ಬೆಳಗಾವಿ:"ಯಾರೇ ಸಿಎಂ ರೇಸ್ನಲ್ಲಿದ್ದರೂ,ಹೈಕಮಾಂಡ್ ನಿರ್ದೇಶನ ಹಾಗೂ 136 ಜನ ಎಂಎಲ್ಎಗಳ ಇಚ್ಛೆಯ ಮೇರೆಗೆ ಸಿಎಂ ಆಯ್ಕೆ ನಡೆಯಲಿದೆ" ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ರೇಸ್ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೆಸರು ಕೇಳಿ ಬರುತ್ತಿದೆಯಲ್ಲವೇ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
ಇನ್ನು, ಸಚಿವ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಇದರಲ್ಲಿ ಏನೂ ವಿಶೇಷವಿಲ್ಲ. ನಾನೂ ಸಹ ಮೊನ್ನೆ ಹೋಗಿದ್ದೆ. ಅಧ್ಯಕ್ಷರು ನಮ್ಮ ಸರ್ವೋಚ್ಚ ನಾಯಕರು, ಅವರನ್ನು ಭೇಟಿ ಆಗುತ್ತೇವೆ. ಕೆಲಸವಿದ್ದಾಗ ಭೇಟಿ ಆಗೋದು ಸಹಜ ಪ್ರಕ್ರಿಯೆ" ಎಂದು ಹೇಳಿದರು.
"ಗೃಹಲಕ್ಷ್ಮಿ ಯೋಜನೆಯನ್ನು ಟೀಕಿಸುವ ಬಿಜೆಪಿಗರು ಹರಿಯಾಣದಲ್ಲಿ 2,100 ರೂ ಕೊಡುವ ಘೋಷಣೆ ಮಾಡಿದ್ದಾರೆ. ಮೊದಲಿನಿಂದಲೂ ಬಿಜೆಪಿಯವರಿಗೆ ಈ ಚಟ ಇದೆ. ಕಾಂಗ್ರೆಸ್ನ ಎಲ್ಲ ಕಾರ್ಯಕ್ರಮಗಳ ಬಗ್ಗೆ ಟೀಕೆ-ಟಿಪ್ಪಣಿ ಮಾಡುತ್ತಾರೆ. ಆಮೇಲೆ ಅದೇ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾರೆ" ಎಂದು ಟೀಕಿಸಿದರು.
ನೀವು ಕಾಪಿರೈಟ್ ಕೇಸ್ ಹಾಕುತ್ತೀರಾ ಎಂಬ ಪ್ರಶ್ನೆಗೆ, "ಕಾಪಿರೈಟ್ ಜನರೇ ಹಾಕಬೇಕು. ಲಾಡ್ಲಿ ಬೆಹ್ನಾ ಯೋಜನೆ ಅಂತ ಮಧ್ಯ ಪ್ರದೇಶದಲ್ಲಿ ಮಾಡಿದರು. ಈಗ ಮಹಾರಾಷ್ಟ್ರದಲ್ಲಿ ಮಾಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಹರಿಯಾಣದಲ್ಲೂ ಸಹ ಮಾಡುತ್ತಿದ್ದಾರೆ. ಕರ್ನಾಟಕ ಮಾಡಲ್, ಗುಜರಾತ್ ಮಾಡಲ್ ಹಿಂದಿಕ್ಕಿ ಮುಂದೆ ಹೋಗುತ್ತಿದ್ದು, ಅದಕ್ಕೆ ಹೆಮ್ಮೆ ಇದೆ" ಎಂದರು.