ಕರ್ನಾಟಕ

karnataka

ETV Bharat / state

ಬಿಜೆಪಿಯ ಭ್ರಷ್ಟಾಚಾರದಿಂದ ಕಿಯೋನಿಕ್ಸ್ ಸರಬರಾಜುದಾರರು ದಯಾಮರಣ ಕೋರುವಂತಾಗಿದೆ: ಪ್ರಿಯಾಂಕ್ ಖರ್ಗೆ ತಿರುಗೇಟು - KIONICS ISSUE

ಕಿಯೋನಿಕ್ಸ್ ಬಗ್ಗೆ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ ಸಚಿವ ಪ್ರಿಯಾಂಕ್​ ಖರ್ಗೆ ತಿರುಗೇಟು ನೀಡಿದ್ದಾರೆ.

Minister Priyank Kharge
ಸಚಿವ ಪ್ರಿಯಾಂಕ್ ಖರ್ಗೆ (Etv Bharat)

By ETV Bharat Karnataka Team

Published : Jan 16, 2025, 1:07 PM IST

ಬೆಂಗಳೂರು: "ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ದಯೆಯಿಂದ ಕಿಯೋನಿಕ್ಸ್ ಸರಬರಾಜುದಾರರು ದಯಾಮರಣ ಕೋರುವಂತಾಗಿದೆಯೇ ಹೊರತು ನಮ್ಮಿಂದಲ್ಲ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಿಯೋನಿಕ್ಸ್ ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.

ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, "ಭ್ರಷ್ಟಾಚಾರದೆಡೆಗಿನ ನಮ್ಮ ಸರ್ಕಾರದ ಕಠಿಣ ನಿಲುವಿಗೆ ಹಾಗೂ ಜನರ ತೆರಿಗೆ ಹಣದ ದುರ್ಬಳಕೆಯನ್ನು ತಡೆಯುವ ನಮ್ಮ ಪ್ರಯತ್ನಕ್ಕೆ ಬಿಜೆಪಿಯವರು ಕಿರುಕುಳ ಎಂದು ಹೆಸರು ಕೊಡುವುದು ಎಷ್ಟು ಸರಿ? ಪಾರದರ್ಶಕತೆಯು ಭ್ರಷ್ಟರಿಗೆ ಕಿರುಕುಳದಂತೆ ಭಾಸವಾಗುವುದು ಸಹಜವೇ!" ಎಂದು ಹೇಳಿದ್ದಾರೆ.

"ಇಂದು ಕಿಯೋನಿಕ್ಸ್ ಸರಬರಾಜುದಾರರ ಬಿಲ್ ಬಾಕಿ ಉಳಿದಿದೆ ಎಂದರೆ ಅದಕ್ಕೆ ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಯಿ ಹಾಗೂ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರೇ ನೇರ ಕಾರಣ. ಜನಸಾಮಾನ್ಯರ ಬೆವರಿನ ನೂರಾರು ಕೋಟಿ ತೆರಿಗೆ ಹಣದ ಪ್ರತಿ ರೂಪಾಯಿಗೂ ಸಮರ್ಪಕ ಲೆಕ್ಕ ಇಡುವುದು ನಮ್ಮ ಹೊಣೆ ಮತ್ತು ಅತ್ಯಗತ್ಯದ ಕರ್ತವ್ಯ. ಆ ಕರ್ತವ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ" ಎಂದಿದ್ದಾರೆ.

"ಕಿಯೋನಿಕ್ಸ್‌ ಸಂಸ್ಥೆಯಲ್ಲಿ 2018-2023ರ ನಡುವೆ ನಡೆದ ವಹಿವಾಟುಗಳು ಮತ್ತು ಸಂಗ್ರಹಣೆಗಳಿಗೆ ಸಂಬಂಧಿಸಿದಂತೆ ಅಕೌಂಟೆಂಟ್ ಜನರಲ್ ಕಚೇರಿಯು ನಡೆಸಿದ ವಿವರವಾದ ಆಡಿಟ್ ತಪಾಸಣೆ ವರದಿಯಂತೆ ಭಾರಿ ಮೌಲ್ಯದ ಉಲ್ಲಂಘನೆಗಳು ಬೆಳಕಿಗೆ ಬಂದಿವೆ" ಎಂದು ತಿಳಿಸಿದ್ದಾರೆ.

"ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಿಯೋನಿಕ್ಸ್‌ ಸಂಸ್ಥೆ ಆದೇಶ ನೀಡಿದ್ದ 1544 ಕೋಟಿ ರೂ. ಗಳಿಗೆ ಸಂಬಂಧಿಸಿದಂತೆ ಸುಮಾರು 1200 ಸಂಗ್ರಹಣೆಗಳಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯು 45 ಸಂಗ್ರಹಣೆಗಳನ್ನು ಪ್ರಾಯೋಗಿಕವಾಗಿ ಆಡಿಟ್‌ ತಪಾಸಣೆಗೆ ಒಳಪಡಿಸಿದೆ. ಅದರಲ್ಲಿ 455 ಕೋಟಿ ರೂ. ಮೌಲ್ಯದ ಉಲ್ಲಂಘನೆಗಳು ಕಂಡು ಬಂದಿವೆ. 2018-2023ರ ನಡುವೆ ನಡೆದ ವಹಿವಾಟುಗಳನ್ನು ಸಮಗ್ರ ತನಿಖೆಗೆ ಒಳಪಡಿಸುವ ಸಲುವಾಗಿ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರರಾವ್‌ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ" ಎಂದು ಹೇಳಿದ್ದಾರೆ.

"ಕಿಯೋನಿಕ್ಸ್‌ (KEONICS) ಸಂಸ್ಥೆಗೆ ಸಂಬಂಧಿಸಿದ ಸರಬರಾಜುದಾರರು ಹಾಗೂ ಪಾಲುದಾರರು ತಮಗೆ ಪಾವತಿಯಾಗಬೇಕಾದ ಹಣಕ್ಕೆ ಸಂಬಂಧಿಸಿದಂತೆ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ಅವರು ಮನವಿಗಳನ್ನು ಆದ್ಯತೆಯ ಮೇಲೆ ಮತ್ತು ಲೆಕ್ಕಪರಿಶೋಧನೆಯ ಅವಲೋಕನಗಳ ಹಿನ್ನೆಲೆಯಲ್ಲಿ ಪರಿಶೀಲಿಸಲಾಗುತ್ತಿದೆ. ಹಣಕಾಸು ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಸರಣೆ ಮಾಡುವ ಹಿನ್ನೆಲೆಯಲ್ಲಿ ವಿವಿಧ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ಯಾವುದೇ ನಷ್ಟವಾಗದಂತೆ ನೋಡಿಕೊಳ್ಳುವುದು ಪ್ರಾಥಮಿಕ ಗುರಿಯಾಗಿದೆ. ಈ ಉದ್ದೇಶವನ್ನು ಸಾಧಿಸಲು, ಹಣಕಾಸಿನ ಸ್ವಾಮ್ಯದ ನಿಯಮಗಳಿಗೆ ಬದ್ಧವಾಗಿರಲು, ಸಾರ್ವಜನಿಕರ ನಂಬಿಕೆಯನ್ನು ಕಾಪಾಡಿಕೊಳ್ಳಲು, ಅತ್ಯುನ್ನತ ಆರ್ಥಿಕ ಮಾನದಂಡಗಳಂತೆ ನಡೆಯಲು ಇಂತಹ ಕ್ರಮಗಳು ನಿರ್ಣಾಯಕವಾಗಿದೆ" ಎಂದಿದ್ದಾರೆ.

"ಹಣಕಾಸು ಇಲಾಖೆಯು 3ನೇ ಮಾರ್ಚ್ 2023ರ ಅಧಿಸೂಚನೆಯ ಮೂಲಕ ಹೊರಡಿಸಿದ 4ಜಿ ವಿನಾಯಿತಿ ಆದೇಶವನ್ನು ಪಾಲಿಸುವಲ್ಲಿ 2018-2023ರ ನಡುವೆ ನಡೆದ ವಹಿವಾಟುಗಳಲ್ಲಿ ಕಿಯೋನಿಕ್ಸ್ ಸಂಸ್ಥೆಯಲ್ಲಿ ಕೆಲವು ಲೋಪಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಲೋಪಗಳನ್ನು ಸರಿಪಡಿಸುವ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ.

"ಪ್ರತಿ ರೂಪಾಯಿಯನ್ನೂ ಪ್ರಾಮಾಣಿಕವಾಗಿ ವಿನಿಯೋಗಿಸುತ್ತೇವೆ ಎಂಬ ಭರವಸೆಯಿಂದ ನಾಡಿನ ಜನತೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆಯೇ ಹೊರತು ಬಿಜೆಪಿಯವರ ತಾಳಕ್ಕೆ ತಕ್ಕಂತೆ ಕುಣಿಯುವುದಕ್ಕಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಆಡಿಟ್ ಪರಿಶೀಲನೆಯಲ್ಲಿ ಆಕ್ಷೇಪಣೆ ಕಂಡುಬಂದಿರುವುದರಿಂದ ಸಮಗ್ರ ತನಿಖೆಯಾಗಬೇಕಿದೆ. ಕಿಯೋನಿಕ್ಸ್ ವೆಂಡರ್​ಗಳಿಗೆ ಏನಾದರೂ ತೊಂದರೆ ಆಗಿದ್ದರೆ ಅದಕ್ಕೆ ಬಿಜೆಪಿಯ ಭ್ರಷ್ಟಾಚಾರ ಕಾರಣವೇ ಹೊರತು ನಾವಲ್ಲ" ಎಂದು ಹೆಚ್​ಡಿಕೆ ಹೇಳಿಕೆಗೆ ಪ್ರಿಯಾಂಕ್​ ಖರ್ಗೆ ತಿರುಗೇಟು ನೀಡಿದ್ದಾರೆ.

"ಜನರ ತೆರಿಗೆ ಹಣಕ್ಕೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ, ಅಡಿಟರ್ ಜನರಲ್ ಅವರ ಮೇಲ್ನೋಟದ ಲೆಕ್ಕಪರಿಶೋಧನೆಯಲ್ಲೇ 45 ಆಕ್ಷೇಪಣೆಗಳು ಸೇರಿದಂತೆ 455 ಕೋಟಿ ರೂಪಾಯಿ ಮೌಲ್ಯದ ಉಲ್ಲಂಘನೆಗಳನ್ನು ಉಲ್ಲೇಖಸಿದ್ದಾರೆ. ಇವುಗಳ ಸಮಗ್ರ ತನಿಖೆಯಾಗಬೇಕು. ಜನರ ಹಣವನ್ನು ಮನ ಬಂದಂತೆ ಪೋಲು ಮಾಡುವುದಕ್ಕೆ ಸಾಧ್ಯವಿಲ್ಲ" ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೇಳಿದ್ದಾರೆ.

ಇದನ್ನೂ ಓದಿ:ಪ್ರಿಯಾಂಕ್ ಖರ್ಗೆ ಅವರೇ ಉಡಾಫೆ ಬಿಟ್ಟು ಮೊದಲು ಕಿಯೋನಿಕ್ಸ್ ವೆಂಡರ್ಸ್ ಬಿಲ್ ಪಾವತಿಸಿ : ಹೆಚ್.ಡಿ.ಕುಮಾರಸ್ವಾಮಿ ತರಾಟೆ

ABOUT THE AUTHOR

...view details