ಬೆಂಗಳೂರು :ಸರ್ಕಾರಿ ಮತ್ತು ಖಾಸಗಿ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕ 6 ದಿನಗಳ ವೇತನ ಸಹಿತ ಮುಟ್ಟಿನ ರಜೆ ನೀಡುವ ನೀತಿ ರೂಪಿಸುವ ಬಗ್ಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಸರ್ಕಾರಿ ಮತ್ತು ಖಾಸಗಿ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕ 6 ದಿನಗಳ ವೇತನ ಸಹಿತ ಮುಟ್ಟಿನ ರಜೆ ನೀಡುವ ಬಗ್ಗೆ ನೀತಿ ರೂಪಿಸುವ ಸಂಬಂಧ ಮುಟ್ಟಿನ ರಜೆ ಸಾಧ್ಯಾಸಾಧ್ಯತೆ ಪರಿಶೀಲಿಸಲು ರಚಿಸಲಾದ ಡಾ. ಸಪ್ನಾ ಮುಖರ್ಜಿ ನೇತೃತ್ವದ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದರ ಆಧಾರದ ಮೇಲೆ ಎಲ್ಲ ಇಲಾಖೆಗಳೊಂದಿಗೆ ಚರ್ಚೆ ನಡೆಸಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನೀತಿ ರೂಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಹಾರದಲ್ಲಿ 1992ರಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಘೋಷಿಸಿದೆ. ಅಲ್ಲಿ ಪ್ರತಿ ತಿಂಗಳು ಎರಡು ದಿನಗಳ ಮುಟ್ಟಿನ ರಜೆಯನ್ನು ಒದಗಿಸಲಾಗುತ್ತದೆ. ಕೇರಳದಲ್ಲಿ ವಿದ್ಯಾರ್ಥಿನಿಯರಿಗೆ ಎರಡು ದಿನಗಳ ಮುಟ್ಟಿನ ರಜೆ ನೀಡಲಾಗುತ್ತಿದೆ. ಸಮಿತಿ ಶಿಫಾರಸು ಬಗ್ಗೆ ಇಲಾಖೆಗಳಿಗೆ ಕಳುಹಿಸಿ ಅಭಿಪ್ರಾಯ ಪಡೆಯುತ್ತೇವೆ. ಕಾನೂನು ಅಭಿಪ್ರಾಯ ಪಡೆದು ಸರ್ಕಾರಕ್ಕೆ ಮಂಡನೆ ಮಾಡಲಿದ್ದೇವೆ. ಎಲ್ಲರ ಅಭಿಪ್ರಾಯ ಪಡೆಯುತ್ತೇವೆ. ಬಳಿಕ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಹೆಚ್ಡಿಕೆ ಮೇಲಿನ ಡಿನೋಟಿಫಿಕೇಷನ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಡಿನೋಟಿಫಿಕೇಷನ್ ಆಗಿರುವುದು ನಿಜನಾ?. ಡಿನೋಟಿಫಿಕೇಷನ್ ಪ್ರಸ್ತಾವನೆ ಸಲ್ಲಿಸಿರುವುದು ನಿಜನಾ?. ಅವರು ಮಾಡಿರುವುದು ಒಪ್ಪಿಕೊಂಡರೆ ಈಗ ನೈತಿಕತೆ ಏನಿದೆ?. ದಿನ ಬೆಳಗಾದರೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಅರ್ಥ ಏನು?. ಈಗ ಪ್ಯಾನ್ ಇಂಡಿಯಾ ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ಬಿಡಿಎ ಆಸ್ತಿಯನ್ನು ಡಿನೋಟಿಫಿಕೇಷನ್ ಮಾಡಲಾಗಿದೆ. ಈಗ ರಾಜ್ಯಪಾಲರ ಬಳಿ ಹೋಗಿ ಬಿಜೆಪಿಯವರು ಡಿನೋಟಿಫಿಕೇಷನ್ ಬಗ್ಗೆ ಶಿಫಾರಸು ಮಾಡಲಿ. ಏಕೆ ಸುಮ್ಮನಿದ್ದಾರೆ?. ಬಿಜೆಪಿಗೆ ಯಾವುದೇ ಕಾರಣಕ್ಕೂ ಈ ಸರ್ಕಾರ ಉಳಿಯಬಾರದು ಎಂಬ ಉದ್ದೇಶ ಇದೆ ಎಂದು ತಿಳಿಸಿದರು.
ಇದನ್ನೂ ಓದಿ :ಮಹಿಳೆಯರಿಗೆ ತಿಂಗಳಿಗೆ ಒಂದು ದಿನ ಮುಟ್ಟಿನ ರಜೆ ಘೋಷಣೆ - Menstrual Leave Policy