ಕರ್ನಾಟಕ

karnataka

ಪಾಕ್ ಪರ ಘೋಷಣೆ ಕೂಗಿದವರನ್ನ ನಾವು ಸಮರ್ಥಿಸಿಕೊಂಡಿಲ್ಲ: ಅಂತವರನ್ನು ಜೈಲಿಗೆ ಕಳುಹಿಸಿದ್ದೇವೆ-ರಾಮಲಿಂಗಾರೆಡ್ಡಿ

By ETV Bharat Karnataka Team

Published : Mar 6, 2024, 4:23 PM IST

Updated : Mar 6, 2024, 6:17 PM IST

ಪಾಕ್ ಪರ ಘೋಷಣೆ ಕೂಗಿದ ಘಟನೆಯನ್ನು ನಾವೆಲ್ಲರೂ ಖಂಡಿಸಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ತಿಳಿಸಿದ್ದಾರೆ.

ಸಾರಿಗೆ ಸಚಿವ ರಾಮಲಿಂಗರೆಡ್ಡಿ
ಸಾರಿಗೆ ಸಚಿವ ರಾಮಲಿಂಗರೆಡ್ಡಿ

ಹುಬ್ಬಳ್ಳಿ :ಪಾಕ್ ಪರ ಘೋಷಣೆ ಕೂಗಿದವರನ್ನು ನಾವು ಸಮರ್ಥಿಸಿಕೊಂಡಿಲ್ಲ. ಈ ಘಟನೆಯನ್ನು ನಾವೆಲ್ಲರೂ ಖಂಡಿಸಿದ್ದೇವೆ. ಅದನ್ನು ಯಾರು ಒಪ್ಪುವಂಥದ್ದಲ್ಲ, ಕೇಸ್ ಹಾಕಿ ಜೈಲಿಗೆ ಕಳಿಸಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.

ಸಾರಿಗೆ ಸಚಿವ ರಾಮಲಿಂಗರೆಡ್ಡಿ

ನಗರದಲ್ಲಿಂದು ಧಾರವಾಡ ಪೂರ್ವ ಸಾರಿಗೆ ಅಧಿಕಾರಿಗಳ ಕಚೇರಿ ಉದ್ಘಾಟನೆಗೂ ಮುನ್ನ ಮಾತನಾಡಿದ ಅವರು, ಬಿಜೆಪಿಯವರು ಮಂಡ್ಯದಲ್ಲಿ ಪ್ರತಿಭಟನೆ ಮಾಡುವಾಗ ಕಾರ್ಯಕರ್ತನೊಬ್ಬ ಪಾಕ್ ಪರ ಘೋಷಣೆ ಕೂಗ್ತಾನೆ. ಇನ್ನೊಬ್ಬ ಅವನ ಬಾಯಿ ಮುಚ್ಚಿಸಿದ್ದ. ಅವತ್ತು ಬಿಜೆಪಿ ಅವರು ಸುಮ್ಮನೆ ಇದ್ರು. ನಾವು ಅವತ್ತು ಖಂಡಿಸಿದ್ದೇವೆ. ಇವತ್ತೂ ಖಂಡಿಸಿದ್ದೇವೆ. ಮುಂದೆಯೂ ಖಂಡಿಸ್ತೇವೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೆ ನಾವು ಕಾಂಗ್ರೆಸ್​ನವರು. ಬಿಜೆಪಿ ಪೂರ್ವಜರು ಅಂದ್ರೆ ಆರ್​ಎಸ್​ಎಸ್, ಹಿಂದೂ ಪರಿಷತ್ತಿನವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲಿಲ್ಲ. ಸ್ವಾತಂತ್ರ್ಯದ ಹಕ್ಕು ದೇಶದ ಜನರಿಗೆ ಕೊಟ್ಟಿದ್ದೇ ನಮ್ಮ ಕಾಂಗ್ರೆಸ್ ಪಕ್ಷ. ನಮಗಿದ್ದಷ್ಟು ದೇಶಾಭಿಮಾನ ಅವರಿಗಿಲ್ಲ ಎಂದರು.

ಎಫ್​ಎಸ್​ಎಲ್ ವರದಿಯನ್ನು ಅಧಿಕೃತ ಅಂತ ಗೃಹಮಂತ್ರಿಗಳು ಹೇಳಿದ್ದಾರೆ. ಕ್ರಮ ಆಗಿದೆ, ಮುಂದಿನದ್ದನ್ನು ಕೋರ್ಟ್ ನೋಡಿಕೊಳ್ಳುತ್ತೆ‌. ಮಂಡ್ಯದಲ್ಲಿ ಬಿಜೆಪಿಯವರು ಅವರ ಕಾರ್ಯಕರ್ತ ಕೂಗಿದಾಗ ಏನು ಮಾಡ್ತಾ ಇದ್ರು?. ಏಕೆ ಖಂಡಿಸಿಲ್ಲ. ಪ್ರತಾಪ್ ಸಿಂಹ ಅವರೇ ಪಾರ್ಲಿಮೆಂಟ್​ಗೆ ಪಾಸ್ ಕೊಟ್ಟಿದ್ರು‌. ಅವರು ಅಲ್ಲಿ ಹೋಗಿ ಗ್ಯಾಸ್ ಬಾಂಬ್ ಹಾಕಿದರೂ, ಅದನ್ನ ಖಂಡಿಸಿಲ್ಲ‌. ಪ್ರತಾಪ್ ಸಿಂಹ ರಾಜೀನಾಮೆ ಏಕೆ ಕೇಳಿಲ್ಲ. ಮಾತಾಡಿದ್ರೆ ಬಿದ್ದೋಗುತ್ತೆ ಅನ್ನೋಕೆ ಬಾಯಲ್ಲಿ ಬೆಣ್ಣೆ ಇಟ್ಕೊಂಡಿದ್ರಾ?. ನಾವು ಬಂದಾಗ ಜನ ಕೊಡ್ತಾರೆ, ಯಾರೋ ಅದರಲ್ಲಿ ಒಬ್ರು ಕೂಗಿದ್ರೆ ನಾವು ಕೂಗಿದಂತಾಗುತ್ತಾ? ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ಗೆ ಗೊತ್ತಿರ್ಲಿಲ್ಲ ಅನ್ಸುತ್ತೆ. ಯಾರೋ ಮಾಹಿತಿ ಕೊಟ್ಟಿರ್ತಾರೆ. ಒಬ್ಬರಿಗೆ ಒಂದೊಂದು ತರ ಮಾಹಿತಿ ಹೋಗಿರುತ್ತೆ ಎಂದು ಹೇಳಿದರು.

ಲೋಕಸಭೆ ಅಭ್ಯರ್ಥಿಗಳ ಪಟ್ಟಿ ಆದಷ್ಟು ಬೇಗ ಬಿಡುಗಡೆಯಾಗಲಿದೆ. ನಮ್ಮ ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಮ್ಮಲ್ಲಿ ಯಾವುದೇ ಅಸಮಧಾನ ಗೊಂದಲವಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.‌

ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ವಿಭಾಗಕ್ಕೂ ಚಾಲನಾ ಟ್ರ್ಯಾಕ್ ನೀಡಲು ಕ್ರಮ : ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ವಿಭಾಗಕ್ಕೂ ಚಾಲನಾ ಟ್ರ್ಯಾಕ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು.

ಇಲ್ಲಿನ ಗಬ್ಬೂರ ಹೊರವಲಯದಲ್ಲಿ ನಿರ್ಮಿಸಲಾಗಿರುವ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ನೂತನ ಕಟ್ಟಡಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಸದ್ಯ ರಾಯಾಪುರದಲ್ಲಿ ಚಾಲನಾ ಟ್ರ್ಯಾಕ್ ಇದ್ದು, ಹುಬ್ಬಳ್ಳಿ, ಕುಂದಗೋಳ ಸೇರಿದಂತೆ ಸುತ್ತಮುತ್ತಲಿನ ಜನರಿಗೆ ಹೋಗಲು ಸಮಸ್ಯೆ ಆಗುತ್ತಿರುವ ಹಿನ್ನೆಲೆ ಶಾಸಕ ಅಬ್ಬಯ್ಯ ಪ್ರಸಾದ್ ಅವರು, ಈ ಭಾಗದಲ್ಲಿಯೇ ಚಾಲನಾ ಟ್ರ್ಯಾಕ್ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಬೇಕಾದ ಜಮೀನು ಗುರುತಿಸಿದ್ದಲ್ಲಿ ಶೀಘ್ರ ಚಾಲನಾ ಟ್ರ್ಯಾಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಚಾಲನಾ ಕಾರ್ಡ್ ಪೂರೈಕೆಯಲ್ಲಿ ಸಮಸ್ಯೆ ಇದ್ದು, ಇನ್ನೂ ಮೂರು ತಿಂಗಳಲ್ಲಿ ಒನ್ ದೇಶ, ಒಂದು ಕಾರ್ಡ್ ಚಾಲನೆಗೆ ಬರಲಿದೆ. ಆಗ ಈ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

ಸಚಿವ ಸಂತೋಷ ಲಾಡ್

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಸಂತೋಷ ಲಾಡ್, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಸುಮಾರು 5 ಸಾವಿರಕ್ಕೂ ಅಧಿಕ ಹೊಸ ಬಸ್​ಗಳನ್ನು ಖರೀದಿಸುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಇದೀಗ 800ಕ್ಕೂ ಅಧಿಕ ಬಸ್​ಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತವಾಗಿ ಧಾರವಾಡ ಜಿಲ್ಲೆಗೆ ಇತ್ತೀಚೆಗೆ 50 ಬಸ್​ಗಳನ್ನು ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಬಸ್​ಗಳನ್ನು ನೀಡಲಾಗುವುದು. ಸಾರಿಗೆ ಸಚಿವರು ಉತ್ತರ ಕರ್ನಾಟಕ ಭಾಗಕ್ಕೆ ಸಾರಿಗೆ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಶಾಸಕ ಅಬ್ಬಯ್ಯ ಪ್ರಸಾದ್

ಶಾಸಕ ಅಬ್ಬಯ್ಯ ಪ್ರಸಾದ್ ಮಾತನಾಡಿ, ಈ ಪ್ರಾದೇಶಿಕ ಸಾರಿಗೆ ಕಚೇರಿಗೆ 2017ರಲ್ಲಿ ಅಡಿಗಲ್ಲು ಹಾಕಲಾಗಿತ್ತು. ಬಾಡಿಗೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. 1.2 ಎಕರೆ ಜಾಗದಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಟ್ಟಡ ಲೋಕಾರ್ಪಣೆ ಆಗುವ ಮೂಲಕ ಈ ಭಾಗದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಯಲ್ಲಿ ಪ್ರಮುಖವಾಗಿ ಶಕ್ತಿ ಯೋಜನೆಗೆ ಶಕ್ತಿ ತುಂಬುವ ಕಾರ್ಯವನ್ನು ಸಚಿವ ರಾಮಲಿಂಗಾರೆಡ್ಡಿ ಮಾಡಿದ್ದಾರೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಸಾರಿಗೆ ಸಂಸ್ಥೆಯಲ್ಲಿ ಒಂದೇ ಒಂದು ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸುಮಾರು 9 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಧಾರವಾಡ ಪೂರ್ವ ಸಾರಿಗೆ ಅಧಿಕಾರಿಗಳ ಕಚೇರಿ ಉದ್ಘಾಟನೆ

ಇದಕ್ಕೂ ಮೊದಲು ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಎನ್ ಡಬ್ಲೂ ಕೆಎಸ್ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ್, ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಎಂ. ಪಿ, ಮುಖಂಡರಾದ ಸದಾನಂದ ಡಂಗನವರ, ಮೋಹನ ಅಸುಂಡಿ, ಮಹೇಂದ್ರ ಸಿಂಘಿ, ಸುವರ್ಣ ಕಲಕುಂಟ್ಲಾ, ದೋರಾಜ್ ಮಣಿಕಂಟ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ

ಸಾರಿಗೆ ಸಂಜೀವಿನಿಗೆ ರಾಮಲಿಂಗಾರೆಡ್ಡಿ ಅವರಿಂದ ಚಾಲನೆ : ಗೋಕುಲ ರಸ್ತೆಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ವಾ.ಕ.ರ.ಸಾ ಸಂಸ್ಥೆ ನೌಕರರು ಹಾಗೂ ಅವರ ಅವಲಂಬಿತರಿಗೆ ಸಾರಿಗೆ ಸಂಜೀವಿನಿ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆಯ ಅನುಷ್ಠಾನಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.

ಸಾರಿಗೆ ಸಂಜೀವಿನಿಗೆ ರಾಮಲಿಂಗಾರೆಡ್ಡಿ ಅವರಿಂದ ಚಾಲನೆ

ವಾ.ಕ.ರ.ಸಾ.ಸಂಸ್ಥೆಯ, ವ್ಯವಸ್ಥಾಪಕ ನಿರ್ದೇಶಕರಾದ ಭರತ್ ಎಸ್ ಅವರು ಮಾತನಾಡಿ, ಸಂಸ್ಥೆಯ ನೌಕರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅವರು ಅನಾರೋಗ್ಯದಿಂದ ಬಳಲುತ್ತಿರುವಾಗ ಹಣಕಾಸಿನ ತೊಂದರೆಯಿದ್ದಾಗ ಚಿಕಿತ್ಸೆ ಪಡೆದುಕೊಳ್ಳಲು ಹಿಂದೆ ಸರಿಯಬಾರದು ಎಂಬ ಉದ್ದೇಶದಿಂದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಸಹಯೋಗದೊಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಸಂಸ್ಥೆಯ ನೌಕರರು ಮತ್ತು ಅವರ ಅವಲಂಬಿತರು ಕಿಮ್ಸ್ ಆಸ್ಪತ್ರೆಗೆ ಬಂದು ತಮ್ಮ ಗುರುತಿನ ಚೀಟಿ ತೋರಿಸಿ, ಅವರ ವಿವರಗಳನ್ನು ತಿಳಿಸಿ ವೈದ್ಯಕೀಯ ಚಿಕಿತ್ಸೆಗಾಗಿ ದಾಖಲಾದರೆ, ಕಿಮ್ಸ್ ಸಂಸ್ಥೆಯವರು ಚಿಕಿತ್ಸೆ ನೀಡಿ, ಅವರನ್ನು ಗುಣಪಡಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸುತ್ತಾರೆ ಎಂದರು.

ಇದನ್ನೂ ಓದಿ :'ಬಿಜೆಪಿಯವರಿಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಟೆರರಿಸ್ಟ್ ಪದ ಬಿಟ್ಟರೆ ಅಭಿವೃದ್ಧಿ ವಿಚಾರವೇ ಇಲ್ಲ'

Last Updated : Mar 6, 2024, 6:17 PM IST

ABOUT THE AUTHOR

...view details