ಕರ್ನಾಟಕ

karnataka

ETV Bharat / state

ಕರ್ನಾಟಕದಲ್ಲಿ ಜಡಿಮಳೆ ಮುನ್ಸೂಚನೆ: 5 ದಿನ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - Karnataka Rain Alert

ಕರ್ನಾಟಕದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ. ಹವಾಮಾನ ಇಲಾಖೆ ಮುಂದಿನ ಐದು ದಿನಗಳ ಕಾಲ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

YELLOW ALERT
ಕರ್ನಾಟಕದಲ್ಲಿ ಮಳೆ (IANS)

By ETV Bharat Karnataka Team

Published : Jun 19, 2024, 6:12 PM IST

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿದೆ. ಮುಂದಿನ ಐದು ದಿನಗಳಿಗೆ ಅನ್ವಯವಾಗುವಂತೆ ಹವಾಮಾನ ಇಲಾಖೆಯು ಭಾರೀ ಮಳೆ ಬೀಳುವ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಜೂನ್ 21 ಮತ್ತು 22ರಂದು ಆರೆಂಜ್ ಅಲರ್ಟ್ ಮತ್ತು 23ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬೀದರ್, ಧಾರವಾಡ ಜಿಲ್ಲೆಗಳಿಗೆ ಜೂನ್ 22ರಂದು, ಹಾವೇರಿ ಜಿಲ್ಲೆಗೆ ಜೂನ್ 22 ಮತ್ತು 23ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರಕ್ಕೆ 22ರಂದು ಯೆಲ್ಲೋ ಮತ್ತು 23ರಂದು ಆರೆಂಜ್ ಅಲರ್ಟ್, ಚಿಕ್ಕಮಗಳೂರಿಗೆ 21ರಂದು ಯೆಲ್ಲೋ, 22ರಂದು ಆರೆಂಜ್ ಮತ್ತು 23ಕ್ಕೆ ರೆಡ್ ಅಲರ್ಟ್ ಕೊಡಲಾಗಿದೆ. ಚಿತ್ರದುರ್ಗ ಜಿಲ್ಲೆಗೆ 22 ಮತ್ತು 23ರಂದು ಯೆಲ್ಲೋ ಅಲರ್ಟ್, ದಾವಣಗೆರೆಗೆ 22ರಂದು ಯೆಲ್ಲೋ ಮತ್ತು 23 ರಂದು ಆರೆಂಜ್, ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ಕ್ರಮವಾಗಿ 21, 22, 23ರಂದು ಯೆಲ್ಲೋ, ಆರೆಂಜ್ ಮತ್ತು ರೆಡ್ ಅಲರ್ಟ್ ನೀಡಲಾಗಿದೆ.

ಮಂಡ್ಯದಲ್ಲಿ 22 ಮತ್ತು 23ರಂದು ಆರೆಂಜ್, ರಾಮನಗರ ಮತ್ತು ತುಮಕೂರಿನಲ್ಲಿ ಅದೇ ಎರಡು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮೈಸೂರಿನಲ್ಲಿ 22ರಂದು ಯೆಲ್ಲೋ ಮತ್ತು ಆರೆಂಜ್ ಹಾಗೂ ಶಿವಮೊಗ್ಗದಲ್ಲಿ 21ರಂದು ಯೆಲ್ಲೋ, 22ರಂದು ಆರೆಂಜ್, 23ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಗುಡುಗುಸಹಿತ ಮಳೆಯಾಗಲಿದೆ. ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗುಸಹಿತ 30ರಿಂದ 40 ಕಿಲೋಮೀಟರ್ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.

ಬೆಂಗಳೂರು ನಗರದಲ್ಲಿ ಮಳೆ:ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಗುಡುಗುಸಹಿತ ಮಳೆಯಾಗುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಮೇಲ್ಮೈ ಗಾಳಿಯು ಪ್ರಬಲವಾಗಿರುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಡಿಗ್ರಿ ಮತ್ತು 21 ಡಿಗ್ರಿ ಇರಬಹುದು ಎಂದು ಇಲಾಖೆ ಹೇಳಿದೆ.

ನಿನ್ನೆಯ ಮಳೆಯ ಪ್ರಮಾಣ:ಮಂಗಳವಾರದಾವಣಗೆರೆ,ಚಿತ್ರದುರ್ಗ ಜಿಲ್ಲೆಯ ಪರಶುರಾಂಪುರದಲ್ಲಿ 5, ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ 4, ಹೊನ್ನಾವರದಲ್ಲಿ 3, ಬೆಳಗಾವಿ ಜಿಲ್ಲೆಯ ಲೋಂಡಾ, ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಯ ಹೆಚ್​ಡಿ ಕೋಟೆಯಲ್ಲಿ 3 ಸೆ.ಮೀ ಮಳೆಯಾಗಿದೆ.

ನೈಋತ್ಯ ಮುಂಗಾರು ದಕ್ಷಿಣ ಒಳನಾಡಿನಲ್ಲಿ ಸಾಧಾರಣವಾಗಿದ್ದು ಮತ್ತು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿಯ ಹಲವೆಡೆಗಳಲ್ಲಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುತ್ತಿದೆ. ಬಲವಾದ ಗಾಳಿಯ ಒಮ್ಮುಖದ ಕಾರಣದಿಂದಾಗಿ, ಪಶ್ಚಿಮ ಘಟ್ಟಗಳ ಕರಾವಳಿ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಜೂನ್ 23ರಂದು ವಿಪರೀತ, ಭಾರೀ ಮತ್ತು ಅತಿ ಭಾರೀ ಮಳೆಯಾಗಲಿದೆ. ಬಲವಾದ ಗಾಳಿ ಮತ್ತು ಭೂಕುಸಿತದ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಾಜವೇಲ್ ಮಾಣಿಕ್ಕಂ ಹೇಳಿದ್ದಾರೆ.

ಇದನ್ನೂ ಓದಿ:ಅಂದಾಜಿಸಿದಂತೆ ಬಾರದ ಮಾನ್ಸೂನ್​​: ದೇಶದಲ್ಲಿ ಶೇ 20 ರಷ್ಟು ಮಳೆ ಕೊರತೆ: IMD ಮಹತ್ವದ ಮಾಹಿತಿ - RECEIVED 20PERCENT LESS RAINFALL

ABOUT THE AUTHOR

...view details