ಕರ್ನಾಟಕ

karnataka

ETV Bharat / state

ಮಳೆ ನೀರನ್ನು ವಾಪಸ್​ ಆಕಾಶಕ್ಕೆ ಕಳಿಸಲಾಗುವುದಿಲ್ಲ, ಭೂಮಿ ಮೇಲೆನೇ ಹರಿಯಬೇಕು: ಸಚಿವ ಜಿ.ಪರಮೇಶ್ವರ್ - G PARAMESHWAR REACTION

ಇಷ್ಟು ಪ್ರಮಾಣದಲ್ಲಿ ಮಳೆ ಬಂದಾಗ ಎಂತಹದ್ದೇ ವ್ಯವಸ್ಥೆ ಇದ್ದರೂ ಅಸ್ತವ್ಯಸ್ತ ಆಗುತ್ತದೆ. ಅದನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಗೃಹ ಸಚಿವ ಪರಮೇಶ್ವರ್​ ಪ್ರತಿಕ್ರಿಯಿಸಿದರು.

Minister G parameshwar Reaction On Bengaluru Rain
ಜಿ ಪರಮೇಶ್ವರ್​​ (ಈಟಿವಿ ಭಾರತ್​)

By ETV Bharat Karnataka Team

Published : Oct 16, 2024, 2:00 PM IST

ಬೆಂಗಳೂರು: ಭೂಮಿಗೆ ಬಿದ್ದ ಮಳೆ ನೀರನ್ನು ವಾಪಸ್ ಆಕಾಶಕ್ಕೇ ಕಳಿಸಲು ಆಗುವುದಿಲ್ಲ. ಅದು ಭೂಮಿ ಮೇಲೆಯೇ ಹರಿದು ಹೋಗಬೇಕು ಎಂದು ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರು ಮಳೆ ಅವಾಂತರ ಕುರಿತು ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಯಾವತ್ತಾದರೂ ಇಂಥ ಮಳೆ ನೋಡಿದೀವಾ ನಾವು?. ಅದೂ ಅಕ್ಟೋಬರ್​ನಲ್ಲಿ ಈ ತರ ಮಳೆ ಬಿದ್ದಿದ್ದು ಇಲ್ಲ. ಆದರೆ ಮಳೆ ಬರುತ್ತಿದೆ. ಇಷ್ಟು ಪ್ರಮಾಣದಲ್ಲಿ ಮಳೆ ಬಂದಾಗ ಎಂತಹದ್ದೇ ವ್ಯವಸ್ಥೆ ಇದ್ದರೂ ಅಸ್ತವ್ಯಸ್ತ ಆಗುತ್ತದೆ. ನ್ಯೂಯಾರ್ಕ್ ನಲ್ಲಿ ಆಗಲ್ವಾ, ವಾಷಿಗ್ಟಂನ್​ನಲ್ಲಿ ಆಗಲ್ವಾ, ಲಂಡನ್ ಆಗಲ್ವಾ, ಅಲ್ಲಿಯೂ ಆಗುತ್ತೆ. ಅದನ್ನು ನಿರ್ವಹಿಸುತ್ತಾ ಹೋಗಬೇಕು ಎಂದರು.

ಬೆಂಗಳೂರಲ್ಲಿನ ಮಳೆ ಅವಾಂತರ ಕುರಿತು ಗೃಹ ಸಚಿವರ ಪ್ರತಿಕ್ರಿಯೆ (ETV Bharat)

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಕೇಸ್ ವಾಪಸ್ ಪ್ರಸ್ತಾಪ ಬಂದಿಲ್ಲ: ಇಲ್ಲಿಯವರೆಗೂ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಕೇಸ್ ವಾಪಸ್ ಪಡೀತೀವಿ ಅಂತ ನಾನು ಎಲ್ಲೂ ಹೇಳಿಲ್ಲ. ಹರಿಪ್ರಸಾದ್ ಯಾವುದೋ ಕಾರಣಕ್ಕೆ ಹೇಳಿರಬಹುದು. ಅವರು ಹೇಳಿದ್ದಾರೆ ಅಂತ ನಾವು ಕೇಸ್ ವಾಪಸ್ ಪಡೆಯಲು ಆಗಲ್ಲ. ಪ್ರಸ್ತಾಪ ಬಂದಾಗ ಪರಿಶೀಲನೆ ಮಾಡುತ್ತೇವೆ. ಯಾರೂ ಪತ್ರ ಬರೆದಿಲ್ಲ, ಪ್ರಸ್ತಾವನೆ ಬಂದಿಲ್ಲ. ಹಿಂದೆ ಪತ್ರ ಬರೆದಿದ್ದರೂ, ಅದು ಅಲ್ಲಿಗೇ ನಿಂತಿದೆ. ಈಗ ಪ್ರಸ್ತಾಪ ಬಂದರೆ ಪರಿಶೀಲನೆ ಮಾಡುತ್ತೇವೆ. ಪ್ರಸ್ತಾಪ ಬಂದರೆ ಕ್ಯಾಬಿನೆಟ್ ಸಬ್ ಕಮಿಟಿ ಮುಂದಿಡುತ್ತೇವೆ. ನಂತರ ಸಂಪುಟದಲ್ಲಿ ಚರ್ಚೆ ಆಗುತ್ತದೆ. ಹುಬ್ಬಳ್ಳಿ ಕೇಸ್ ವಾಪಾಸ್​ ವಿಚಾರದಲ್ಲಿ ಕೋರ್ಟ್ ಏನ್ಮಾಡುತ್ತದೆ ನೋಡಬೇಕು ಎಂದು ತಿಳಿಸಿದರು.

ವಾಲ್ಮೀಕಿ ನಿಗಮ ಪ್ರಕರಣ ಚುನಾವಣಾ ಅಸ್ತ್ರ: ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿಯವರು ವಾಲ್ಮೀಕಿ ನಿಗಮ ಪ್ರಕರಣ ಬಗ್ಗೆ ಪ್ರಚಾರ ಮಾಡಬಹುದು ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಅಧಿಕಾರಿಗಳ ಮಟ್ಟದಲ್ಲಿ ನಡೆದ ಪ್ರಕರಣ. ಇದನ್ನೇ ನಾವು ಚುನಾವಣಾ ಪ್ರಚಾರ ವೇಳೆ ಹೇಳುತ್ತೇವೆ. ದದ್ದಲ್ ಅವರನ್ನು ವಿಚಾರಣೆಗೆ ಕರೆದಿದ್ರು. ಆದರೆ ಅವರ ಹೆಸರು ಪ್ರಕರಣದಲ್ಲಿ ಬರಲಿಲ್ಲ. ನಾಗೇಂದ್ರ ಅವರ ವಿಚಾರಣೆಯೂ ಆಗಿದೆ ಎಂದು ಗೃಹ ಸಚಿವರು ತಿಳಿಸಿದರು.

ಮುಡಾ ಪ್ರಕರಣದಲ್ಲಿ ಎ1, ಎ2 ಆರೋಪಿಗಳನ್ನು ವಿಚಾರಣೆ ಮಾಡುತ್ತಿಲ್ಲ ಎಂದು ಸ್ನೇಹಮಯಿ ಕೃಷ್ಣ ದೂರು ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿ, ಲೋಕಾಯುಕ್ತದವರ ಕಾರ್ಯವೈಖರಿ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅವರು ಅವರ ಕೆಲಸ ಮಾಡುತ್ತಿದ್ದಾರೆ. ಲೋಕಾಯುಕ್ತ ಪೊಲೀಸರಿಗೆ ಯಾವಾಗ ಯಾರನ್ನು ವಿಚಾರಣೆಗೆ ಕರೆಯಬೇಕು ಅಂತ ಗೊತ್ತಿದೆ. ಅದರಂತೆ ಅವರು ವಿಚಾರಣೆಗೆ ಕರೀತಾರೆ. ಅವರನ್ನು ಕರೆದಿಲ್ಲ ಇವರನ್ನು ಕರೆದಿಲ್ಲ ಅಂತ ನಾವು ಹೇಳುವುದಕ್ಕೆ ಆಗಲ್ಲ ಎಂದರು.

ಹರಿಯಾಣದಲ್ಲಿ ಮೋದಿ ಅವರು ಮುಡಾ ಬಗ್ಗೆ ಪ್ರಚಾರ ಮಾಡಿರಬಹುದು. ಹರಿಯಾಣದಲ್ಲಿ ಎಷ್ಟು ಜನಕ್ಕೆ ಈ ಕುರಿತು ಗೊತ್ತಿದೆ. ಅವರು ರಾಜಕೀಯ ಕಾರಣಕ್ಕೆ ಪ್ರಚಾರ ಮಾಡಿರುತ್ತಾರೆ. ಮಹಾರಾಷ್ಟ್ರದಲ್ಲೂ ಪ್ರಚಾರ ಮಾಡಿದರೆ ನಾವು ಸತ್ಯ ಏನಿದೆ ಅನ್ನೋದನ್ನು ಹೇಳ್ತೀವಿ, ಗೆದ್ದು ಬರುತ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ರಕೃತಿಗೆ ಕಡಿವಾಣ ಹಾಕಲು ಸಾಧ್ಯವೇ?, ವಿಪಕ್ಷಗಳು ರಾಜ್ಯದ ಮಾನ ತೆಗೆಯುವುದನ್ನು ನಿಲ್ಲಿಸಲಿ: ಡಿಸಿಎಂ ಶಿವಕುಮಾರ್

ABOUT THE AUTHOR

...view details