ಬೆಂಗಳೂರು : ರಾಜಧಾನಿಯ ಸಮೀಪದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧವಾಗಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ಅವರು ವಿಮಾನಯಾನ ವಲಯದ ಪ್ರಮುಖರ ಜತೆ ಬುಧವಾರ ಇಲ್ಲಿ ಮತ್ತೊಂದು ಸುತ್ತಿನ ವಿಸ್ತೃತ ಚರ್ಚೆ ನಡೆಸಿದರು.
ವಿಧಾನಸೌಧದ ಸಚಿವರ ಕಚೇರಿಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್) ಸಿಇಒ ಹರಿ ಮರಾರ್, ಕ್ಯಾಪ್ಟನ್ ಗೋಪಿನಾಥ್, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಎನ್ ಮಂಜುಳಾ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸತೀಶ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ ಹೆಬ್ಸಿಬಾ ಕೋರ್ಲಪಟ್ಟಿ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಸಚಿವರು, 'ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮತ್ತು ವಿಮಾನ ಪ್ರಯಾಣಿಕರ ದಟ್ಟಣೆ ಅನುಭವಿಸುತ್ತಿರುವ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಬೇಕು ಎನ್ನುವುದರಲ್ಲಿ ಅನುಮಾನವಿಲ್ಲ. ಸ್ಥಳದ ಆಯ್ಕೆ ಇತ್ಯಾದಿಗಳನ್ನು ಇನ್ನೂ ಅಖೈರುಗೊಳಿಸಿಲ್ಲ. ಈ ಬಗ್ಗೆ ಮತ್ತಷ್ಟು ಸಮಾಲೋಚನಾ ಸಭೆಗಳನ್ನು ನಡೆಸುವ ಅಗತ್ಯವಿದೆ' ಎಂದರು.