ಹುಬ್ಬಳ್ಳಿ :ಹುಬ್ಬಳ್ಳಿ - ಧಾರವಾಡ ನಡುವೆ ಬಿಆರ್‌ಟಿಎಸ್ (ಬಸ್ ರ‍್ಯಾಪಿಡ್ ಟ್ರಾನ್ಸಿಸ್ಟ್ ಸಿಸ್ಟಂ) ಬದಲು ಎಲ್‌ಆರ್‌ಟಿ (ಲೈಟ್ ರೈಲ್ ಟ್ರಾನ್ಸಿಟ್) ತರುವ ಕುರಿತು ಹಾಗೂ ಅದರ ಸಾಧಕ -ಬಾಧಕಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್‌ಆರ್‌ಟಿ (ಲೈಟ್ ರೈಲ್ ಟ್ರಾನ್ಸಿಟ್) ಬಗ್ಗೆ ಯೋಜನೆ ರೂಪಿಸಲಾಗುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ಸ್ಪಷ್ಟತೆ ದೊರೆಯಲಿದೆ. ಹುಬ್ಬಳ್ಳಿ - ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಗುಣಮಟ್ಟ ಹಾಗೂ ಹಸ್ತಾಂತರದ ಬಗ್ಗೆ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದು ಹೇಳಿದರು.