ಬೆಳಗಾವಿ: ಪೋಷಣ್ ಆ್ಯಪ್ ಹ್ಯಾಕ್ ಮಾಡದಂತೆ ಕ್ರಮ ವಹಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಬಾಣಂತಿಯರಿಗೆ ಸೈಬರ್ ವಂಚಕರು ಮೋಸ ಮಾಡಿರುವ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತಿಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಶೇರ್ ಮಾರ್ಕೆಟ್ ಸೇರಿ ಅನೇಕ ಕಡೆ ವಂಚನೆ ಪ್ರಕರಣಗಳು ಕಂಡು ಬರುತ್ತಿವೆ. ಇನ್ನು ಪೋಷಣ್ ಆ್ಯಪ್ನಲ್ಲಿ ಫಲಾನುಭವಿಗಳ ಮಾಹಿತಿ ಹಾಕುತ್ತಿರುತ್ತೇವೆ. ಈ ವಂಚನೆ ಕುರಿತು ಮಾಧ್ಯಮಗಳಿಂದ ನನಗೆ ಗೊತ್ತಾಗಿದೆ ಎಂದರು.
ಪೋಷಣ್ ಅಭಿಯಾನ ಆ್ಯಪ್ಅನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರ ನಿರ್ವಹಿಸುತ್ತದೆ. ಇದು ನಮ್ಮ ಹಂತದಲ್ಲಿ ನಿರ್ವಹಣೆ ಆಗೋದಿಲ್ಲ. ಆದರೆ, ನನ್ನ ಗಮನಕ್ಕೆ ಬಂದ ತಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಕರೆ ಮಾಡಿ ಮಾತಾಡಿದ್ದೇನೆ. 70 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಾಗೂ ಗರ್ಭಿಣಿಯರು ಮೋಸಕ್ಕೆ ಒಳಗಾಗದಂತೆ ಹುಷಾರಾಗಿ ಇರುವಂತೆ ಸಂದೇಶ ಕಳಿಸಿದ್ದೇವೆ ಎಂದು ತಿಳಿಸಿದರು.
ಗರ್ಭಿಣಿ ಮಹಿಳೆಯರ ಮಾಹಿತಿಯನ್ನು ವಂಚಕರು ಪಡೆದಿರುವ ಕುರಿತು ಪ್ರತಿಕ್ರಿಯಿಸಿ, ಪೋಷಣ್ ಅಭಿಯಾನ ಟ್ರ್ಯಾಕರ್ ನಲ್ಲಿ ಅಂಗನವಾಡಿ ಮಕ್ಕಳ ಹಾಜರಾತಿ, ಗರ್ಭಿಣಿಯರು ಮತ್ತು ಬಾಣಂತಿಯರ ಸಂಖ್ಯೆ ಎಷ್ಟಿದೆ?. ಅದೇ ರೀತಿ ಅವರಿಗೆ ಏನೆಲ್ಲಾ ಯೋಜನೆಗಳಿವೆ? ಮತ್ತು ಎಷ್ಟು ಹಣ ಬಿಡುಗಡೆ ಮಾಡುತ್ತೇವೆ ಎನ್ನುವುದು ಸೇರಿ ಎಲ್ಲವನ್ನು ಹಾಕಿರುತ್ತೇವೆ. ವಂಚಕರು ಹ್ಯಾಕ್ ಮಾಡಿದರೆ ಮಾಹಿತಿ ಸಿಗುತ್ತದೆ. ಹೀಗಾಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿನಂತಿಸಿದ್ದಾರೆ.