ಬೆಳಗಾವಿ:ವಿಜಯೇಂದ್ರ ಗಾಡಿ ಬಹಳ ದಿನ ಹೋಗೋದಿಲ್ಲ. ವಿಜಯೇಂದ್ರ ನಾಯಕತ್ವವನ್ನು ಅವರದೇ ಪಕ್ಷದ ಯತ್ನಾಳ್, ರಮೇಶ್ ಜಾರಕಿಹೊಳಿ, ಆರ್. ಅಶೋಕ್, ಬೊಮ್ಮಾಯಿ ಸೇರಿ ಬಹಳಷ್ಟು ನಾಯಕರು ಒಪ್ಪುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಜೆಪಿ, ಆರ್ಎಸ್ಎಸ್ ಕೆಲಸವೇ ಒಡೆದು ಆಳುವುದು ಎಂದು ಸಚಿವ ಎಂ. ಬಿ ಪಾಟೀಲ್ ವಾಗ್ದಾಳಿ ಮಾಡಿದರು.
ದಲಿತ ವರ್ಸಸ್ ದಲಿತ ಮಾಡುವ ನಿಟ್ಟಿನಲ್ಲಿ ಯಾರಾದರೂ ಧ್ವನಿ ಎತ್ತಿದರೆ ಬೇರೆ ಆಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಅವರನ್ನು ಎತ್ತಿಕಟ್ಟಿ, ಬಲಿಪಶು ಮಾಡುತ್ತಿದ್ದಾರೆ. ಹಿಂದೆ ಯಡಿಯೂರಪ್ಪ ವಿರುದ್ಧ ಯತ್ನಾಳ್ ಸೇರಿ ಮತ್ತಿತರ ಲಿಂಗಾಯತ ನಾಯಕರನ್ನೇ ಬಳಸಿಕೊಂಡು ಷಡ್ಯಂತ್ರ ಮಾಡಿದರು. ಇದನ್ನು ವಿಜಯೇಂದ್ರ ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದ ಎಂ. ಬಿ ಪಾಟೀಲ್, ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ವಿಪಕ್ಷ ನಾಯಕ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಬಹುದಿತ್ತು. ಆದರೆ, ಛಲವಾದಿ ನಾರಾಯಣಸ್ವಾಮಿ ಅವರನ್ನೆ ಏಕೆ ಆಯ್ಕೆ ಮಾಡಿದರು ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿದರೆ ಮುಂದಿನ ಸಿಎಂ ರೇಸ್ನಲ್ಲಿ ತಾವಿದ್ದಿರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ, ಮುಡಾ ಕೇಸ್ನಲ್ಲಿ ಎಳ್ಳಷ್ಟು ಸಿದ್ದರಾಮಯ್ಯ ತಪ್ಪಿಲ್ಲ. ಬಿಜೆಪಿಯವರು ಪಶ್ಚಾತ್ತಾಪ ಪಡುವ ಪರಿಸ್ಥಿತಿ ಬರುತ್ತದೆ. ಖಾಸಗಿಯಾಗಿ ಅನೇಕ ಬಿಜೆಪಿ ನಾಯಕರು ನನ್ನ ಜೊತೆಗೆ ಮಾತಾಡಿದ್ದು, ನಾವು ಬಹಳ ತಪ್ಪು ಹೆಜ್ಜೆ ಇಟ್ಟಿದ್ದೇವೆ ಎಂದಿದ್ದಾರೆ. ಅವರಲ್ಲೇ ಭಿನ್ನಾಭಿಪ್ರಾಯಗಳಿವೆ. ಅಂತಿಮವಾಗಿ ಕೋರ್ಟ್ನಲ್ಲಿ ನ್ಯಾಯ ಸಿಕ್ಕು ಸಿದ್ದರಾಮಯ್ಯನವರು ಮತ್ತಷ್ಟು ಬಲಿಷ್ಠರಾಗುತ್ತಾರೆ. ಆಗ ಬಿಜೆಪಿಯವರು ಹಣೆ ಹಣೆ ಬಡಿದುಕೊಳ್ಳಬೇಕಾಗುತ್ತದೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಈಗ ಸಿಎಂ ಇದ್ದಾರೆ. ಅವರೇ ಮುಂದುವರೆಯುತ್ತಾರೆ. ಸಿಎಂ ಖುರ್ಚಿಗೆ ಯಾರೂ ಟವೆಲ್ ಹಾಕೋ ಪ್ರಶ್ನೆ ಬರಲ್ಲ. ಸಿದ್ದರಾಮಯ್ಯನವರ ಈ ಅವಧಿ ಮುಗಿದ ಮೇಲೆ ಆ ಪ್ರಶ್ನೆ ಉದ್ಭವಿಸುತ್ತದೆ. ನಾನು ಯಾವುದೇ ಆಕಾಂಕ್ಷಿ ಅಲ್ಲ. ಸಿದ್ದರಾಮಯ್ಯನವರು ಐದು ವರ್ಷ ಅವಧಿ ಪೂರ್ಣಗೊಳಿಸುತ್ತಾರೆ. ನಾನು ಬಯಸಿದರೆ ಸಿಎಂ ಆಗಲ್ಲ. ಹೈಕಮಾಂಡ್, ಶಾಸಕರು ಬಯಸಬೇಕು. ಈಗ ಅಂತೂ ಸಿಎಂ ಸ್ಥಾನ ಖಾಲಿ ಇಲ್ಲ. ಅಂತಹ ದುರಾಸೆಗಳಿಲ್ಲ. ನಾವು ಬಿಜಾಪುರದವರು ಬಹಳ ನೇರವಾಗಿದ್ದೇವೆ. ನಮ್ಮಲ್ಲಿ ಯಾರೂ ದುರಾಸೆ ಪಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಎಲ್ಲ ಸಚಿವರು, ಶಾಸಕರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಇಡೀ ಪಕ್ಷ ನಿಂತಿದೆ ಎಂದು ಸಮರ್ಥಿಸಿಕೊಂಡರು.
ಶಾಮನೂರು ಶಿವಶಂಕರಪ್ಪ ಅವರ ಜೊತೆಗೆ ಸಂಬಂಧ ಬೆಳೆಸಿದ ಬಳಿಕ ಲಿಂಗಾಯತ ಧರ್ಮದ ಹೋರಾಟ ಕೈ ಬಿಟ್ಟರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಎಂ.ಬಿ.ಪಾಟೀಲ್, ಸಂಬಂಧ ಬೇರೆ, ಹೋರಾಟ, ಸಂಘಟನೆ ಬೇರೆ. ಅದು ನಡೆಯುತ್ತಿದೆ. ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭೆ ಅಧಿವೇಶನದಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ನಿರ್ಣಯ ಕೈಗೊಂಡಿದ್ದಾರೆ. ಹಾಗಾಗಿ, ನೀವು ಅವರನ್ನು ಈ ಬಗ್ಗೆ ಪ್ರಶ್ನೆ ಕೇಳಿ ಎಂದು ಹೇಳಿದರು.
ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ: ಶೆಡ್ ಗಿರಾಕಿ ಎಂದು ಛಲವಾದಿ ನಾರಾಯಣಸ್ವಾಮಿ ಕರೆದಿರುವ ವಿಚಾರಕ್ಕೆ, ರಾಜಕೀಯ ಹೊರತುಪಡಿಸಿ ಛಲವಾದಿ ನಾರಾಯಣಸ್ವಾಮಿ ನನಗೆ ಆಪ್ತರು. ಛಲವಾದಿ ನಾರಾಯಣಸ್ವಾಮಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್, ರಾಹುಲ್, ಖರ್ಗೆ ಕೂಡ ದಲಿತರೇ ಅಲ್ಲವೇ ? ಒಬ್ಬ ದಲಿತರನ್ನು ಉಪಯೋಗಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ದಲಿತರಿಗೆ ಮಾಡಿದ ಅಪಮಾನ ಅಲ್ಲವೇ? ಛಲವಾದಿ ನಾರಾಯಣಸ್ವಾಮಿ ಅವರನ್ನು ಬಲಿ ಪಶು ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಶೆಡ್ ಗಿರಾಕಿ ಎಂದು ಆ ಅರ್ಥದಲ್ಲಿ ಕರೆದಿಲ್ಲ. ಒಂದು ವೇಳೆ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.