ಬೆಂಗಳೂರು : ರಾಜ್ಯ ಸರ್ಕಾರವು ಬಸ್ ಪ್ರಯಾಣ ದರವನ್ನ ಶೇ.15ರಷ್ಟು ಹೆಚ್ಚಳ ಮಾಡಿದ ಬೆನ್ನಲ್ಲೇ ವಿರೋಧ ಪಕ್ಷಗಳು ಪ್ರತಿಭಟನೆ ಮಾಡುತ್ತಿವೆ. ಮತ್ತೊಂದೆಡೆ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ ಮತ್ತೊಂದು ಕಡೆ ಪುರುಷ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ನೀಡಿದೆ. ಟಿಕೆಟ್ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಬಸ್ ದರ ಏರಿಸಿರುವುದನ್ನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ರಾಮಲಿಂಗಾರೆಡ್ಡಿ, ಬಸ್ ಟಿಕೆಟ್ ದರ ಹೆಚ್ಚಳ ಮಾಡುವುದು ನಮಗೂ ಇಷ್ಟ ಇರಲಿಲ್ಲ. ಅನಿವಾರ್ಯವಾಗಿ ಏರಿಕೆ ಮಾಡಬೇಕಾಯಿತು. ಹಿಂದಿನ ಸರ್ಕಾರದಿಂದ 5,900 ಕೋಟಿ ಸಾಲದ ಹೊರೆ ಇದೆ. 2014 ರಲ್ಲಿ ಕೊನೆ ಬಾರಿ ಬಸ್ ದರ ಹೆಚ್ಚಳ ಮಾಡಲಾಗಿತ್ತು. ಆದರೆ, ಈವರೆಗೂ ದರ ಹೆಚ್ಚಳ ಮಾಡಿರಲಿಲ್ಲ. ಅಂದಿನ ಡಿಸೇಲ್ ದರಕ್ಕೂ ಈಗಿನ ಡಿಸೇಲ್ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂಧನ ವೆಚ್ಚ, ವೇತನ ಸೇರಿದಂತೆ ಎಲ್ಲವೂ ಸರಿದೂಗಿಸಬೇಕು. ಹೀಗಾಗಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದರು.