ಕರ್ನಾಟಕ

karnataka

ETV Bharat / state

ಹಾಳುಕೊಂಪೆಯಲ್ಲಿ ಚಿಗುರಿದ ಮಿನಿ ಚಿಟ್ಟೆ ಪಾರ್ಕ್‌: ಮಂಗಳೂರಿನ ಗೆಳೆಯರಿಬ್ಬರ ಕಾರ್ಯಕ್ಕೆ ಶ್ಲಾಘನೆ - MINI BUTTERFLY PARK

ಮಂಗಳಾ ಕ್ರೀಡಾಂಗಣದ ಸಮೀಪದ ಹಾಳು ಕೊಂಪೆಯನ್ನು ಚಂದದ ಚಿಟ್ಟೆ ಪಾರ್ಕ್​ ಆಗಿ ಪರಿವರ್ತಿಸಿದ ವಾಕಿಂಗ್​ ಗೆಳೆಯರಿಬ್ಬರ ಕಾರ್ಯದ ಬಗ್ಗೆ 'ಈಟಿವಿ ಭಾರತ್'​ ಮಂಗಳೂರು ಪ್ರತಿನಿಧಿ ವಿನೋದ್ ಪುದು ವಿಶೇಷ ವರದಿ ನೀಡಿದ್ದಾರೆ.

MINI BUTTERFLY PARK
ವಾಕಿಂಗ್​ ಗೆಳೆಯರ ಮಿನಿ ಚಿಟ್ಟೆ ಪಾರ್ಕ್​ (ETV Bharat)

By ETV Bharat Karnataka Team

Published : Nov 26, 2024, 11:28 AM IST

Updated : Nov 26, 2024, 2:25 PM IST

ಮಂಗಳೂರು: ಸಾಮಾನ್ಯವಾಗಿ ಬೆಳಗ್ಗೆದ್ದು ಫಿಟ್ ಆಗಲು ವಾಕಿಂಗ್ ಮಾಡುವುದನ್ನು ನಗರದಲ್ಲಿ ಹಲವರು ರೂಢಿಸಿಕೊಂಡಿರುತ್ತಾರೆ. ಹೀಗೆಯೇ ಏಳು ವರ್ಷಗಳ ಹಿಂದೆ ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿ ವಾಕಿಂಗ್ ಮಾಡುತ್ತಿದ್ದ ಗೆಳೆಯರಿಬ್ಬರು ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ.

ಮಂಗಳಾ ಕ್ರೀಡಾಂಗಣದ ಸಮೀಪದ ಬ್ಯಾಡ್ಮಿಂಟನ್ ಕೋರ್ಟ್ ಬಳಿ ವಾಕಿಂಗ್ ಮಾಡಲು ಬರುತ್ತಿದ್ದವರಿಗೆ ಕಸದ ರಾಶಿ, ಗುಜರಿ ರಾಶಿ, ಗಲೀಜುಗಳಿಂದ ಸಮಸ್ಯೆಯಾಗುತ್ತಿತ್ತು. ಇದೇ ದಾರಿಯಲ್ಲಿ ವಾಕಿಂಗ್‌ಗೆ ಬರುತ್ತಿದ್ದ ಕುಮಾರ್ ಅವರು ಈ ಕಸದ ರಾಶಿಗೆ ಮುಕ್ತಿ ನೀಡಿ ಹಾಳು ಕೊಂಪೆಯನ್ನು ಚಿಟ್ಟೆ ಪಾರ್ಕ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳಾ ಕ್ರೀಡಾಂಗಣದ ಸಮೀಪದ ಹಾಳು ಕೊಂಪೆಯನ್ನು ಚಿಟ್ಟೆ ಪಾರ್ಕ್​ ಆಗಿ ಪರಿವರ್ತಿಸಿದ ಗೆಳೆಯರಿಬ್ಬರ ಕಾರ್ಯಕ್ಕೆ ಶ್ಲಾಘನೆ (ETV Bharat)

ಕುಮಾರ್ ಅವರು ವಿಪ್ರೊ ಸಂಸ್ಥೆಯ ಮಾಜಿ ಉದ್ಯೋಗಿ. ಮೂಲತಃ ಕೇರಳದವರು. ಇವರ 'ಸುಂದರ ಮಂಗಳ' ಮಾಡುವ ಕನಸಿಗೆ ಜೊತೆಯಾದವರು ರವಿರಾಜ್ ಶೆಟ್ಟಿ. ರವಿರಾಜ್ ಶೆಟ್ಟಿ ಮಂಗಳೂರಿನ ಅಕ್ಬರ್ ಟ್ರಾವೆಲ್ಸ್ ಉದ್ಯೋಗಿ. ಮೂಲತಃ ಉಡುಪಿ ಜಿಲ್ಲೆಯವರು. ಮಂಗಳೂರಿನ ಹೊರಗಿನವರಾದ ಇವರಿಬ್ಬರು ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿಯ ಹಾಳು ಕೊಂಪೆಯನ್ನು ಅಭಿವೃದ್ಧಿಪಡಿಸಿದವರು.

ರವಿರಾಜ್ ಶೆಟ್ಟಿ ತಮ್ಮ ಊರಾದ ಹೆಬ್ರಿಯ ಸುರಪುರದಲ್ಲಿರುವ ತಮ್ಮ ತೋಟದಿಂದ ಗಿಡಗಳನ್ನು ತಂದು, ಮಳೆಗಾಲದಲ್ಲಿ ಇಬ್ಬರೂ ಸೇರಿ ಸುಮಾರು 20 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. ವಾಕಿಂಗ್ ಟ್ರ್ಯಾಕ್ ಬದಿಯಲ್ಲಿರುವ ಸುಮಾರು ಅರ್ಧ ಕಿಲೋ ಮೀಟರ್​ ಜಾಗದಲ್ಲಿ ಗಿಡಗಳನ್ನು ನೆಟ್ಟರು. ನೆಟ್ಟದ್ದು ಮಾತ್ರವಲ್ಲ, ಪ್ರತಿದಿನ ಬಂದು, ಕಸ ಕಡ್ಡಿಗಳನ್ನು ತೆಗೆದು, ನೀರು ಹಾಕಿ ಅವುಗಳನ್ನು ಆರೈಕೆ ಮಾಡಿದರು. ಪರಿಣಾಮ, ಹಾಳು ಕೊಂಪೆಯೀಗ ಸುಂದರ ಜಾಗವಾಗಿ ನಿರ್ಮಾಣವಾಗಿದೆ.

ಮಿನಿ ಚಿಟ್ಟೆ ಪಾರ್ಕ್ ನಿರ್ಮಾಣ:ಸರಕಾರಿ ಜಾಗವಾಗಿರುವ ಇದು ಚಂದವಾದ ಚಿಟ್ಟೆ ಪಾರ್ಕ್ ಆಗಿ ಪರಿವರ್ತನೆಯಾಗಿದೆ. ಸುಮಾರು 20 ಸೆಂಟ್ಸ್ ಜಾಗದಲ್ಲಿ ಇವರು ನೆಟ್ಟ ಗಿಡಗಳಲ್ಲಿ ಬಹುತೇಕ ಹೂವು, ಹಣ್ಣಿನ ಗಿಡಗಳೇ ಇವೆ. ಆ ಗಿಡಗಳಲ್ಲಿ ಈಗ ಹೂ ಬಿಟ್ಟು, ಹಣ್ಣುಗಳಾಗುತ್ತಿವೆ. ಅವುಗಳಿಗಾಗಿ ಬಗೆ ಬಗೆಯ ಬಣ್ಣದ ಬಣ್ಣದ ಚಿಟ್ಟೆಗಳು ಬರುತ್ತಿವೆ.

ಇವರ ಕಾರ್ಯವನ್ನು ನೋಡಿದ ರವಿರಾಜ್ ಎಂಬವರು ಈಟಿವಿ ಭಾರತದ ಜೊತೆಗೆ ಮಾತನಾಡಿ, "ನಾನು ಸುಮಾರು 6-7 ವರ್ಷಗಳಿಂದ ರವಿರಾಜ್ ಮತ್ತು ಕುಮಾರ್ ಅವರನ್ನು ನೋಡುತ್ತಿದ್ದೇನೆ. ಬೆಳಗ್ಗೆ 6ರಿಂದ 9ರವರೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಭಾನುವಾರದಂದು, ಸಂಜೆಯವರೆಗೆ ಕೆಲಸ ಮಾಡುತ್ತಾರೆ. ಹಿಂದೆ ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಮೈದಾನದ ಸುತ್ತಲೂ ಕಸದ ತೊಟ್ಟಿಗಳು, ಬಿಯರ್ ಬಾಟಲಿಗಳು ಇದ್ದವು. ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಈ ಪಾರ್ಕ್​ ನಿರ್ಮಾಣಕ್ಕಾಗಿ ಇಬ್ಬರು ಇಷ್ಟು ವರ್ಷಗಳು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ" ಎಂದರು.

ರವಿರಾಜ್ ಶೆಟ್ಟಿ ಮಾತನಾಡಿ, "ಏಳು ವರ್ಷಗಳಿಂದ ಇದನ್ನು ಮಾಡುತ್ತಿದ್ದೇವೆ. ಆದರೆ ನಾವು ಮಾಡುತ್ತಲೇ ಇದ್ದಂತೆ ತೋಟವಾಗಿ ಬದಲಾಗಿದೆ. ಮೊದಲು ಇದು ಖಾಲಿ ಜಾಗವಾಗಿತ್ತು. ವಾಕಿಂಗ್ ಟ್ರ್ಯಾಕ್ ಆಗಿತ್ತು, ಈಗ ಇಲ್ಲಿ ಸುತ್ತಾಡಲು ಜನ ಬರುತ್ತಿದ್ದಾರೆ. ನಾವು ಬಹಳ ಸಮಯದಿಂದ ಇದನ್ನು ಮಾಡುತ್ತಿದ್ದೇವೆ. ನಾವು ಉದ್ದೇಶಪೂರ್ವಕವಾಗಿ ಪ್ರಾರಂಭಿಸಿದ್ದಲ್ಲ. ಜೂನ್​ನಿಂದ ನವೆಂಬರ್​ವರೆಗೆ ಪಕ್ಷಿಗಳು ಬರುವ ಕಾರಣ ಈಗ ಅದು ಪಕ್ಷಿ, ಚಿಟ್ಟೆಗಳ ಉದ್ಯಾನವನವಾಗಿ ಮಾರ್ಪಟ್ಟಿದೆ" ಎಂದು ಹೇಳಿದರು.

"ನಾನು ಇಲ್ಲಿಗೆ ವಾಕಿಂಗ್ ಮಾಡಲು ಬಂದಾಗ ಇಲ್ಲಿ ಮದ್ಯದ ಬಾಟಲಿಗಳು ಮತ್ತು ಸಿರಿಂಜ್​ಗಳು ತುಂಬಿದ್ದವು. ಅದನ್ನು ಗಮನಿಸಿದ ನಾವು ಈ ಜಾಗವನ್ನು ಸ್ವಚ್ಛಗೊಳಿಸಬೇಕು ಎಂದುಕೊಂಡೆವು. ನಾನು ಸ್ವಚ್ಛಗೊಳಿಸಲು ಪ್ರಾರಂಭಿಸಿದಾಗ ರವಿರಾಜ್ ಶೆಟ್ಟಿ ಸೇರಿದರು. ಎಲ್ಲಾ ಅವಶೇಷಗಳನ್ನು ತೆಗೆದು ರಾಶಿ ಹಾಕಿದಾಗ ಸುಮಾರು ಮೂರರಿಂದ ಐದು ಟನ್​ಗಳಷ್ಟು ಕಸ ಸಿಕ್ಕಿತ್ತು. ಕ್ರೋಟಾನ್‌ಗಳು ಮತ್ತು ಹಣ್ಣಿನ ಸಸ್ಯಗಳು ಹಾಕಿದ ಮೇಲೆ ಇಲ್ಲಿ ಸಾಕಷ್ಟು ಚಿಟ್ಟೆಗಳು ಬರತೊಡಗಿದವು. ಇಲ್ಲಿ ಕೆಲಸ ಮಾಡುವ ಕೆಲಸ ನಮಗೆ ತುಂಬಾ ಖುಷಿ ಕೊಡುತ್ತದೆ. ನಾವು ವರ್ಕೌಟ್ ಮಾಡಲು ಯಾವುದೇ ಜಿಮ್‌ಗೆ ಹೋಗಬೇಕಾಗಿಲ್ಲ. ನಾವು ತುಂಬಾ ಸಂತೋಷವಾಗಿದ್ದೇವೆ. ಮತ್ತು ನಮ್ಮ ಕುಟುಂಬದಿಂದ ನಮಗೆ ಸಂಪೂರ್ಣ ಬೆಂಬಲವಿದೆ" ಎನ್ನುತ್ತಾರೆ ಕುಮಾರ್​.

ಇದನ್ನೂ ಓದಿ:1 ಎಕರೆ, 4 ಲಕ್ಷ ರೂ. ಲಾಭ: ತಂಗಿ ಮದುವೆಗೆ ಆಸರೆಯಾದ ಕ್ಯಾಬೇಜ್: ಬೆಳಗಾವಿ ಯುವ ರೈತನ ಕೃಷಿ ಸಾಧನೆ

Last Updated : Nov 26, 2024, 2:25 PM IST

ABOUT THE AUTHOR

...view details