ಮೈಸೂರು: ದಸರಾ ಪ್ರಯುಕ್ತ ನಗರದ ಜೆ.ಕೆ. ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಲಾದ ಮತ್ಸ್ಯ ಮೇಳಕ್ಕೆ ಕೃಷಿ ಸಚಿಚ ಚೆಲುವರಾಯಸ್ವಾಮಿ ಚಾಲನೆ ನೀಡಿದರು.
ಅಪರೂಪದ ಮತ್ತು ರಂಗು ರಂಗಿನ ಅಲಂಕಾರಿಕ ಮೀನುಗಳ ಪ್ರದರ್ಶನ, ಟನಲ್ ಅಕ್ವೇರಿಯಂ ಮೇಳದ ಮುಖ್ಯ ಆಕರ್ಷಣೆಯಾಗಿದೆ. ಮೇಳದಲ್ಲಿ ಗೋಲ್ಡ್ ಫಿಶ್, ಟೈಗರ್ ಬರ್ದ್, ಫೈಟರ್, ಆರೋವನ, ಫ್ಲವರ್ಹಾರ್ನ್, ಪ್ಲಾಟಿ, ವೈಟ್ ಮೊಲಿಸ್, ಗಪ್ಪಿ ಸ್ವರ್ಡ್ ಟೈಲ್, ಏಂಜಲ್ ಫಿಶ್, ಮೊಲಿಸ್, ಬರ್ಡ್ಸ್ ಸೇರಿದಂತೆ ಮುಂತಾದ ಅಲಂಕಾರಿಕ ಮೀನುಗಳು ಸಾರ್ವಜನಿಕರ ಕಣ್ಮನ ಸೆಳೆಯಿತು. ವಿವಿಧ ಜಾತಿಯ, ಬಣ್ಣದ ಮೀನುಗಳನ್ನು ನೋಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ವಿಡಿಯೋ ತೆಗೆದುಕೊಂಡು ಸಂಭ್ರಮಿಸಿದರು.
ಮತ್ಸ್ಯ ಮೇಳದಲ್ಲಿ ಕಪ್ಪೆಚಿಪ್ಪುಗಳನ್ನು ಸಂಗ್ರಹಿಸುವ ಮೂಲಕ ಕೃತಕ ಮುತ್ತುಗಳನ್ನು ಅಭಿವೃದ್ಧಿ ಪಡಿಸುವ ಸಿಹಿನೀರು ಮುತ್ತು ಉತ್ಪಾದನೆ ಹಾಗೂ ಮಣ್ಣಿನಲ್ಲಿ ಏಡಿ ಸಾಕಾಣಿಕೆ, ಅವುಗಳ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನೆಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿಕೊಡಲಾಯಿತು.
ಈ ಬಾರಿ ಮತ್ಸ್ಯ ಮೇಳದಲ್ಲಿ ಸಿಹಿ ನೀರಿನ, ಉಪ್ಪು ನೀರಿನ ಮೀನುಗಳ ಅಕ್ವೇರಿಯಂ, ಪ್ಲಾಂಟೆಡ್ ಅಕ್ವೇರಿಯಂ ಸೇರಿದಂತೆ 35ಕ್ಕೂ ಹೆಚ್ಚು ಅಕ್ವೇರಿಯಂಗಳಲ್ಲಿ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅಮೆಜಾನ್‌ನಿಂದ ಪ್ಯಾರೇಟ್ ಫಿಶ್, ಸೌತ್ ಅಮೆರಿಕದಿಂದ ಜಿಯೋ ಪ್ಯಾರಿಸ್, ಅರೋನಾ, ಸ್ಟಿಂಗ್ರೆ, ಸಿಹಿ ನೀರಿನ ಮೀನುಗಳು, ಉಪ್ಪು ನೀರಿನ ಮೀನುಗಳು, ಜಲಸಸ್ಯಗಳಿಂದ ಅಲಂಕೃತವಾಗಿರುವ ಮೀನುಗಳು, ಪೆನರೋಡಿಯಂ, ಗ್ರ್ಯಾವಿಟಿ ಫಿಶ್ ಸೇರಿದಂತೆ ನಾನಾ ತಳಿಯ ಮೀನುಗಳನ್ನು ಇಲ್ಲಿ ಮತ್ಸ್ಯ ಪ್ರಿಯರು ಕಣ್ತುಂಬಿಕೊಳ್ಳಬಹುದು.
ಮೀನು ಕೃಷಿ ಬಗ್ಗೆ ಮಾಹಿತಿ:ಮೇಳದಲ್ಲಿಮೀನುಗಾರಿಕೆ ಇಲಾಖೆಯ ನಾನಾ ಯೋಜನೆಗಳು ಹಾಗೂ ಮೀನುಗಾರಿಕೆ ಕುರಿತು ಮಾಹಿತಿ ನೀಡುವ ಮಳಿಗೆಗಳನ್ನು ತೆರೆಯಲಾಗಿದೆ. ಜಮೀನು ಇಲ್ಲದವರೂ ಜಲಾಶಯಗಳಲ್ಲಿ ಪಂಜರ ಮೀನು ಕೃಷಿ ಕೈಗೊಳ್ಳವುದರ ಪೂರ್ಣ ವಿವರಣೆ ಇಲ್ಲಿ ದೊರೆಯಲಿದೆ. ಅಕ್ವಾಫೋನಿಕ್ಸ್ ಕೃಷಿ ಸೇರಿದಂತೆ ಮೀನುಗಾರಿಕೆ ಕ್ಷೇತ್ರದ ಇತ್ತೀಚಿನ ತಾಂತ್ರಿಕತೆಗಳ ವಿವರಣೆ ನೀಡುವ ಮಳಿಗೆಗಳು ಇಲ್ಲಿವೆ.
ಅಲ್ಲದೆ, ಮೀನಿನ ಆಹಾರ ಮತ್ತು ಮೀನು ಕೃಷಿಗೆ ಬೇಕಾಗುವ ಇನ್ನಿತರ ವಸ್ತುಗಳ ವಿವರಣೆ ನೀಡುವ ಮಳಿಗೆಗೆಳನ್ನು ತೆರೆಯಲಾಗಿದೆ. ಇದಲ್ಲದೆ ಮೀನುಗಾರಿಕೆಗೆ ಪೂರಕವಾಗಿ ಪಶುಪಾಲನೆ, ಭತ್ತ ಬೆಳೆಯುವುದು, ಕೋಳಿ ಸಾಕಣೆ, ಮೀನು ಕೃಷಿಯಲ್ಲಿ ಅಳವಡಿಸಿಕೊಂಡಿರುವ ವಿಜ್ಞಾನ ಮತ್ತು ತಾಂತ್ರಿಕತೆಗಳು ಸೇರಿದಂತೆ ಸಮಗ್ರ ಮೀನು ಕೃಷಿ ಬಗ್ಗೆ ಮಾಹಿತಿಯನ್ನು ರೈತರು ಪಡೆದುಕೊಳ್ಳಬಹುದು.
ಇದನ್ನೂ ಓದಿ:ನಮ್ಮದು ಜನಸಾಮಾನ್ಯರ, ರೈತ ಪರ ಸರ್ಕಾರ: ಸಚಿವ ಎನ್. ಚಲುವರಾಯಸ್ವಾಮಿ - RAITHA DASARA