ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / state

KRIDL ಕಾಮಗಾರಿಗಳ ಮಾನಿಟರಿಂಗ್ ಸಿಸ್ಟಂ ಗಾಂಧಿ ಸಾಕ್ಷಿ ಕಾಯಕ 2.O ತಂತ್ರಾಶ ಲೋಕಾರ್ಪಣೆ: ಅನುಕೂಲತೆಗಳೇನು? - Software Launch

ಕೆಆರ್‌ಐಡಿಎಲ್ ಕಾಮಗಾರಿಗಳ ಮಾನಿಟರಿಂಗ್ ಸಿಸ್ಟಂ ಗಾಂಧಿ ಸಾಕ್ಷಿ ಕಾಯಕ 2.O ತಂತ್ರಾಶವನ್ನು ಲೋಕಾರ್ಪಣೆಗೊಳಿಸಲಾಯಿತು. ಈ ತಂತ್ರಾಂಶವು ಜಿಎಸ್​ಟಿ - ವ್ಯಾಲಿಡೇಶನ್ ಆ್ಯಪ್ ಹೊಂದಿರುವ ಕಾರಣ ನಕಲಿ ಅಥವಾ ಅಸಮರ್ಪಕ ಜಿಎಸ್​ಟಿ ಸಂಖ್ಯೆಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ‌. ಜಿಎಸ್​ಟಿ ಬಿಲ್‌ಗಳ ನಿರ್ವಹಣೆ ಸುಲಭಸಾಧ್ಯವಾಗಲಿದ್ದು, ತನ್ಮೂಲಕ ಮೊತ್ತಗಳ ನಿಗಮಕ್ಕೆ ಉಂಟಾಗುವ ಸಂಭವನೀಯ ನಷ್ಟವನ್ನು ತಪ್ಪಿಸಬಹುದಾಗಿರುತ್ತದೆ.

SOFTWARE LAUNCH
ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶ ಲೋಕಾರ್ಪಣೆ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ (ETV Bharat)

ಬೆಂಗಳೂರು: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಾಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ನಿರ್ವಹಿಸುವ ಕಾಮಗಾರಿಗಳ ಪ್ರಗತಿಯ ಸಂಪೂರ್ಣ ಮಾಹಿತಿಗಳು, ಕಾಮಗಾರಿಗಳನ್ನು ವಹಿಸುವ ಇಲಾಖೆಗಳಿಂದ ಬಿಡುಗಡೆಯಾಗುವ ಅನುದಾನದ ಸ್ವೀಕೃತಿ ಹಾಗೂ ಬಳಕೆ, ಸೂಕ್ತ ರೀತಿಯಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಮುಂತಾದ ವಿವಿಧ ಅಂಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗಾಂಧಿ ಸಾಕ್ಷಿ ಕಾಯಕ 2.0 (ವರ್ಕ್ ಮಾನಿಟರಿಂಗ್ ಸಿಸ್ಟಂ) ತಂತ್ರಾಂಶವನ್ನು ಸಚಿವ ಪ್ರಿಯಾಂಕ್ ಖರ್ಗೆ ಲೋಕಾರ್ಪಣೆ ಮಾಡಿದರು.

ಕೆಆರ್‌ಐಡಿಎಲ್ ಸಂಸ್ಥೆಯ ವಹಿವಾಟನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಸೂಕ್ತ ತಂತ್ರಾಂಶದ ಅವಶ್ಯಕತೆ ಇದ್ದ ಕಾರಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೆಂಟರ್ ಫಾರ್ ಸ್ಮಾರ್ಟ್ ಗೌರ‍್ನೆನ್ಸ್ ಮೂಲಕ ಈ ತಂತ್ರಾಂಶ ಸೌಲಭ್ಯ ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶದ ವಿಶೇಷತೆ:ಕಾಮಗಾರಿ ವಹಿಸುವ ಇಲಾಖೆಗಳು ಅನುದಾನಗಳನ್ನು ನಿಗಮದ ಕೇಂದ್ರ ಕಚೇರಿಯ ಖಾತೆಗೆ ನೇರವಾಗಿ ಜಮೆ ಮಾಡುವ ಸೌಲಭ್ಯವನ್ನು ಒಳಗೊಂಡ ಈ ತಂತ್ರಾಂಶ, ಗ್ರೂಪ್ ಲೀಡರ್‌ಗಳು ಮತ್ತು ಸಾಮಗ್ರಿಗಳ ಸರಬರಾಜುದಾರರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಹಾಗೂ ಇವರಿಗೆ ಆನ್​ಲೈನ್ ಮೂಲಕ ಹಣ ಬಿಡುಗಡೆ ಮಾಡಬಹುದಾಗಿದೆ. ಕಾಮಗಾರಿಗಳ ನಿರ್ವಹಣೆಗಾಗಿ ಕೇಂದ್ರ ಕಚೇರಿಯ ಖಾತೆಯಿಂದ ಉಪವಿಭಾಗಗಳಿಗೆ ಅನುದಾನ ಬಿಡುಗಡೆ, ಕಾಮಗಾರಿಗಳ ಪ್ರಗತಿಯ ವಿವಿಧ ಹಂತಗಳ ಛಾಯಾಚಿತ್ರಗಳ ಜಿಯೋ ಟ್ಯಾಗ್‌ ಛಾಯಾಚಿತ್ರಗಳ ಆರೋಹಣ, ಕಾಮಗಾರಿಗಳ ಲೆಕ್ಕಪತ್ರಗಳ ನಿರ್ವಹಣೆಯಾಗಲಿದೆ.

ಕಾಮಗಾರಿ ವಹಿಸುವ ಇಲಾಖೆಗಳು ಬಿಡುಗಡೆ ಮಾಡುವ ಅನುದಾನಗಳ ಯೋಜನಾವಾರು ಬಿಡುಗಡೆ, ಕಾಮಗಾರಿಗಳ ಪ್ರಗತಿಗೆ ವ್ಯಯಿಸಲಾದ ವೆಚ್ಚ, ಉಳಿಕೆ ಅನುದಾನಗಳ ನಿಖರ ಮಾಹಿತಿಯನ್ನು ತಂತ್ರಾಶದಿಂದ ಪಡೆಯಬಹುದಾಗಿದೆ. ಜಿಯೋ ಟ್ಯಾಗ್ ಹಾಗೂ ಜಿಯೋ ಫೆನ್ಸಿಂಗ್ ಛಾಯಾಚಿತ್ರಗಳ ಆರೋಹಣ ಮಾಡುವ ಕಾರಣದಿಂದ, ಡೂಪ್ಲಿಕೇಟ್ ಕಾಮಗಾರಿಗಳನ್ನು ನಿರ್ವಹಿಸುವ ಸಾಧ್ಯತೆಗಳನ್ನು ತಡೆಯಬಹುದು. ಕಾಮಗಾರಿಗಳ ನಿರ್ವಹಣೆಗೆ ಅಗತ್ಯವಾದ ಸಾಮಗ್ರಿಗಳ ಖರೀದಿ, ವಿತರಣೆ ಮುಂತಾದ ವಿವರಗಳನ್ನು ದಾಖಲಿಸುವ ಕಾರಣದಿಂದ ಸಾಮಗ್ರಿಗಳ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಎಲ್ಲ ವಿವರಗಳು ನೈಜ ಸಮಯದಲ್ಲಿ ಲಭ್ಯ:ಪ್ರತಿ ಕಾಮಗಾರಿಯ ಪ್ರಗತಿಯ ವಿವರಗಳು, ಛಾಯಾಚಿತ್ರ, ಆ ಕಾಮಗಾರಿಗೆ ಬಿಡುಗಡೆಯಾದ ಅನುದಾನ, ವೆಚ್ಚ ಹಾಗೂ ಉಳಿದಿರುವ ಅನುದಾನ ಲಭ್ಯತೆಯ ವಿವರಗಳು ನೈಜಸಮಯದಲ್ಲೇ ಲಭ್ಯವಾಗುವ ಕಾರಣ, ಕಾಮಗಾರಿಗಳ ಮೇಲ್ವಿಚಾರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಕಾಮಗಾರಿಗಳ ಅಂದಾಜು ಮೊತ್ತ ಹಾಗೂ ಬಿಡುಗಡೆಯಾದ ಅನುದಾನಕ್ಕಿಂತ ಹೆಚ್ಚುವರಿ ವೆಚ್ಚ ಮಾಡುವುದು ಹಾಗೂ ಆಯಾ ಕಾಮಗಾರಿಗಾಗಿ ಬಿಡುಗಡೆಯಾದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಲು ಸಾಧ್ಯವಾಗದಂತೆ ತಡೆಯಬಹುದಾಗಿರುತ್ತದೆ. ಈ ತಂತ್ರಾಂಶವು ಜಿಎಸ್​ಟಿ -ವ್ಯಾಲಿಡೇಶನ್ ಆ್ಯಪ್ ಹೊಂದಿರುವ ಕಾರಣ ನಕಲಿ ಅಥವಾ ಅಸಮರ್ಪಕ ಜಿಎಸ್​ಟಿ ಸಂಖ್ಯೆಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ‌. ಜಿಎಸ್​ಟಿ ಬಿಲ್‌ಗಳ ನಿರ್ವಹಣೆ ಸುಲಭಸಾಧ್ಯವಾಗಲಿದ್ದು, ತನ್ಮೂಲಕ ಮೊತ್ತಗಳ ನಿಗಮಕ್ಕೆ ಉಂಟಾಗುವ ಸಂಭವನೀಯ ನಷ್ಟವನ್ನು ತಪ್ಪಿಸಬಹುದಾಗಿರುತ್ತದೆ ಎಂದರು.

ಹಣಕಾಸಿನ ವ್ಯವಹಾರದ ಸುರಕ್ಷೆತೆಗಾಗಿ DSC (Digital Signature Key) ಸೌಲಭ್ಯವನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಲಾಗಿನ್ ಸುರಕ್ಷತೆಗಾಗಿ SMS ಮತ್ತು OTP ಸೌಲಭ್ಯವನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಈ ತಂತ್ರಾಂಶದ ಮೂಲಕ ಪರಿಣಾಮಕಾರಿಯಾಗಿ ಲೆಕ್ಕಪತ್ರಗಳನ್ನು ನಿರ್ವಹಿಸುವ ಕಾರಣದಿಂದ ಸಂಸ್ಥೆಯ ವಾರ್ಷಿಕ ಲೆಕ್ಕಪತ್ರಗಳನ್ನು ನಿಗದಿತ ಕಾಲಾವಧಿಯೊಳಗೆ ಅಂತಿಮಗೊಳಿಸಲು ಅನುಕೂಲವಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:ವಿವಿಧ ವಿಚಾರಗಳ ಬಗ್ಗೆ ಮಾಹಿತಿ ಕೇಳಿ ರಾಜ್ಯಪಾಲರಿಂದ ಕಾರ್ಯದರ್ಶಿಗಳಿಗೆ 20 ಪತ್ರ: ಸಚಿವ ಪ್ರಿಯಾಂಕ ಖರ್ಗೆ - Priyanka Kharge

ABOUT THE AUTHOR

...view details