ಬೆಳಗಾವಿ: "ಯಾರೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಲಕ್ಷ್ಮಣ ಸವದಿ ಶಾಸಕರಿದ್ದಾರೆ. ಅವರು ಕಾಂಗ್ರೆಸ್ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನಮ್ಮ ಪಕ್ಷದ ಪರವಾಗಿ ಸವದಿ ಇದ್ದಾರೆ ಎಂದಿದ್ದಾರೆ" ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಬಿಜೆಪಿಗೆ ಸೇರುತ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಜಗದೀಶ್ ಶೆಟ್ಟರ್ ಕೇಸ್ ಬೇರೆ, ಸವದಿ ಕೇಸ್ ಬೇರೆ. ಒಂದೊಂದು ಕೇಸ್ ಹೋಲಿಸಲು ಆಗುವುದಿಲ್ಲ. ಡಾಕ್ಟರ್ ಬಳಿ ಒಬ್ಬೊಬ್ಬರದ್ದು ಕೇಸ್ ಪೇಪರ್ ಬೇರೆ ಬೇರೆ ಇರುತ್ತವೆ" ಎಂದರು.
ಲಕ್ಷ್ಮಣ ಸವದಿಗೆ ಮಂತ್ರಿ ಸ್ಥಾನದ ಸಿಗುತ್ತಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, "ಅದಕ್ಕೆ ಇನ್ನೂ ಟೈಮ್ ಇದೆ. ಒಳ್ಳೆಯವರಿಗೆ ಮಂತ್ರಿ ಸ್ಥಾನ ಲಭಿಸುವ ಅವಕಾಶವಿದೆ" ಎಂದು ಹೇಳಿದರು.
"ಬೆಳಗಾವಿ, ಚಿಕ್ಕೋಡಿ ಲೋಕಸಭಾ ಚುನಾವಣಾ ಆಕಾಂಕ್ಷಿಗಳ ಹೆಸರು ಕೊಟ್ಟಿದ್ದೇವೆ. ಅಂತಿಮವಾಗಿ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ" ಎಂದ ಅವರು, "ಬೆಳಗಾವಿಯಿಂದ ಗಿರೀಶ್ ಸೋನವಾಲ್ಕರ್ ಅಥವಾ ಮೃಣಾಲ್ ಇಬ್ಬರಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡಬೇಕು. ಇನ್ನೊಂದು ಸುತ್ತಿನ ಚರ್ಚೆ ಸಿಎಂ ಜೊತೆಗೆ ಆಗಬೇಕು" ಎಂದರು.