ಬೆಂಗಳೂರು: ಜಗತ್ತಿನಲ್ಲಿ ಸುಳ್ಳು ಎಲ್ಲಿದೆ ಎಂದು ಪ್ರಶ್ನೆ ಮಾಡಿದರೆ ಆ ಸುಳ್ಳು ಬಿಜೆಪಿಯವರ ಬಾಯಲ್ಲಿ ಸಿಗುತ್ತದೆ ಎಂದು ಸಚಿವ ದಿನೇಶ್ ಗಂಡೂರಾವ್ ವಾಗ್ದಾಳಿ ನಡೆಸಿದರು.
ಸರ್ಕಾರ ದೇವಸ್ಥಾನಗಳ ಹುಂಡಿಗೆ ಕನ್ನ ಹಾಕುತ್ತಿದೆ ಎಂಬ ಬಿಜೆಪಿ ಆರೋಪದ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿ, ಬಿಜೆಪಿಯವರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದರೆ ಏನು ಬೇಕಾದರೂ ಹೇಳಲು ತಯಾರಾಗಿದ್ದಾರೆ. ಒಂದು ಕೋಟಿ ರೂಪಾಯಿ ಆದಾಯ ಇರುವ ದೇವಸ್ಥಾನಗಳಿಗೆ 10% ವಂತಿಗೆ ಸಂಗ್ರಹ ಮಾಡಲು ನಿರ್ಧರಿಸಿದ್ದೇವೆ. 25 ಲಕ್ಷ ರೂ. ಇದ್ದ ಆದಾಯ ಮಿತಿಯನ್ನು ಒಂದು ಕೋಟಿಗೆ ಏರಿಕೆ ಮಾಡಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಕಳಕಳಿ, ಕಾಳಜಿ ಇದ್ದಿದ್ದರೆ, ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್, ಸದಾನಂದಗೌಡ ಸಿಎಂ ಆಗಿದ್ದರು. ಆಗ ಯಾಕೆ ಕಾನೂನು ವಾಪಸ್ ಪಡೆಯಲಿಲ್ಲ, ರದ್ದು ಮಾಡಲಿಲ್ಲ ಎಂದು ಸವಾಲು ಹಾಕಿದರು.
''ನಾವು ಸಣ್ಣ ದೇವಸ್ಥಾನಗಳಿಗೆ ಅನುಕೂಲ ಆಗಲು ಸಹಾಯ ಮಾಡಿದ್ದೇವೆ. ನಮ್ಮಿಂದ ದೇವಸ್ಥಾನಕ್ಕೆ, ಅರ್ಚಕರಿಗೆ ಅನುಕೂಲ ಆಗುತ್ತಿದೆ. ದೇವಸ್ಥಾನದ ಅಭಿವೃದ್ಧಿಗೆ ಹಣ ಬಳಕೆ ಮಾಡುತ್ತೇವೆ. ಇವರ ತಕರಾರು ಏನು? ಪ್ರತಿಯೊಂದರಲ್ಲೂ ಹಿಂದೂ ವಿರೋಧಿ, ಹಿಂದೂ ವಿರೋಧಿ ಎನ್ನುತ್ತಾರೆ, ಇವರೊಬ್ಬರೇನಾ ಹಿಂದೂಗಳು? ಸುನೀಲ್ ಕುಮಾರ್ ಉಡುಪಿಯಲ್ಲಿ ಪರಶುರಾಮರನ್ನ ಅರ್ಧಕ್ಕೆ ನಿಲ್ಲಿಸಿಬಿಟ್ಟಿದ್ದಾರೆ. ಭುಜಾನು ಇಲ್ಲ, ಸೊಂಟಾನು ಇಲ್ಲ, ಪರಶುರಾಮನಿಗೆ ಏನು ಇಲ್ಲ. ಅದರಲ್ಲಿ ಬಿಜೆಪಿಯವರು ಭ್ರಷ್ಟಾಚಾರ ಮಾಡಿದ್ದಾರೆ. ಇವರು ದೇವರ ಬಗ್ಗೆ ಮಾತಾಡುತ್ತಾರೆ. ಅರ್ಧಕ್ಕೆ ನಿಲ್ಲಿಸಿ ಅವಮಾನ ಮಾಡಿದ್ದಾರೆ. ಭೂಮಿ ಬಗ್ಗೆನೂ ಕೂಡ ಗೊಂದಲಗಳಿವೆ. ಇವರಿಗೆ ಅನುಕೂಲವಾದಾಗ ಹಿಂದುತ್ವ ಮಾತ್ರ. ದೆಹಲಿಯಲ್ಲಿ ರೈತರಿಗೆ ತೊಂದರೆಯಾಗುತ್ತಿದೆ, ಅವರು ಹಿಂದೂಗಳಲ್ವಾ? ಇವರು ಎಷ್ಟಂತ ವಿಷ ತುಂಬುವ ಪ್ರಯತ್ನ ಮಾಡುತ್ತಾರೆ? ಇದಕ್ಕೊಂದು ಇತಿಮಿತಿ ಬೇಕು'' ಎಂದು ಕಿಡಿಕಾರಿದರು.