ಕರ್ನಾಟಕ

karnataka

ETV Bharat / state

2033ರಲ್ಲಿ ಎರಡನೇ ವಿಮಾನ ನಿಲ್ದಾಣ, ಇದಕ್ಕಾಗಿ 7 ಸ್ಥಳ ಗುರುತು: ಸಚಿವ ಎಂ.ಬಿ.ಪಾಟೀಲ್ - 2nd Airport In Bengaluru - 2ND AIRPORT IN BENGALURU

ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಸಚಿವರಾದ ಎಂ.ಬಿ.ಪಾಟೀಲ್​ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್​ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಎರಡನೇ ವಿಮಾನ ನಿಲ್ದಾಣ
ಎರಡನೇ ವಿಮಾನ ನಿಲ್ದಾಣ (ETV Bharat)

By ETV Bharat Karnataka Team

Published : Aug 5, 2024, 9:23 PM IST

ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ನಿರ್ಮಿಸಲು ಉದ್ದೇಶಿರುವ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏಳು ಸ್ಥಳಗಳನ್ನು ಗುರುತು ಮಾಡಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಂಗಳವಾರ ಅಥವಾ ಬುಧವಾರ ಚರ್ಚಿಸಿ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಕ್ಷಿಪ್ರಗತಿಯಲ್ಲಿ ಪ್ರಸ್ತಾವನೆ ಸಲ್ಲಿಸಲು ಸೋಮವಾರ ಇಲ್ಲಿ ನಡೆದ ನಿರ್ಣಾಯಕ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವಿಧಾನಸೌಧದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್​ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಐಡೆಕ್ ಮತ್ತು ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್ ಸಂಸ್ಥೆಗಳು ಸಿದ್ಧಪಡಿಸಿರುವ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು.

9 ರಲ್ಲಿ 7 ಸ್ಥಳ ನಿಗದಿ:ನಂತರ ಮಾತನಾಡಿದ ಇಬ್ಬರೂ ನಾಯಕರು, "ನೂತನ ವಿಮಾನ ನಿಲ್ದಾಣಕ್ಕೆ ಐಡೆಕ್ ಸಂಸ್ಥೆಯು 9 ಜಾಗಗಳನ್ನು ಗುರುತಿಸಿತ್ತು. ಈ ಪೈಕಿ ಎರಡು ಸ್ಥಳಗಳನ್ನು ತಾಂತ್ರಿಕ ಕಾರಣಗಳಿಂದ ಕೈಬಿಡಲಾಗಿದೆ. ಉಳಿದ ಸ್ಥಳಗಳ ಮಾಹಿತಿಯೊಂದಿಗೆ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಕಳಿಸಲಾಗುವುದು. ಇದಕ್ಕೂ ಮೊದಲು ಮುಖ್ಯಮಂತ್ರಿಗಳ ಜೊತೆ ಅಂತಿಮ ಚರ್ಚೆ ನಡೆಸಲಾಗುವುದು" ಎಂದರು.

ವಿಮಾನ ನಿಲ್ದಾಣಕ್ಕೆ ಯಾವ ಜಾಗ ಸೂಕ್ತ ಎನ್ನುವುದನ್ನು ಬೆಂಗಳೂರು ಮತ್ತು ಕರ್ನಾಟಕದ ಹಿತದೃಷ್ಟಿಯಿಂದ ತೀರ್ಮಾನಿಸಲಾಗುವುದು. ಇದರಲ್ಲಿ ರಾಜಕೀಯ ಏನೂ ಇರುವುದಿಲ್ಲ. ಪ್ರಾಧಿಕಾರವು 15 ಮಾನದಂಡಗಳನ್ನು ಇಟ್ಟುಕೊಂಡಿದ್ದು, ಅದರಂತೆ ನಿರ್ಧಾರವಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್​​ ಹೇಳಿದರು.

2033ರ ವೇಳೆಗೆ ವಿಮಾನ ನಿಲ್ದಾಣ:ಡಿ.ಕೆ. ಶಿವಕುಮಾರ್ ಮಾತನಾಡಿ, ನೂತನ ವಿಮಾನ ನಿಲ್ದಾಣದ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಈಗಾಗಲೇ ಹತ್ತಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ. ಬೆಂಗಳೂರು ನಗರದ ಅಭಿವೃದ್ಧಿ, ಅವಕಾಶ ಮತ್ತು ಪ್ರಯಾಣಿಕರು ಹಾಗೂ ಸರಕು ಸಾಗಣೆ ಒತ್ತಡ ಪರಿಗಣಿಸಿ, ಮುಂದಿನ ಹೆಜ್ಜೆ ಇಡಲಾಗುವುದು ಎಂದರು.

ಬಿಐಎಎಲ್ ಜೊತೆಗಿನ 150 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣ ನಿಷೇಧ ಷರತ್ತು 2033ಗೆ ಮುಕ್ತಾಯವಾಗಲಿದೆ.‌ 2033ಕ್ಕೆ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗಬೇಕಿದೆ. ಸದ್ಯ ಬೆಂಗಳೂರು ಏರ್​​ಪೋರ್ಟ್​ನಲ್ಲಿ ಎರಡು ರನ್​ ವೇ ಇದೆ. ಬೆಂಗಳೂರಿನಂಥ ದೊಡ್ಡ ನಗರಕ್ಕೆ ಎರಡು ರನ್ ವೇ ಸಾಕಾಗದು. ಮುಂಜಾಗ್ರತಾ ಕ್ರಮವಾಗಿ ಎರಡನೇ ಏರ್​​ಪೋರ್ಟ್ ಮಾಡಲು ಚರ್ಚಿಸಿದ್ದೇವೆ. ಸಿಎಂ ಜೊತೆ ಚರ್ಚಿಸಿ ಅದನ್ನು ದೆಹಲಿಗೆ ಕಳುಹಿಸುತ್ತೇವೆ. ತಾಂತ್ರಿಕ ಆಧಾರದಲ್ಲಿ ಭಾರತೀಯ ವಿಮಾನ ಪ್ರಾಧಿಕಾರ ತೀರ್ಮಾನ ಮಾಡಲಿದೆ‌. ಕನಿಷ್ಠ 4 ಸಾವಿರ ಎಕರೆ ಜಮೀನು ಬೇಕಾಗಿದೆ ಎಂದರು.

ಸಭೆಯಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್​​.ಕೆ.ಅತೀಕ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಸಿಂಗ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಬಿಎಂಆರ್​ಡಿ ಆಯುಕ್ತ, ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಕೊರ್ಲಪಟಿ, ಕೆಎಸ್ಎಸ್ಐಡಿಸಿ ಎಂ.ಡಿ.ಸತೀಶ್​​ ಮುಂತಾದವರು ಇದ್ದರು.

ಗುರುತಿಸಲಾದ ಪ್ರಸ್ತಾಪಿತ ಸ್ಥಳಗಳ್ಯಾವುವು?:ಎರಡನೇ ವಿಮಾನ ನಿಲ್ದಾಣಕ್ಕೆ ಏಳು ಸ್ಥಳಗಳನ್ನು ಗುರುತಿಸಿದೆ. ಯಾವುದೇ ಸ್ಥಳಗಳು ಇನ್ನೂ ಅಂತಿಮವಾಗಿಲ್ಲ. ಹೊಸ ವಿಮಾನ ನಿಲ್ದಾಣಕ್ಕಾಗಿ ಮೈಸೂರು ರಸ್ತೆ, ದಾಬಸ್​ಪೇಟೆ, ಜಿಗಣಿ, ತುಮಕೂರು, ಕುಣಿಗಲ್, ಕನಕಪುರ ಹೆಸರನ್ನು ಗುರುತಿಸಲಾಗಿದೆ ಎನ್ನಲಾಗಿದೆ. ಪ್ರಸ್ತಾಪಿತ ಏಳು ಸ್ಥಳಗಳ ಹೆಸರು ಉಲ್ಲೇಖಿಸಲು ನಿರಾಕರಿಸಿದರು.

ಇದನ್ನೂ ಓದಿ:ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪ್ರಕಟ - Reservation For Local Bodies

ABOUT THE AUTHOR

...view details