ಕರ್ನಾಟಕ

karnataka

ETV Bharat / state

ಇ-ಸ್ವತ್ತು ನೀಡಿಕೆಯಲ್ಲಿ ವಿಳಂಬ: ಕೇಂದ್ರದ ಎನ್​ಐಸಿ ಸೇವೆ ರದ್ಧತಿಗೆ ಸಚಿವ ಪ್ರಿಯಾಂಕ್​ ಖರ್ಗೆ ಸೂಚನೆ - Priyank Kharge

ಇ-ಸ್ವತ್ತು ದಾಖಲೆ ಪಡೆಯಲು ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ತಂತ್ರಜ್ಞಾನ ಅಳವಡಿಸಿರುವ ಕೇಂದ್ರ ಸರ್ಕಾರದ ಎನ್.ಐ.ಸಿ ಸೇವೆ ರದ್ದುಪಡಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ ನೀಡಿದ್ದಾರೆ.

e swathu
ಸಚಿವ ಪ್ರಿಯಾಂಕ್​ ಖರ್ಗೆ ಸಭೆ (ETV Bharat)

By ETV Bharat Karnataka Team

Published : Sep 6, 2024, 8:16 PM IST

ಬೆಂಗಳೂರು: ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ ಸಂಬಂಧಿಸಿದದಂತೆ ಗ್ರಾಮ ಪಂಚಾಯಿತಿಗಳು ವಿತರಿಸುತ್ತಿರುವ ಇ-ಸ್ವತ್ತು ದಾಖಲೆ ಪಡೆಯುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಹೀಗಾಗಿ, ಸಂಬಂಧಿಸಿದ ತಂತ್ರಜ್ಞಾನ ಅಳವಡಿಸಿರುವ ಕೇಂದ್ರ ಸರ್ಕಾರದ ಎನ್.ಐ.ಸಿ ಸೇವೆಯನ್ನು ರದ್ದು ಮಾಡುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿಸಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಗ್ರಾಮೀಣ ರೈತರ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕಿದ್ದ ಇ-ಸ್ವತ್ತು ಕಾರ್ಯಕ್ರಮ ಕಳೆದ 8 ತಿಂಗಳಿಂದ ಒಂದಲ್ಲ ಒಂದು ಕಾರಣಕ್ಕೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದನ್ನು ಸಚಿವರು ಆಕ್ಷೇಪಿಸಿದರು. ತಕ್ಷಣವೇ ಪರ್ಯಾಯ ಕ್ರಮಗಳನ್ನು ತೆಗೆದುಕೊಂಡು, ವಿಳಂಬವಿಲ್ಲದೇ ಹಾಗೂ ಭ್ರಷ್ಟಾಚಾರರಹಿತವಾಗಿ ಇ-ಸ್ವತ್ತು ದಾಖಲೆಗಳನ್ನು ನೀಡುವಂತೆ ಮಾರ್ಪಾಡುಗಳನ್ನು ತರಬೇಕೆಂದು ಸೂಚಿಸಿದರು.

ಈ ಕಾರ್ಯಕ್ರಮವನ್ನು ಸಬಲೀಕರಣಗೊಳಿಸುವುದರೊಂದಿಗೆ ಸರಳೀಕರಣ ಮಾಡಲು ತಿಳಿಸಿದ ಸಚಿವರು, ಭ್ರಷ್ಟಾಚಾರರಹಿತವಾಗಿ ಜನರು ಇ-ಸ್ವತ್ತು ದಾಖಲೆಗಳನ್ನು ಶೀಘ್ರಗತಿಯಲ್ಲಿ ಪಡೆದುಕೊಳ್ಳುವಂತೆ ವ್ಯವಸ್ಥೆಗೆ ಕಾಯಕಲ್ಪ ನೀಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ತಂತ್ರಜ್ಞಾನ ಕೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದ್ದರೂ, ಕೇಂದ್ರ ಸರ್ಕಾರದ ಎನ್.ಐ.ಸಿ ಸಂಸ್ಥೆ ತಂತ್ರಜ್ಞಾನ ಅಳವಡಿಕೆಯಲ್ಲಿ ಇನ್ನೂ ಬಹಳಷ್ಟು ಹಿಂದೆ ಇರುವುದರಿಂದ ನಮ್ಮ ಗ್ರಾಮೀಣ ರೈತರು ತೊಂದರೆಗೊಳಗಾಗಿದ್ದಾರೆ. ಇ - ಸ್ವತ್ತು ನೀಡಿಕೆಯಲ್ಲಿ ಆಗುತ್ತಿರುವ ವಿಳಂಬ ಗತಿ ಹಾಗೂ ಮತ್ತಿತರ ಕಾರಣಗಳು ಇಡೀ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಪಂಚಾಯತ್‌ ರಾಜ್‌ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್‌, ಇ-ಗೌರ್ನೆನ್ಸ್‌ ನಿರ್ದೇಶಕಿ ಡಾ.ನಂದಿನಿ ದೇವಿ ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿದ್ದರು.

ಇದನ್ನೂ ಓದಿ:ಕಲಬುರಗಿಯಲ್ಲಿ ಸೆ.17ರಂದು ಮುಂದಿನ ಸಚಿವ ಸಂಪುಟ ಸಭೆ - Cabinet Meeting in Kalaburagi

ABOUT THE AUTHOR

...view details