ಹಾವೇರಿ: ವಕ್ಫ್ ಆಸ್ತಿಯನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ವಕ್ಫ್ ಬೋರ್ಡ್‍ಗೆ ಸರ್ಕಾರದ ಅನುದಾನವೇ ಬೇಕಾಗಿಲ್ಲ. ಸರ್ಕಾರಕ್ಕೆ ವಕ್ಫ್ ಬೋರ್ಡ್‍ನಿಂದಲೇ ಹಣ ಕೊಡಬಹುದು. ಅಷ್ಟು ಆಸ್ತಿ ಇದೆ. ವಕ್ಫ್ ಬೋರ್ಡ್ ಆಸ್ತಿ ಅಲ್ಲಾನ ಆಸ್ತಿ. ಇದರಲ್ಲಿ ಮೋಸ ಬೇಡ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
ನಗರದಲ್ಲಿ ನಡೆದ ವಕ್ಫ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮುದಾಯದ ಜನರು ತೆಲೆ ಎತ್ತಿ ಮೆರೆಯೋ ಹಾಗೇ ಆಗಬೇಕು. ತಲೆ ತಗ್ಗಿಸಿ ನಡೆದುಕೊಳ್ಳುವ ಹಾಗೇ ಯಾರು ಕೆಲಸ ಮಾಡಬೇಡಿ. ನಾನು ನಿಮಗಾಗಿ ದುಡಿಯುತ್ತೇನೆ. ನಾವು ಮರಣ ಹೊಂದಿದಾಗ ಏನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ನನ್ನ ಕೈಯಲ್ಲಿ ಬೆಲೆ ಬಾಳುವ ಡೈಮಂಡ್ ಉಂಗುರ ಇದೆ. ಇದು ನನ್ನ ನೆಚ್ಚಿನ ಉಂಗುರ ಇದನ್ನು ನಾನು ಇಷ್ಟಪಟ್ಟು ತೊಗೊಂಡೆ. ನಾಳೆ ನಾನು ಸತ್ತಾಗ ತೆಗೆದುಕೊಂಡು ಹೋಗುತ್ತೇನಾ?. ಇದು ನನ್ನ ಪರಿವಾರದ ಸದಸ್ಯರು ನನ್ನ ನೆನಪಿಗಾಗಿ ತೆಗೆದು ಇಟ್ಟುಕೊಳ್ಳುತ್ತಾರೆ ಎಂದರು.
ಮತ್ತೊಂದೆಡೆ, ಸಿಎಂ ಆಗುವ ಆಸೆ ನಿಮಗೆ ಇಲ್ವಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸಚಿವ ಜಮೀರ್ ಅಹ್ಮದ್, ಸಿಎಂ ಆಗುವ ಆಸೆ ಎಲ್ಲರಿಗೂ ಇರುತ್ತೆ. ನಮ್ಮಲ್ಲಿ ಕುರ್ಚಿ ಖಾಲಿ ಇಲ್ಲ. ಕುರ್ಚಿಯಲ್ಲಿ ನಮ್ಮ ಟಗರು ಕುಳಿತುಕೊಂಡಿದೆ. ಟಗರನ್ನು ಕುರ್ಚಿಯಿಂದ ಇಳಿಸುವುದು ಬಹಳ ಕಷ್ಟ. ಟಗರು ಕೊಂಬು ಮುರಿಯೋದು ಸಾಧ್ಯವೇ ಇಲ್ಲ. ಟಗರು ಟಗರೇ ಅದು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದರು.