ಅಂಜಲ್ಲ, ಅವರ ಅಪ್ಪನಿಗೂ ಅಂಜಲ್ಲ. ವಿಜಯೇಂದ್ರ ನೇತೃತ್ವದಲ್ಲಿ ಇಲ್ಲಿ ಚುನಾವಣೆಗೆ ಹೋಗುತ್ತಿಲ್ಲ. ಇಲ್ಲಿ ವಿಜಯೇಂದ್ರ ಪ್ರಶ್ನೆನೇ ಬರಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ವಿಜಯೇಂದ್ರ ಬರಲಿ, ಬಿಡಲಿ ನಾವು 28 ಲೋಕಸಭಾ ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ. ಕರ್ನಾಟಕದಲ್ಲಿ ವಿಜಯೇಂದ್ರ - ಯಡಿಯೂರಪ್ಪನ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿಲ್ಲ. ಇದು ನರೇಂದ್ರ ಮೋದಿಯವರ ನೇತೃತ್ವದ ಚುನಾವಣೆ. ಅಯೋಧ್ಯೆ ಶ್ರೀರಾಮನ ಆಶೀರ್ವಾದದ ಮೇಲೆ ನಡೀತಿರುವ ಚುನಾವಣೆ" ಎಂದು ಹೇಳಿದರು.
ನಮ್ಮ ಬಗ್ಗೆ ಮಾತನಾಡುವವರಿಗೆ ಸೆಟ್ಲಮೆಂಟ್ ಮಾಡುತ್ತೇನೆ ಎಂಬ ಡಿ ಕೆ ಶಿವಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಡಿ ಕೆ ಶಿವಕುಮಾರ್ ಅವರದ್ದು ಏನಿದೆ ಅಂತ ಗೊತ್ತಿದೆ. ಅವರು ಸೆಟ್ಲಮೆಂಟ್ ಮಾಡಿಕೊಂಡೇ ಹೊರಗಿದ್ದಾರೆ. ಇನ್ನು ಹೊರಗೆ ಅವರಿಗೆ ಇರುವುದಕ್ಕೆ ಆಗುವುದಿಲ್ಲ. ಇನ್ನು ಯಾವ ಸೆಟ್ಲಮೆಂಟ್ ಕೇಂದ್ರದಲ್ಲಿ ನಡೆಯುವುದಿಲ್ಲ ಎಂದರು. ಸಂಸತ್ ಭವನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಚೇರಿಗೆ ನಾನು ಹೋಗಿದ್ದೆ. ಅದೇ ವೇಳೆ ಆ ಮನುಷ್ಯನು ಅಲ್ಲಿ ಬಂದು ಕೂತಿದ್ದ, ಭೇಟಿಯಾಗಿದ್ದಾನೆ. ಬಿ.ವೈ.ವಿಜಯೇಂದ್ರರಿಂದ ಬಸನಗೌಡ ಯತ್ನಾಳ್ಗೆ ಏನೂ ಆಗಬೇಕಿಲ್ಲ ಎಂದರು.
ಇದನ್ನೂ ಓದಿ: "ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ: ಕರ್ನಾಟಕದಿಂದ ನಾರಾಯಣ ಭಾಂಡಗೆಗೆ ಟಿಕೆಟ್