ಬೆಂಗಳೂರು: ಬಿಜೆಪಿಯವರು ಎಷ್ಟಾದರೂ ಕೂಗಾಡ್ಲಿ, ಅರಚಾಡ್ಲಿ, ಬಟ್ಟೆ ಹರ್ಕೊಳ್ಳಲಿ, ಐ ಡೋಂಟ್ ಕೇರ್ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ವಿಕಾಸಸೌಧದಲ್ಲಿಂದು ಮಾತನಾಡಿದ ಅವರು, ರಾಜ್ಯಪಾಲರಿಗೆ ಮೇಲ್ಮನೆ ಸದಸ್ಯರ ಬಗ್ಗೆ ದೂರು ಕೊಟ್ಟಿದ್ದೇವೆ. ಅದರ ಬಗ್ಗೆ ಚರ್ಚೆ ಮಾಡೋಕೆ ಹೇಳಿ. ಅದನ್ನು ಬಿಜೆಪಿ ನಾಯಕರು ರಾಜ್ಯಪಾಲರ ಹತ್ತಿರ ಉತ್ತರ ತೆಗೆದುಕೊಂಡು ಬರಲಿ. ಪದೇ ಪದೆ ರಾಜ್ಯಪಾಲರ ಮುಂದೆ ಹೋಗಿ ಅವರು ಕೈ ಕಟ್ಕೊಂಡು ನಿಲ್ತಾರೆ, ಪಾಪ ಅನ್ಸುತ್ತೆ ಎಂದು ಲೇವಡಿ ಮಾಡಿದರು.
"ರಾಜ್ಯಪಾಲರ ಹತ್ತಿರ ಯಾಕೆ ಹೋಗ್ತೀರಾ?. ಪ್ರಧಾನಿ ಹಾಗೂ ರಾಷ್ಟ್ರಪತಿ ಹತ್ತಿರ ಹೋಗಿ ದೂರು ಕೊಡ್ಲಿ. ನನಗೆ ನಿಜವಾಗಿಯೂ ಕುತೂಹಲವಿದೆ. ಇವರು ಹೇಗೆ ಅಕ್ರಮ ದೃಢಪಡಿಸ್ತಾರೆ ಅಂತ ನೋಡೋಣ" ಎಂದು ಸವಾಲು ಹಾಕಿದರು.
ಕ್ಯಾಬಿನೆಟ್ನಲ್ಲಿ ಕೇಸ್ ವಾಪಸ್ ಪಡೆದ ಹಿನ್ನೆಲೆಯಲ್ಲಿ ಸರ್ಕಾರದ ಸಚಿವರು ಭಯೋತ್ಪಾದಕರು ಎಂಬ ಬಿಜೆಪಿ ನಾಯಕರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, "60 ಪ್ರಕರಣದ ಪೈಕಿ 43 ಪ್ರಕರಣವನ್ನು ಕ್ಯಾಬಿನೆಟ್ ಉಪಸಮಿತಿಯ ನಿರ್ಧಾರದ ಮೇಲೆ ವಾಪಸ್ ಪಡೆದಿದ್ದೇವೆ. ಎಲ್ಲವೂ ಕೂಲಂಕಷವಾಗಿ ಚರ್ಚಿಸಿ ತೀರ್ಮಾನ ಮಾಡಿ ವಾಪಸ್ ಪಡೆದಿದ್ದೇವೆ. ಇದರಲ್ಲಿ ತಪ್ಪೇನಿದೆ?. ವಿ.ಸೋಮಣ್ಣ ಅವರದು ನಾಲ್ಕೈದು ಕೇಸ್ ವಾಪಸ್ ಪಡೆದಿದ್ದೇವೆ. ಸಿ.ಟಿ.ರವಿ ಹಾಗೂ ಸುಕುಮಾರ್ ಶೆಟ್ಟಿ, ಮೈಸೂರು ಮಹಿಳಾ ಮೋರ್ಚಾ ಕೇಸ್ ವಾಪಸ್ ಪಡೆದಿದ್ದೇವೆ. ಇವರೆಲ್ಲರೂ ದೇಶದ್ರೋಹಿಗಳಾ?. ಇವರೆಲ್ಲರೂ ಭಯೋತ್ಪಾದನೆ ನಡೆಸುತ್ತಾರಾ?. ಏನಾದರೂ ಲಾಜಿಕ್ ಇರಬೇಕಲ್ವಾ? ಬಿಜೆಪಿಗೆ ಯಾವುದೇ ವಿಷಯ ಸಿಗ್ತಿಲ್ಲ, ಸುಮ್ಮನೆ ಹಿಟ್ ಆ್ಯಂಡ್ ರನ್ ಮಾಡ್ತಾರೆ. ಅವರ ಒಳಜಗಳ ಮುಚ್ಚಿ ಹಾಕಲು ಈ ರೀತಿಯಾಗಿ ಮಾತಾಡ್ತಾರೆ" ಎಂದು ಆರೋಪಿಸಿದರು.
"ಹಿಂದಿನ ಸರ್ಕಾರದಲ್ಲಿ ಯಾರೆಲ್ಲ ಎಷ್ಟು ಕೇಸ್ ವಾಪಸ್ ಪಡೆದಿದ್ದಾರೆ ಪಟ್ಟಿ ಮಾಡಲಿ. ಯಡಿಯೂರಪ್ಪ ಸರ್ಕಾರ 100ಕ್ಕಿಂತ ಹೆಚ್ಚು ಕೇಸ್ ವಾಪಸ್ ಪಡೆದಿತ್ತು. ಈಗ ಬಿಜೆಪಿ ಮಾಡಿದ್ದು ಎಷ್ಟು ಪ್ರತಿಭಟನೆ ಆಯ್ತು?. ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆಗೆ ಪವರ್ ಇದೆ. UIP ಹಾಕಿದ್ದು NIA ಅವರಲ್ಲ. ಗೃಹ ಇಲಾಖೆ ಹಾಕಿದ್ರು, ಅವರೇ ತೆಗೆಯುತ್ತಾರೆ. ಬಿಜೆಪಿಗೆ ಕಾನೂನು ಗೊತ್ತಿಲ್ಲ" ಎಂದರು.