ಮೈಸೂರು: ಖಾಸಗಿ ವಿಚಾರಕ್ಕೆ ಪತಿಯು ತನ್ನ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನ ಹುಂಡಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ತೇಜಸ್ವಿನಿ (26) ಕೊಲೆೆಗೀಡಾದ ಪತ್ನಿ. ದೇವರಾಜ್ ಕೊಲೆ ಮಾಡಿದ ಪತಿ.
ಕೊಲೆ ಬಳಿಕ ದೇವರಾಜ್ ನೇರವಾಗಿ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿ, ಮೃತದೇಹವನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಘಟನೆಯ ವಿವಿರ: ಮೈಸೂರು ತಾಲೂಕು ಕುಟ್ಟಾಡಿ ಗ್ರಾಮದ ತೇಜಸ್ವಿನಿಯನ್ನು 8 ವರ್ಷಗಳ ಹಿಂದೆ ಕಣಿಯನಹುಂಡಿ ಗ್ರಾಮದ ವಾಸಿ ದೇವರಾಜನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ದಂಪತಿ, ಬೇಸಾಯ ಮಾಡಿಕೊಂಡಿದ್ದರು. ಪ್ರಾರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿಗೆ 5 ವರ್ಷದ ಗಂಡು ಮಗು ಮತ್ತು ಮೂರು ವರ್ಷದ ಹೆಣ್ಣು ಮಗುವಿದೆ. ಇತ್ತೀಚೆಗೆ ಖಾಸಗಿ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗೂ ಜಗಳ ನಡೆದಿದ್ದು, ಪೊಲೀಸ್ ಠಾಣೆ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ರಾಜೀ ಮಾಡಲಾಗಿತ್ತು.
ಬುಧವಾರ ದಂಪತಿ ನಡುವೆ ಮತ್ತೆ ಗಲಾಟೆ ನಡೆದಿದ್ದು, ಸಿಟ್ಟಿನಲ್ಲಿ ಪತ್ನಿಯನ್ನು ಕೊಲೆ ಮಾಡಿದ ದೇವರಾಜನು ಪೊಲೀಸ್ ಠಾಣೆಗೆ ಬಂದು ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥವಾಗಿದ್ದಾರೆ. ಇದೇ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಮಗನಿಂದಲೇ ತಂದೆ - ತಾಯಿ ಹತ್ಯೆ - SON KILLED HIS PARENTS