ಬೆಳಗಾವಿ: ರಾಜ್ಯದಲ್ಲಿ ವೈದ್ಯರ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕವೇ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಇಂದು ತಿಳಿಸಿದ್ದಾರೆ.
ನಿಯಮ 69ರಡಿ ನಡೆದ ಚರ್ಚೆಗೆ ಉತ್ತರ ನೀಡಿದ ಸಚಿವರು, ರಾಜಕೀಯ ಒತ್ತಡದಿಂದ ವೈದ್ಯರ ವರ್ಗಾವಣೆಗಳಾಗುತ್ತಿವೆ. ನಾನು ಸಚಿವನಾದ ಮೇಲೆ ವರ್ಗಾವಣೆ ಮಾಡಿಲ್ಲ. ವರ್ಗಾವಣೆ ವಿಚಾರವೂ ನ್ಯಾಯಾಲಯದಲ್ಲಿದೆ. ಕಳೆದ 20-30 ವರ್ಷಗಳಿಂದಲೂ ಬೆಂಗಳೂರಿನಲ್ಲೇ ಕೆಲವರಿದ್ದು, ಅವರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು.
ಸದನದಲ್ಲಿ ಆರೋಗ್ಯ ಸಚಿವ ಗುಂಡೂರಾವ್ ಮಾತು (ETV Bharat) ಕಳೆದ 12 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಜೇಷ್ಠತಾ ಪಟ್ಟಿ ಅಂತಿಮವಾಗಿರಲಿಲ್ಲ. ಈಗ ಬಹುತೇಕ ಅಂತಿಮವಾಗಿದೆ. ಮುಂದಿನ ತಿಂಗಳು ಪ್ರಕಟಿಸಲಿದ್ದು, ಬಡ್ತಿ ನೀಡಲು ಅನುಕೂಲವಾಗುತ್ತದೆ ಎಂದರು.
108 ಆಂಬ್ಯುಲೆನ್ಸ್ಗಳಿಗೆ ಜಿಪಿಎಸ್ ಅಳವಡಿಸಿದ್ದೇವೆ. ಕಳಪೆ ಔಷಧಿ ಪೂರೈಸಿದ ಪಶ್ಚಿಮ್ ಬಂಗಾ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾ ಕೇಂದ್ರದವರೆಗೆ ಬಳಕೆದಾರರ ಶುಲ್ಕ ಹೆಚ್ಚಸಿಲ್ಲ. ಈ ಸಂಬಂಧ ಎನ್‌ಎಚ್‌ಎಂ ಯೋಜನೆಯಡಿ ಶೇ.84 ರಷ್ಟು ಸಾಧನೆಯಾಗಿದ್ದು, ಈ ವರ್ಷ ಶೇ.60ರಷ್ಟು ಅನುದಾನ ಖರ್ಚಾಗಿದೆ. ಶಾಸಕ ಸಿ.ಎನ್.ಅಶ್ವತ್ಥ ನಾರಾಯಣರ ಆರೋಪದಲ್ಲಿ ಹುರುಳಿಲ್ಲ ಎಂದರು.
ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿ ಕಾಯಂಗೆ ಅವಕಾಶವಿಲ್ಲ: ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕಾಯಂ ಮಾಡಲು ಅವಕಾಶವಿಲ್ಲ. ಆದರೆ, ಶೇ.15ರಷ್ಟು ವೇತನ ಹೆಚ್ಚಳ ಮಾಡಲಾಗಿದೆ ಎಂದು ಗುಂಡೂರಾವ್ ವಿಧಾನಸಭೆಯಲ್ಲಿ ಉಡುಪಿ ಕ್ಷೇತ್ರದ ಶಾಸಕ ಯಶ್‌ಪಾಲ್ ಸುವರ್ಣ ಅವರ ಪ್ರಶ್ನೆಗೆ ಉತ್ತರಿಸಿದರು.
ಎನ್‌ಎಚ್‌ಎಂ ಅಭಿಯಾನದ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕವಾಗಿದ್ದು, ಅಭಿಯಾನ ಮುಕ್ತಾಯವಾದರೆ ನೇಮಕಾತಿಯೂ ಮುಕ್ತಾಯವಾಗಲಿದೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್.ಶ್ರೀನಿವಾಸಚಾರಿ ವರದಿ ಆಧರಿಸಿ ಪ್ರತಿ ವರ್ಷ ಶೇ.5ರಷ್ಟು ವೇತನ ಹೆಚ್ಚಳ ಮಾಡಲಾಗುವುದು. ಎಪಿಎಲ್ ಪಡಿತರ ಚೀಟಿ ಹೊಂದಿದ್ದರೂ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ಒದಗಿಸಲಾಗಿದೆ. ಒಂದು ವೇಳೆ ಮೃತಪಟ್ಟರೆ 10 ಲಕ್ಷ ರೂ. ಸಿಗುವ ವಿಮಾ ಸೌಲಭ್ಯಕ್ಕೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗಿದೆ. ಒಂದು ಬಾರಿ ವರ್ಗಾವಣೆಗೂ ಅವಕಾಶ ಕಲ್ಪಿಸಿದ್ದು, ನೇಮಕಾತಿ ಸಂದರ್ಭದಲ್ಲಿ ಶೇ.2ರಷ್ಟು ಕೃಪಾಂಕ ನೀಡಲಾಗುವುದು. ಈ ಸಂಬಂಧ ಅತೀ ಶೀಘ್ರದಲ್ಲೇ ಆದೇಸ ಹೊರಡಿಸಲಾಗುವುದು ಎಂದು ಹೇಳಿದರು.
ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಆಯುಷ್ ವಿಭಾಗವನ್ನು ಪ್ರಾರಂಭಿಸುವ ಹೊಸ ಯೋಜನೆಯನ್ನು 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿತ್ತು. ಆದರೆ, ಅನುದಾನ ಕೊರತೆ ಇದೆ. ಜಿಲ್ಲಾಸ್ಪತ್ರೆಯ ದುರಸ್ಥಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅನುದಾನ ಬಳಕೆಯಾಗಿದೆ. ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ತಲಾ 10 ಹಾಸಿಗೆಗಳ ಸಾಮರ್ಥ್ಯವದ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಅನುದಾನದ ಅಭಾವವಿದ್ದು, ಸದ್ಯಕ್ಕೆ ಆಯುಷ್ ಆಸ್ಪತ್ರೆ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅನುದಾನ ಲಭ್ಯತೆ ಆಧರಿಸಿ ಈ ಆಸ್ಪತ್ರೆ ಒದಗಿಸುವ ಭರವಸೆ ನೀಡಿದರು.
ಇದನ್ನೂ ಓದಿ:ಕಾಂಗ್ರೆಸ್‌ನವರಿಗೆ ಅಂಬೇಡ್ಕರ್ ಫೋಟೋ ಹಿಡಿಯುವ ಯಾವ ನೈತಿಕತೆ ಇದೆ?: ಆರ್.ಅಶೋಕ್ - AMBEDKAR PHOTO