ಮೈಸೂರು: ನಮ್ಮ ನಾಡಿದ ಸಂಸ್ಕೃತಿ, ಸಂಪ್ರದಾಯ, ಕಲೆ, ಸಾಹಿತ್ಯದ ಬಗ್ಗೆ ಹೊರಗಿನ ಜನರಿಗೆ ಮತ್ತಷ್ಟು ತಿಳಿಸುವ ಕೆಲಸವಾಗಬೇಕು. ಎಲ್ಲೆಡೆ ಚರ್ಚೆಯಾಗುವಂತೆ ಮಾಡಬೇಕು ಎಂದು ಸಚಿವ ಡಾ. ಹೆಚ್ಸಿ ಮಹದೇವಪ್ಪ ಹೇಳಿದರು. ಕ್ಲಾಕ್ ಟವರ್ ಬಳಿ ಆಯೋಜಿಸಿದ್ದ 'ಮೈಸೂರು ಫೆಸ್ಟ್' ಚಿತ್ರಸಂತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂತಹದ್ದೇ ಗುರಿ ಇಟ್ಟುಕೊಂಡಿರುವ ಪ್ರವಾಸೋದ್ಯಮ ಇಲಾಖೆ, ಈ ಜಾತ್ರೆಯನ್ನು ಪ್ರಾರಂಭಿಸಿದೆ. ನಗರಸಭೆ, ಪುರಸಭೆ, ಪಟ್ಟಣದಲ್ಲಿ ಸಂಚರಿಸಿ ಕಲೆ, ವಿನ್ಯಾಸ, ಚಿತ್ರಸಂತೆ ಮೂಲಕ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸಲಾಗುತ್ತಿದೆ. ಮೈಸೂರು ಫೆಸ್ಟ್ ಅನ್ನು ಮುಂದಿನ ದಿನದಲ್ಲಿ ಬ್ರಾಂಡ್ ಮೈಸೂರು ಫೆಸ್ಟ್ ಆಗಿ ಮಾಡಬೇಕು. ದೇಶ ಸುತ್ತಬೇಕು, ಕೋಶ ಓದಬೇಕು ಎಂಬ ಮಾತಿನಂತೆ ಎಲ್ಲದರ ಬಗ್ಗೆಯೂ ತಿಳಿದುಕೊಳ್ಳಬೇಕು. ಈ ಹಬ್ಬ ನಿರಂತರವಾಗಿ ನಡೆಯಬೇಕು. ಇದರಿಂದ ಕಲಾವಿದರಿಗೆ ಹೆಚ್ಚಿನ ಅವಕಾಶ ಸಿಗುವಂತೆ ಆಗಲಿದೆ ಎಂದರು.
ರಾಜ್ಯ ಮತ್ತು ರಾಷ್ಟ್ರದಲ್ಲಿ 75ನೇ ಗಣರಾಜ್ಯೋತ್ಸವ ಮನೆ ಮಾಡಿದೆ. ಜನರ ಅನಿಸಿಕೆಗಳನ್ನು ಹೇಳಿಕೊಳ್ಳುವುದಕ್ಕೆ ನಮಗೆ ನಾವೇ ಸಂವಿಧಾನ ರಚಿಸಿಕೊಂಡ ದಿನವಿದು. ಎಲ್ಲರೂ ಜಾತ್ಯತೀತ, ಸಮಾಜವಾದಿ, ಸಾರ್ವಭೌಮತೆ ಅಳವಡಿಸಿಕೊಳ್ಳಬೇಕು. ಸಂವಿಧಾನದ ಎಲ್ಲ ತತ್ವಗಳು ಯಥಾವತ್ತಾಗಿ ಜಾರಿಯಾದರೆ ಸಮೃದ್ಧ ಭಾರತ ನಿರ್ಮಾಣವಾಗಲಿದೆ. ಮೇಲು - ಕೀಳು, ಭೇದ-ಭಾವವನ್ನು ತೊಡೆದು ಹಾಕಿ ಎಲ್ಲ ಯುವ ಮನಸ್ಸುಗಳನ್ನು ಒಂದೆಡೆ ಸೇರಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಇಂತಹ ಸಂವಿಧಾನ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು. ಭಾರತದಲ್ಲಿ ವಾಸಿಸುತ್ತಿರುವ 140 ಕೋಟಿ ಜನರು ಭಾರತೀಯರೇ. ಅದನ್ನು ಒತ್ತಿ ಹೇಳುವ ಸಂವಿಧಾನವನ್ನು ಅಳವಡಿಸಿಕೊಳ್ಳಬೇಕು. ಸಂವಿಧಾನ ಎಲ್ಲರನ್ನು ರಕ್ಷಿಸಲು ಇದೆ. ಇದು ಯಾವುದೇ ಜಾತಿ, ಸಮುದಾಯದ ರಕ್ಷಣೆಗೆ ಸೀಮಿತವಾಗಿಲ್ಲ ಎಂದು ಅವರು ಹೇಳಿದರು.