ಮಂಗಳೂರು : ಕ್ಯಾಂಡಿ ತಿನ್ನುವಾಗ ಗಂಟಲಲ್ಲಿ ಸುಲುಕಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಎರಡು ವರ್ಷದ ಮಗುವಿಗೆ ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಕೆಎಂಸಿ ವೈದ್ಯರು ಮರು ಜನ್ಮ ನೀಡಿದ್ದಾರೆ.
ಗಂಟಲಲ್ಲಿ ಕ್ಯಾಂಡಿ ಸಿಲುಕಿದರ ಪರಿಣಾಮವಾಗಿ ಮಗು ಉಸಿರಾಟಕ್ಕೆ ತೊಂದರೆಯುಂಟಾಗಿತ್ತು. ತಕ್ಷಣಕ್ಕೆ ಮಗುವಿನ ಪೋಷಕರು ಆಸ್ಪತ್ರೆಗೆ ಕರೆ ತಂದಿದ್ದು, ವೈದ್ಯರ ಸಮಯ ಪ್ರಜ್ಞೆಯಿಂದಾಗಿ ತಕ್ಷಣಕ್ಕೆ ಗಂಟಲಲ್ಲಿ ಸಿಲುಕಿದ್ದ ಕ್ಯಾಂಡಿಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ಆಸ್ಪತ್ರೆಗೆ ಮಗುವನ್ನು ಕರೆತಂದಾಗ ಮಗು ಬಹಳ ನಿಶಕ್ತಗೊಂಡಿದ್ದು, ಆಮ್ಲಜನಕ ಪ್ರಮಾಣವೂ ಅಪಾಯಮಟ್ಟದಲ್ಲಿ ಕಡಿಮೆಯಾಗಿ, ಉಸಿರಾಟ ನಡೆಸಲು ಕಷ್ಟವಾಗುತ್ತಿತ್ತು. ತಕ್ಷಣ ಆಸ್ಪತ್ರೆಯ ತಜ್ಞ ವೈದ್ಯರು ಪರೀಕ್ಷೆ ನಡೆಸಿ ವಿಶೇಷವಾದ ಚೋಕಿಂಗ್ ರೆಸ್ಕೊ ವಿಧಾನವನ್ನು ಕೈಗೊಂಡರು. ಆದರೂ ಮಗುವಿನ ಸ್ಥಿತಿ ಸುಧಾರಿಸದಿದ್ದಾಗ ಕ್ರಮಬದ್ಧವಾಗಿ ಬೆನ್ನಿಗೆ ಮತ್ತು ಹೊಟ್ಟೆಯ ಭಾಗದಲ್ಲಿ ಒತ್ತಡ ಹಾಕುವ ಮೂಲಕ ಸಿಲುಕಿದ್ದ ಕ್ಯಾಂಡಿಯನ್ನು ವಾಂತಿ ಮಾಡಿಸಿ ಹೊರ ತೆಗೆದರು. ಆ ಬಳಿಕ ಮಗುವಿನ ಉಸಿರಾಟದಲ್ಲಿ ಚೇತರಿಕೆ ಕಂಡು ಬಂದಿದ್ದು, ನಿಗಾ ಘಟಕದಲ್ಲಿ ಆರೈಕೆ ಮಾಡಲಾಯಿತು ಎಂದು ತುರ್ತು ಚಿಕಿತ್ಸಾ ಘಟಕ ಕ್ಲಸ್ಟರ್ ಮುಖ್ಯಸ್ಥರಾದ ಡಾ. ಜೀಧು ರಾಧಾಕೃಷ್ಣನ್ ಪ್ರಕಟನಣೆಯಲ್ಲಿ ತಿಳಿಸಿದ್ದಾರೆ.
ಉಸಿರುಗಟ್ಟುವುದು ಅಥವಾ ಚೋಕಿಂಗ್ ಎಂದು ಕರೆಯಲ್ಪಡುವ ಸಮಸ್ಯೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಸಮಯದಲ್ಲಿ ವಹಿಸುವ ಮುಂಜಾಗ್ರತೆ ಹಾಗೂ ತುರ್ತು ಆರೈಕೆ, ಚಿಕಿತ್ಸೆ ಪ್ರಮುಖವಾಗಿದ್ದು, ಮಗುವಿನ ಜೀವ ಉಳಿಸುವಲ್ಲಿ ಪ್ರಮುಖವಾಗಿದೆ.
ಇದನ್ನೂ ಓದಿ: 'ನನ್ನ ಅತ್ತೆ ಸಾಯಿಸಲು ಐಡಿಯಾ ಕೊಡಿ': ವೈದ್ಯನಿಗೆ ಮೆಸೇಜ್ ಕಳಿಸಿದ ಸೊಸೆ
ಇದನ್ನೂ ಓದಿ: ಸರ್ಕಾರಿ ಕೆಲಸ, ಮನಿ ಡಬ್ಲಿಂಗ್ ಹೆಸರಲ್ಲಿ ವಂಚಿಸಿ ಪರಾರಿ: ವಿದೇಶದಿಂದ ಬಂದಿಳಿಯುತ್ತಿದ್ದಂತೆ ಮಾಜಿ ಪಿಡಿಒ ಬಂಧನ