ಕರ್ನಾಟಕ

karnataka

ETV Bharat / state

ದೇಶದಲ್ಲಿ ಪೋಲಿಯೋ ನಿರ್ಮೂಲನೆಯಾಗಿರುವ ಸ್ಥಿತಿಯನ್ನು ಕಾಯ್ದುಕೊಳ್ಳುವುದು ಮುಖ್ಯ: ಸಚಿವ ದಿನೇಶ್ ಗುಂಡೂರಾವ್

ಪೋಲಿಯೋ ಲಸಿಕಾ ಅಭಿಯಾನದಲ್ಲಿ 5 ವರ್ಷದ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಸಚಿವ ದಿನೇಶ್​ ಗುಂಡೂರಾವ್​ ಮನವಿ ಮಾಡಿದ್ದಾರೆ.

minister-dinesh-gundurao-reaction-on-polio Vaccination campaign
ದೇಶದಲ್ಲಿ ಪೋಲಿಯೊ ನಿರ್ಮೂಲನೆಯಾಗಿರುವ ಸ್ಥಿತಿಯನ್ನು ಕಾಯ್ದುಕೊಳ್ಳುವುದು ಮುಖ್ಯ: ಸಚಿವ ದಿನೇಶ್ ಗುಂಡೂರಾವ್

By ETV Bharat Karnataka Team

Published : Mar 3, 2024, 6:20 PM IST

ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು:ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದನ್ನು ನಾವು ಮುಂದಿನ ದಿನಗಳಲ್ಲೂ ಕಾಯ್ದುಕೊಳ್ಳುವುದು ಮುಖ್ಯವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದ ಮಂತ್ರಿಮಾಲ್ ಬಳಿಯ ಕೋದಂಡರಾಮನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಹಾಕುವ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನಿಂದ ಮಾರ್ಚ್ 6ರ ವರೆಗೆ ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಪೋಲಿಯೋ ಲಸಿಕಾ ಅಭಿಯಾನದಲ್ಲಿ 5 ವರ್ಷದ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.‌

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರಾದ ನವೀನ್ ಭಟ್ ಮಾತನಾಡಿ, ಪೋಲಿಯೋ ವೈರಸ್ ಪಸರಿಸುವಿಕೆಯು ಇಂದಿಗೂ ಜಗತ್ತಿನಾದ್ಯಂತ ಮಕ್ಕಳನ್ನು ಬಾಧಿಸುತ್ತಿದೆ. ಇದರಲ್ಲಿ ಭಾರತದ ನೆರೆ ರಾಷ್ಟ್ರಗಳೂ ಸೇರಿರುವುದು ಭಾರತಕ್ಕೆ ಕಳವಳಕಾರಿಗಿದೆ. ಹೀಗಾಗಿ ಪೋಲಿಯೋ ನಿರ್ಮೂಲನೆ ಸ್ಥಿತಿಯನ್ನು ಭಾರತ ಕಾಯ್ದುಕೊಳ್ಳುಬೇಕಿದೆ. ಇಂಡಿಯಾ ಎಕ್ಸ್ಪರ್ಟ್ ಅಡ್ವೈಸರಿ ಗ್ರೂಪ್ ಶಿಫಾರಸ್ಸಿನ ಅನ್ವಯ 5 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ವ್ಯಾಪ್ತಿಗೊಳಪಡಿಸಿದಂತೆ ರಾಷ್ಟ್ರೀಯ ಪೋಲಿಯೋ ಲಸಿಕಾ ಅಭಿಯಾನವನ್ನು ಮಾರ್ಚ್ 3 ರಿಂದ 6 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪೋಲಿಯೊ ಲಸಿಕೆ ಹಾಕುವ ಅಭಿಯಾನ

ಮೊದಲನೇ ದಿನ ಮಾರ್ಚ್ 3 ರಂದು ಪೋಲಿಯೋ ಬೂತ್‌ಗಳಲ್ಲಿ ಹಾಗೂ ನಂತರದ 2 ರಿಂದ 3 ದಿನಗಳಲ್ಲಿ ಮನೆ- ಮನೆಗೆ ಭೇಟಿ ನೀಡುವ ಮೂಲಕ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 2 ಹನಿ ಪೋಲಿಯೋ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ವಲಸಿಗ ಸಮುದಾಯದ, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳಲ್ಲಿನ ಹಾಗೂ ನಗರ ಪ್ರದೇಶದ ಸ್ಲಂಗಳಲ್ಲಿ ವಾಸಿಸುವ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಪಿ-2 ವಿಧದ ಪೋಲಿಯೋ ಸೋಂಕು ಜಾಗತಿಕ ಮಟ್ಟದಲ್ಲಿ ನಿರ್ಮೂಲನೆಯಾಗಿದೆ.‌ ಪಿ-3ಯ ಯಾವುದೇ ಪ್ರಕರಣಗಳು ವರದಿಯಾಗಿರುವುದಿಲ್ಲ. ಇದಕ್ಕೆ ಅಧಿಕೃತವಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಕ್ಟೋಬರ್ 2019 ರಲ್ಲಿ ಪ್ರಮಾಣಪತ್ರ ಪಡೆಯಲಾಗಿದೆ. ಈಗ ಪಿ-1 ಪ್ರಕರಣಗಳು ಮಾತ್ರವೇ ವರದಿಯಾಗುತ್ತಿವೆ. ಜನವರಿ 2011 ರಲ್ಲಿ ಪಶ್ಚಿಮ ಬಂಗಳಾದಲ್ಲಿ ಕೊನೆಯ ಪೋಲಿಯೋ ಪ್ರಕರಣವು ವರದಿಯಾಗಿತ್ತು. ಇದಾದ ಮೇಲೆ ಭಾರತದಲ್ಲಿ ಇಲ್ಲಿಯವರೆವಿಗೂ ಯಾವುದೇ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ ಎಂದು ಮಾಹಿತಿ ನೀಡಿದರು.

ಪೋಲಿಯೊ ಲಸಿಕೆ ಹಾಕುವ ಅಭಿಯಾನ

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ನಿಯಮಿತವಾಗಿ ಪ್ರತಿ ಶಿಶುವಿಗೆ 5 ಓರಲ್ ಪೋಲಿಯೊ ವ್ಯಾಕ್ಸಿನ್ ಮತ್ತು 3 ಐಪಿವಿ(ಇನ್‌ಜಕ್ಟಬಲ್ ಪೋಲಿಯೋ ವ್ಯಾಕ್ಸಿನ್) ಲಸಿಕೆಗಳನ್ನು ನೀಡಲಾಗುತ್ತಿದೆ. ಯಾವುದೇ ಮಗುವು ಲಸಿಕೆಯಿಂದ ವಂಚಿತರಾಗದಂತೆ ಅಂದಾಜು 62 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಗುರಿ ಹೊಂದಲಾಗಿದೆ ಎಂದರು.

ಸುಮಾರು 33,712 ಪೋಲಿಯೊ ಬೂತ್ ಗಳನ್ನ ತೆರೆಯಲಾಗಿದ್ದು, 11,1370 ಲಸಿಕಾ ಕಾರ್ಯಕರ್ತರು ಕಾರ್ಯನಿರ್ವಹಿಸಲಿದ್ದಾರೆ. 963 ಸಂಚಾರಿ ತಂಡಗಳನ್ನ ರಚಿಸಲಾಗಿದ್ದು, 7206 ಮೇಲ್ವಿಚಾರಕರನ್ನ ನಿಯೋಜಿಸಲಾಗಿದೆ. ಈ ಹಿಂದೆ ಎಷ್ಟು ಬಾರಿ ಪೋಲಿಯೊ ಲಸಿಕೆ ಪಡೆದಿದ್ದರೂ ಸಹ ಈ ಅಭಿಯಾನದಲ್ಲಿ ಮತ್ತೆ ಲಸಿಕೆ ಹಾಕಿಸುವುದು ಅವಶ್ಯಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆರೋಗ್ಯ ಕೇಂದ್ರವನ್ನು ಭೇಟಿ ಮಾಡಿ ಅಥವಾ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು. ನಿಮ್ಮ ಹತ್ತಿರದ ಪೋಲಿಯೋ ಬೂತ್ ಅನ್ನು ಗುರುತಿಸಲು ನಿಯರ್ ವ್ಯಾಕ್ಸಿನೇಷನ್ ಸೆಂಟರ್ ಕರ್ನಾಟಕ ಎನ್ನುವ ಆಂಡ್ರಾಯ್ಡ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಆರೋಗ್ಯ ಕೇಂದ್ರದ ಆವರಣದಲ್ಲಿ ಮಕ್ಕಳಿಗೆ 2 ಹನಿ ಪಲ್ಸ್ ಪೋಲಿಯೋ ಹಾಕುವ ಮೂಲಕ ಸಚಿವ ಗುಂಡೂರಾವ್ ಚಾಲನೆ ನೀಡಿದರು. ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್, ಮುಖ್ಯ ಆರೋಗ್ಯಾಧಿಕಾರಿ ಡಾ. ಮದನಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ:ದಿವ್ಯಾಂಗರು ನಿಜವಾದ ಯೋಗಿಗಳು : ಬಸವರಾಜ ಬೊಮ್ಮಾಯಿ

ABOUT THE AUTHOR

...view details