ಮೈಸೂರು: ''ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ತಾಯಿಯ ವರಪುತ್ರರೂ ಹೌದು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಾಲಿಟ್ಟ ವೇಳೆಯಿಂದಲೂ ಸಿದ್ದರಾಮಯ್ಯ ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆಂದರೆ ತಾಯಿ ಚಾಮುಂಡೇಶ್ವರಿ ಆಶೀರ್ವಾದವೇ ಕಾರಣ'' ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಟಿಡಿ, ''ಎಂತಹ ಸಂದರ್ಭದಲ್ಲಿಯೂ ತಾಯಿ ಚಾಮುಂಡೇಶ್ವರಿ ಅವರ ಪಾಲಿಗೆ ಇದ್ದಾರೆ. ಉಪ ಚುನಾವಣೆ ವೇಳೆ ಸಿದ್ದರಾಮಯ್ಯರನ್ನು ಸೋಲಿಸಲು ನಾವು ತೀರ್ಮಾನ ಮಾಡಿದ್ದೆವು. ಆದರೆ, ಸಿಎಂ ಆ ಚುನಾವಣೆಯಲ್ಲಿ ಗೆದ್ದರು ಇದಕ್ಕೆ ಕಾರಣ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸಿದ್ದರಾಮಯ್ಯಗೆ ಇದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಕಾರಣ. ಸಚಿವ ಮಹದೇವಪ್ಪ ಎಲ್ಲಾ ಸಚಿವ ಸ್ಥಾನವನ್ನೂ ಪಡೆದಿದ್ದಾರೆ. ಒಬ್ಬ ದಲಿತ ನಾಯಕನನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದಿರುವುದು ಸಿದ್ದರಾಮಯ್ಯ'' ಎನ್ನುತ್ತ ಸಿಎಂ, ಡಿಸಿಎಂ ಹಾಗೂ ಸಚಿವ ಮಹದೇವಪ್ಪರನ್ನು ಹಾಡಿ ಹೊಗಳಿದರು.
''ಹಿಂದೆ ಮೈಸೂರು ರಾಜ್ಯವಿತ್ತು, ಆಮೇಲೆ ಕರ್ನಾಟಕ ಆಯಿತು. ಮಹರಾಜರು ಕಟ್ಟಿದ್ದ ಮೈಸೂರು ಇದು. ದಸರಾ ಉದ್ಘಾಟಕರ ಆಯ್ಕೆಯನ್ನು ಸಿಎಂಗೆ ಬಿಟ್ಟು ಕೊಟ್ಟಿದ್ದೆವು. ಹಂಪನಾ ಅವರ ಆಯ್ಕೆ ಉತ್ತಮವಾಗಿದೆ. ಯಾವುದೇ ವಿವಾದ ಇಲ್ಲದ ಸಾಹಿತಿಗಳು. ಹಂಪನಾ ಅವರಿಗೆ ಚಾಮುಂಡೇಶ್ವರಿ ತಾಯಿ ಆಯಸ್ಸು, ಆರೋಗ್ಯ ಕರುಣಿಸಲಿ'' ಎಂದು ಜಿ.ಟಿ.ದೇವೇಗೌಡ ಪ್ರಾರ್ಥಿಸಿದರು.
ಎಫ್‌ಐಆರ್ ಆದವರೆಲ್ಲ ರಾಜೀನಾಮೆ ಕೊಡಿ: ''ತಾಕತ್ತಿದ್ದರೆ ಎಲ್ಲರೂ ಬನ್ನಿ. ಯಾರ ಮೇಲೆ ಎಫ್‌ಐಆರ್ ಆಗಿದೆಯೋ ಎಲ್ಲರೂ ರಾಜೀನಾಮೆ ಕೊಡಿ. ವಿಧಾನಸೌಧದ ಮುಂದೆ ಸಾಲಾಗಿ ಬಂದು ರಾಜೀನಾಮೆ ಕೊಡಿ, ಕೊಡ್ತೀರಾ? ರಾಜೀನಾಮೆ ಕೊಡಬೇಕಂತೆ ರಾಜೀನಾಮೆ. ಮಾಡೋಕೆ ಬೇರೆ ಕೆಲಸ ಇಲ್ವ? ಏನು ಅಭಿವೃದ್ಧಿ ಕಾರ್ಯ ಆಗಬೇಕೋ ಅದನ್ನು ನೋಡಿ. ಕೇಂದ್ರದಿಂದ ಏನು ತರಬೇಕು, ರಾಜ್ಯದಿಂದ ಏನು ಹೋಗಬೇಕು ಅನ್ನೋದು ನೋಡಿ'' ಎಂದು ಶಾಸಕ ಜಿ.ಟಿ.ದೇವೇಗೌಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.