ಕರ್ನಾಟಕ

karnataka

By ETV Bharat Karnataka Team

Published : May 29, 2024, 4:29 PM IST

ETV Bharat / state

ವಾಲ್ಮೀಕಿ ಅಭಿವೃದ್ಧಿ ನಿಗಮದ 94 ಕೋಟಿ ಹಣ ದುರ್ಬಳಕೆ ಆರೋಪ: ಬ್ಯಾಂಕ್ ಸಿಇಒ ಸೇರಿ ಆರು ಮಂದಿ ವಿರುದ್ಧ ಎಫ್ಐಆರ್ - FIR against Bank official

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ 94 ಕೋಟಿ ಹಣ ದುರ್ಬಳಕೆ ಆರೋಪದ ಕುರಿತಂತೆ ಯೂನಿಯನ್ ಬ್ಯಾಂಕ್ ಸಿಇಒ ಸೇರಿ ಆರು ಜನರು ವಿರುದ್ಧ ಕೇಸ್ ದಾಖಲಾಗಿದೆ.

Representative image
ಸಾಂದರ್ಭಿಕ ಚಿತ್ರ (ETV Bharat)

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ದುರ್ಬಳಕೆ ಆರೋಪದಡಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಿಇಒ ಸೇರಿ ಆರು ಮಂದಿ ವಿರುದ್ಧ ಎಫ್ಐಆರ್​ ದಾಖಲಾಗಿದೆ.

ನಕಲಿ ದಾಖಲಾತಿ ಸೃಷ್ಟಿಸಿ ಅಕ್ರಮವಾಗಿ ಕೋಟ್ಯಂತರ ಹಣವನ್ನು ಬೇರೆ - ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ಆರೋಪದ ಮೇಲೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ವಿರುದ್ಧ ನಿಗಮ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್ ಎಂಬುವರು ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಅರ್ ದಾಖಲಾಗಿದೆ. ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮನಿಮೇಖಲೈ, ಕಾರ್ಯನಿರ್ವಾಹಕ ನಿರ್ದೇಶಕ ನಿತೇಶ್ ರಂಜನ್, ರಾಮಸುಬ್ರಮಣ್ಯಂ, ಸಂಜಯರುದ್ರ ,ಪಂಕಜ್ ದ್ವಿವೇದಿ ಹಾಗೂ ಸುಶಿಚಿತ ರಾವ್ ವಿರುದ್ಧ ಈ ಕೇಸ್​ ಮಾಡಲಾಗಿದೆ.

ಎಂಡಿ ದೂರಿನಲ್ಲಿ ಏನಿದೆ?:ಬೆಂಗಳೂರಿನ ವಸಂತ ನಗರದಲ್ಲಿರುವ ವಾಲ್ಮಿಕಿ ಅಭಿವೃದ್ಧಿ ನಿಗಮದ‌ ಹೆಸರಿನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ಯಾಂಕ್ ಖಾತೆಯಿದ್ದು, ಇದೇ ವರ್ಷ ಫೆ.2ರಂದು ಈ ಖಾತೆಯನ್ನು ಎಂಜಿ ರೋಡ್ ಶಾಖೆಗೆ ವರ್ಗಾವಣೆ ಮಾಡಲಾಗಿದೆ. ಈ ಅಕೌಂಟ್ ನಿಗಮದ ಪರವಾಗಿ ನಿರ್ವಹಣೆ ಮಾಡಲಾಗುತಿತ್ತು. ಫೆ.26ರಂದು ಬ್ಯಾಂಕ್​ನವರು ನಿಗಮದ ಎಂಡಿ ಹಾಗೂ ಲೆಕ್ಕಾಧಿಕಾರಿಗಳ ಸಹಿ ಪಡೆದುಕೊಂಡು ತದ ನಂತರ ಖಾತೆಯಿಂದ ಮಾರ್ಚ್ 4ರಂದು 25 ಕೋಟಿ, ಮಾ.6ರಂದು 25 ಕೋಟಿ, ಮಾ.21ರಂದು 44 ಕೋಟಿ, ಮೇ 21ರಂದು 50 ಕೋಟಿ ಹಾಗೂ ಮೇ 22ರಂದು 33 ಕೋಟಿ ಸೇರಿದಂತೆ ಒಟ್ಟು ನಿಗಮದ ಬ್ಯಾಂಕ್ ಖಾತೆಯಿಂದ 187.33 ಕೋಟಿ ಹಣ ವರ್ಗಾವಣೆಯಾಗಿದೆ.

ಈ ಮಧ್ಯೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಬ್ಯಾಂಕ್​ಗೆ ನಿಗಮದಿಂದ ಯಾವುದೇ ಪತ್ರ ವ್ಯವಹಾರ ನಡೆಸಿಲ್ಲ. ನಿಗಮದ ಅಧಿಕೃತ ವಿಳಾಸಕ್ಕೆ ಪಾಸ್​ ಬುಕ್, ಚೆಕ್ ಬುಕ್‌ ಸೇರಿದಂತೆ ಇನ್ನಿತರ ಯಾವುದೇ ದಾಖಲಾತಿಗಳನ್ನು ಬ್ಯಾಂಕ್​ನಿಂದ ಕಳುಹಿಸಿಲ್ಲ. ಅಲ್ಲದೇ, ಭೌತಿಕವಾಗಿ ನಿಗಮದ ವತಿಯಿಂದ ಯಾವ ವ್ಯಕ್ತಿಯು ನಿಗಮದ ಹಣವನ್ನು ವಿತ್ ಡ್ರಾ ಮಾಡಿಲ್ಲ. ಆದರೂ ನಕಲಿ ದಾಖಲೆ ಸೃಷ್ಠಿಸಿ ಕೋಟ್ಯಂತರ ಅಕ್ರಮ ಹಣ ವರ್ಗಾವಣೆ ಮಾಡಿ ಬರೋಬ್ಬರಿ 94,73,08,500 ರೂಪಾಯಿ ಹಣ ವರ್ಗಾವಣೆವಾಗಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಸೂಕ್ತ ದಾಖಲಾತಿ ನೀಡುವಂತೆ ಕೋರಿದ್ದರೂ ಈವರೆಗೂ ಮಾಹಿತಿ ನೀಡಿಲ್ಲ ಎಂದು ದೂರಿನಲ್ಲಿ ನಿಗಮದ ಎಂಡಿ ರಾಜಶೇಖರ್ ಉಲ್ಲೇಖಿಸಿದ್ದಾರೆ.

ಮರು‌ ಠೇವಣಿ ಮಾಡುವಂತೆ ಬ್ಯಾಂಕ್ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದರೂ ವಿಫಲಗೊಂಡಿದ್ದು, ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸದೇ, ಲೋಪವೆಸಗಲಾಗಿದೆ. ಇದರಿಂದ ನಿಗಮಕ್ಕೆ‌ ಆರ್ಥಿಕ ನಷ್ಟಕ್ಕೆ ಬ್ಯಾಂಕ್​ನವರೇ ಕಾರಣರಾಗಿದ್ದು, ಈ ಸಂಬಂಧ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ರಾಜಶೇಖರ್ ಒತ್ತಾಯಿಸಿದ್ದಾರೆ.

ಕೆಲ ದಿನಗಳ ಹಿಂದೆ ನಿಗಮದ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣ‌‌ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದ್ದು, ಸದ್ಯ ಹೈಗ್ರೌಂಡ್ ಪೊಲೀಸರು ಎಫ್​ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ:ಅಧಿಕಾರಿ ಆತ್ಮಹತ್ಯೆ ಪ್ರಕರಣ: ನನ್ನ ಹೆಸರು ಯಾಕೆ ತಳುಕು ಹಾಕಿದ್ದಾರೆ ಎಂಬುದೇ ನನಗೆ ಗೊತ್ತಿಲ್ಲ - ಸಚಿವ ನಾಗೇಂದ್ರ

ABOUT THE AUTHOR

...view details