ಕರ್ನಾಟಕ

karnataka

ಮಧುಗಿರಿ ತಾಲೂಕಿನಲ್ಲಿಯೂ ಬೃಹತ್ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಸಿದ್ಧತೆ: ಸಚಿವ ಕೆ ಜೆ ಜಾರ್ಜ್ - Minister KJ George

By ETV Bharat Karnataka Team

Published : Jul 1, 2024, 9:22 PM IST

ಮಧುಗಿರಿ ತಾಲೂಕಿನಲ್ಲಿ ಬೃಹತ್ ಸೋಲಾರ್ ಪಾರ್ಕ್​ ನಿರ್ಮಾಣದ ಕುರಿತು ಇಂಧನ ಸಚಿವ ಕೆ. ಜೆ ಜಾರ್ಜ್​ ಮಾತನಾಡಿದ್ದಾರೆ.

minister-kj-george
ಇಂಧನ ಸಚಿವ ಕೆ. ಜೆ ಜಾರ್ಜ್​ (ETV Bharat)

ಇಂಧನ ಸಚಿವ ಕೆ. ಜೆ ಜಾರ್ಜ್​ (ETV Bharat)

ತುಮಕೂರು:ಜಿಲ್ಲೆಯ ಪಾವಗಡದಲ್ಲಿ ನಿರ್ಮಾಣ ಮಾಡಿರುವಂತೆ ಮಧುಗಿರಿ ತಾಲೂಕಿನಲ್ಲಿಯೂ ಬೃಹತ್ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಿದ್ದೇವೆ ಎಂದು ಇಂಧನ ಸಚಿವ ಕೆ. ಜೆ ಜಾರ್ಜ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹತ್ವಾಕಾಂಕ್ಷೆಯ ಕುಸುಮ್ ಬಿ ಅಂಡ್ ಸಿ ಯೋಜನೆಗೆ ಚಾಲನೆ ಸಿಕ್ಕಿದ್ದು, ಕ್ಯಾಬಿನೆಟ್​ನಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಸೋಲಾರ್ ಸಬ್ ಸ್ಟೇಷನ್‌ಗಳಿದ್ದು, 3 ಸಾವಿರ ಮೆಗಾವ್ಯಾಟ್ ಉತ್ಪಾದನೆ ಮಾಡಿ ರೈತರಿಗೆ ಕೊಡಲಾಗುವುದು ಎಂದರು.

ಎಲ್ಲೆಲ್ಲಿ ಸರ್ಕಾರಿ ಜಾಗ ಇದೆ. ಅದನ್ನು ಉಚಿತವಾಗಿ ಕೊಡಬೇಕು ಅಂತಾ ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಲಾಗಿದೆ. ಉಚಿತವಾಗಿ ಜಮೀನು ಸಿಕ್ಕರೂ ಕೂಡ ಗುತ್ತಿಗೆದಾರರು ಪಾವಗಡದಲ್ಲಿ ರೈತರಿಗೆ ಹೇಗೆ ಎಕರೆಗೆ 25 ಸಾವಿರ ರೂ. ನೀಡಲಾಗುತ್ತಿದೆಯೋ ಅದೇ ರೀತಿ ಗುತ್ತಿಗೆದಾರರು ಪ್ರತಿ ಎಕರೆಗೆ ಹಣ ನೀಡಬೇಕು. ಆ ಹಣವನ್ನು ಜಿಲ್ಲಾಧಿಕಾರಿ ಖಾತೆಯಲ್ಲಿ ಡೆಪಾಸಿಟ್ ಮಾಡಲಾಗುತ್ತೆ. ಆ ಹಣದಲ್ಲಿ ಯಾವ ಪ್ರದೇಶದಲ್ಲಿ ಜಮೀನು ಪಡೆಯುತ್ತೇವೋ, ಆ ಪ್ರದೇಶದ ಸುತ್ತಮುತ್ತಲಿನ ಊರುಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ 735 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕೊಡಲಾಗಿದೆ ಎಂದರು.

ಪಾವಗಡ ಸೋಲಾರ್ ಪಾರ್ಕ್ ವಿಸ್ತರಣೆ ಮಾಡುವ ವಿಚಾರ ಸಂಬಂಧ ಮಾತನಾಡಿ, ಪಾವಗಡ ಸೋಲಾರ್ ಪಾರ್ಕ್​ನಲ್ಲಿ 2000 ಮೆಗಾ ವ್ಯಾಟ್ ಉತ್ಪಾದನೆ ಮಾಡಲಾಗುತ್ತಿದೆ. ನಮಗೆ ಬೇಡಿಕೆ ಕಡಿಮೆ ಇತ್ತು. ಹೀಗಾಗಿ ವಿಸ್ತರಣೆ ಆಗಿರಲಿಲ್ಲ. ಆದರೆ, ಇದೀಗ ಬೇಡಿಕೆ ಬಂದಿದೆ. ಜೊತೆಗೆ ನಾನು ಮತ್ತು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅಲ್ಲಿ ಹೋದಾಗ ನಾವು ಇನ್ನೂ 10 ಸಾವಿರ ಎಕರೆ ಕೊಡುತ್ತೇವೆ ಎಂದು ರೈತರು ಹೇಳಿದ್ದಾರೆ. ಹೀಗಾಗಿ ವಿಸ್ತರಣೆ ಮಾಡುವ ಪ್ರಕ್ರಿಯೆ ಶುರು ಮಾಡಿದ್ದೇವೆ ಎಂದು ಹೇಳಿದರು.

ಪಾವಗಡದಂತೆಯೇ ಮಧುಗಿರಿಯಲ್ಲಿಯೂ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುವುದು. ಕೇಂದ್ರ ಸರ್ಕಾರದ ಒಂದು ಏಜೆನ್ಸಿ ಜೊತೆ ಸೇರಿ ನಿರ್ಮಾಣ ಮಾಡಲಿದ್ದೇವೆ. ಅವರು ಈ ಸೋಲಾರ್ ಪಾರ್ಕ್​ಗೆ ಬಂಡವಾಳ ಹೂಡುತ್ತಾರೆ. ನಾವು ಜಮೀನು ಕೊಟ್ಟರೆ ರೈತರಿಗೆ 3 ರೂಪಾಯಿ 17 ಪೈಸೆಗಿಂತ ಕಡಿಮೆ ಹಣದಲ್ಲಿ ಗುತ್ತಿಗೆದಾರರು ವಿದ್ಯುತ್ ಕೊಡುತ್ತಾರೆ. ಒಂದು ಮೆಗಾವ್ಯಾಟ್‌ಗೆ ನಾಲ್ಕು ಎಕರೆಯಿಂದ ಐದು ಎಕರೆ ಜಮೀನು ಬೇಕು. ಮಧುಗಿರಿಯಲ್ಲಿ 500 ಮೆಗಾವ್ಯಾಟ್ ಉತ್ಪಾದನೆ ಮಾಡುವ ಉದ್ದೇಶವಿದೆ. ಹೀಗಾಗಿ 2000-2500 ಎಕರೆ ಜಮೀನಿನ ಅಗತ್ಯವಿದೆ. ಇದಕ್ಕೆ ಸಚಿವ ರಾಜಣ್ಣ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :ಪಾವಗಡದಲ್ಲಿ ಮತ್ತೊಂದು ಬೃಹತ್ ಸೋಲಾರ್ ಪಾರ್ಕ್ ಸ್ಥಾಪನೆ: ರೈತರಿಗೂ ಸಿಗಲಿದೆ ಪಾಲುದಾರಿಕೆ

ABOUT THE AUTHOR

...view details